The Federal Interview| ಮಂತ್ರಿಗಳು ಮಾಲೀಕರಲ್ಲ...ಮೊದಲು ರಸ್ತೆಗುಂಡಿ ಮುಚ್ಚಿ! ಸರ್ಕಾರಕ್ಕೆ ಮೋಹನದಾಸ್ ಪೈ ಸವಾಲು

ಬೆಂಗಳೂರು ರಸ್ತೆ ಗುಂಡಿಗಳ ಸಮಸ್ಯೆ, ಟ್ರಾಪಿಕ್ ಸಮಸ್ಯೆ ಬಗ್ಗೆ ಸದಾ ದನಿ ಎತ್ತುತ್ತಿರುವ ಉದ್ಯಮಿ ಟಿ.ವಿ.‌ಮೋಹನ್ ದಾಸ್ ಪೈ ಜತೆ ದ ಫೆಡರಲ್ ಕರ್ನಾಟಕ ವಿಶೇಷ ಸಂದರ್ಶನ ನಡೆಸಿದೆ.

Update: 2025-10-16 00:30 GMT
Click the Play button to listen to article

ಬೆಂಗಳೂರು ರಸ್ತೆ ಗುಂಡಿಗಳ ಸಮಸ್ಯೆ, ಟ್ರಾಪಿಕ್ ಸಮಸ್ಯೆ ಬಗ್ಗೆ ಸದಾ ದನಿ ಎತ್ತುತ್ತಿರುವ ಉದ್ಯಮಿ ಟಿ.ವಿ.‌ಮೋಹನ್ ದಾಸ್ ಪೈ ಜತೆ ದ ಫೆಡರಲ್ ಕರ್ನಾಟಕ ವಿಶೇಷ ಸಂದರ್ಶನ ನಡೆಸಿದೆ. ಸಂದರ್ಶನದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ, ಸಂಚಾರದಟ್ಟಣೆಗೆ ಪರಿಹಾರದ ಬಗ್ಗೆ ಸಲಹೆ ನೀಡಿದ್ದಾರೆ. ಉಚಿತ ಗ್ಯಾರಂಟಿ ಯೋಜನೆಗಳು, ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬಗ್ಗೆಯೂ ಸಹಾ ಮಾತನಾಡಿದ್ಧಾರೆ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಇದೆ,   ಗುಂಡಿಗಳಿರುವುದು ಸುಳ್ಳಲ್ಲ.  ಗುಂಡಿ ಮುಚ್ಚಿದ್ದೇವೆ ಎಂದು ಸರ್ಕಾರ ಹೇಳಿದರೂ ಮುಚ್ಚಿದ ರಸ್ತೆ ಗುಂಡಿಗಳು ಕಿತ್ತು ಬರುತ್ತಿವೆ.   ಹಾಗಂತ  ಈ ಬಗ್ಗೆ ಪ್ರಶ್ನೆ ಮಾಡಿದರೆ ಸರ್ಕಾರ ಬೆದರಿಸಬಾರದು ಎಂದು ಐಟಿ ದಿಗ್ಗಜ ಹಾಗೂ ಉದ್ಯಮಿ ಟಿ.ವಿ. ಮೋಹನದಾಸ್‌ ಪೈ ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಬೆಂಗಳೂರು ರಸ್ತೆ ಗುಂಡಿಗಳು ಉದ್ಯಮಗಳ ಅಭಿವೃದ್ಧಿಗೆ ಸವಾಲಾಗಿರುವ ಬಗ್ಗೆ ತಾವು ದನಿಯೆತ್ತುತ್ತಿರುವ ಬಗ್ಗೆ ಕಾರಣ ಸಹಿತ ವಿವರಣೆ ನೀಡಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್‌ ಪ್ರಮುಖವಾಗಿ ಟೀಕೆ ಮಾಡಿರುವ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿರುವ ಪೈ ʼಪ್ರಜಾಪ್ರಭುತ್ವದಲ್ಲಿ ಯಾರೂ ಮಾಲಿಕರಲ್ಲ," ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

 ಈ ಬಗ್ಗೆ ಪ್ರಸ್ತಾಪಿಸಿದ ಪೈ, "ನಾನು, ಕಿರಣ್ ಮಜುಂದಾರ್ ಷಾ ಟ್ವೀಟ್ ಮಾಡಿ ಬೆಂಗಳೂರಿನ ಸಮಸ್ಯೆ ಬಗ್ಗೆ ಪ್ರಶ್ನಿಸಿದ್ದೇವೆ. ಕಳೆದ ಎರಡು ತಿಂಗಳಿಂದ ಸರ್ಕಾರ‌ ಸಮಸ್ಯೆಗಳ ಕಡೆ ಗಮನಹರಿಸಿ ಒಳ್ಳೆಯ ಕೆಲಸಮಾಡುತ್ತಿದೆ. ಆದರೆ ಅದು ಕಾರ್ಯರೂಪಕ್ಕೆ ಬರಬೇಕು. ಸಮಸ್ಯೆಗಳ ಬಗ್ಗೆ ಪ್ರಶ್ನಿಸುವವರನ್ನು ಬೆದರಿಸಬಾರದು," ಎಂದು ದ ಫೆಡರಲ್‌ ಕರ್ನಾಟಕ್ಕೆ ಹೇಳಿದ್ದಾರೆ.

"ಸಚಿವರು ಮಾಲೀಕರಲ್ಲ.‌ ಜನ ಪ್ರತಿನಿಧಿಗಳಷ್ಟೇ. ಪ್ರಜೆಗಳೇ ಮತಹಾಕಿ ಗೆಲ್ಲಿಸಿರುವುದು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಜನ ಸಮಸ್ಯೆ ಪರಿಹಾರ ಆಗದಿದ್ದಾಗ ಕೋಪಗೊಳ್ಳುತ್ತಾರೆ. ಜನಪ್ರತಿನಿಧಿಗಳಿಗೆ ಸಂಯಮ ಇರಬೇಕು," ಎಂದು ಅಭಿಪ್ರಾಯಪಟ್ಟಿದ್ದಾರೆ.

"ಉದ್ಯಮಿಗಳಿಗೆ ಬೆಂಗಳೂರು , ಸರ್ಕಾರ ಎಲ್ಲಾ ನೀಡಿದೆ, ಟೀಕಿಸಬಾರದು" ಎಂಬ ಸಚಿವರ ಹೇಳಿಕೆಗೆ ಮೋಹನ್ ದಾಸ್ ಪೈ ತಿರುಗೇಟು. ನೀಡಿದ್ದಾರೆ. "ಏನು ನೀಡಿದೆ, ಏನು ಸಬ್ಸಿಡಿ ನೀಡಿದ್ದಾರೆ ಅದನ್ನು ಹೇಳಲಿ. ಜಮೀನು ಕೆಎಐಡಿಬಿಯಿಂದ ಕಾನೂನು ಪ್ರಕಾರ ಕೊಂಡುಕೊಂಡಿದ್ದೇವೆ. ಬೆಂಗಳೂರಿಗೂ ನಾವು ಕೊಡುಗೆ ನೀಡಿದ್ದೇವೆ. ಬೆಂಗಳೂರು ಬೆಳದರೆ ಕರ್ನಾಟಕ ಬೆಳೆಯುತ್ತದೆ," ಎಂದು ನೇರವಾಗಿ ಉತ್ತರಿಸಿದ್ದಾರೆ. "ಎಷ್ಟು ಕಂಪೆನಿಗಳು ವಿಸ್ತರಣೆ ಮಾಡಿದೆ. ಎಲ್ಲಿ ವಿಸ್ತರಣೆ ಮಾಡಿದೆ ಎನ್ನುವುದನ್ನು ನೋಡಲಿ," ಎಂದೂ ಸವಾಲು ಹಾಕಿದರು.

ಅಭಿವೃದ್ಧಿ ಆಗದಿರುವುದಕ್ಕೆ ಗ್ಯಾರಂಟಿ ಕಾರಣ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದರುವುದು ಕೊರತೆ ಬಜೆಟ್ ಆಗಿದೆ. ಉಚಿತ ಗ್ಯಾರಂಟಿಗಳಿಗೆ 60 ಸಾವಿರಕೋಟಿ ಖರ್ಚಾಗುತ್ತಿದೆ ಇಷ್ಟೊಂದು ಹಣ ಮೀಸಲಿಡಬೇಕಾ? ನಿಜವಾಗಿ ಯಾರಿಗೆ ಬೇಕು ಗ್ಯಾರಂಟಿ ಯೋಜನೆ? ಯೋಚನೆ ಮಾಡಿ. 20 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ಖರ್ಚುಮಾಡಿ ಉಳಿದ ಹಣ ಶಿಕ್ಷಣ ಆರೋಗ್ಯ, ಮೂಲಭೂತ ಸೌಲಭ್ಯಗಳಿಗೆ ಖರ್ಚುಮಾಡಿ," ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

"ನಿರುದ್ಯೋಗಿಗಳಿಗೆ 3 ಸಾವಿರ  ರೂ. ನೀಡಲಾಗುತ್ತಿದೆ. ಎಷ್ಟು ದಿನ ನೀಡಲಾಗುತ್ತದೆ? ಅದು ಸಾಲುತ್ತಾ ಅದಕ್ಕಿಂತ ಬದಲಿಗೆ. ಒಳ್ಳೆ‌ಶಿಕ್ಷಣ ನೀಡಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕು. ಯುವಕರಿಗೆ ಉದ್ಯೋಗ ನೀಡಬೇಕು," ಎಂದು ಪೈ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಒಳ್ಳೆಯ ರಾಜಕಾರಣಿ

"ಸಿದ್ದರಾಮಯ್ಯ ಅನುಭವಿ ರಾಜಕಾರಣಿ, ತುಂಬಾ ಒಳ್ಳೆಯವರು. ಡಿ.ಕೆ.ಶಿ ಸಹಾ ಒಳ್ಳೆಯ ರಾಜಕಾರಣಿ.  ಆದರೆ ಜನರ ಕೆಲಸಗಳಾಗಬೇಕು. ರಸ್ತೆ ಗುಂಡಿಗಳು ಮುಚ್ಚಿದಾಗ ಅದನ್ನು ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ನೀಡಿ," ಎಂದು ಮೋಹನದಾಸ್‌ ಪೈ  ಸರ್ಕಾರಕ್ಕೆ ಸಲಹೆ ನೀಡಿದರು.

ಸಂಚಾರ ದಟ್ಟಣೆಯೇ ಸಮಸ್ಯೆ

"ಬೆಂಗಳೂರಿನ ಔಟರ್ ರಿಂಗ್ ರೋಡ್(ಓಆರ್‌ಆರ್‌)ನಲ್ಲಿ ಗಂಟೆ ಗಟ್ಟಲೆ ಟ್ರಾಪಿಕ್ ಜಾಂ ಆಗುತ್ತದೆ.‌ ಜನ ಟ್ರಾಪಿಕ್ ‌ನಲ್ಲೇ ಕಾಲಕಳೆಯುವಂತಾಗಿದೆ. ಟ್ರಾಪಿಕ್ ಸಮಸ್ಯೆ ಬಗ್ಗೆ ಈಗಿನ ಡಿಜಿಪಿ ಡಾ. ಎಂ.ಎ.‌ಸಲೀಂ ಬಳಿ ಮಾತನಾಡಿದೆ. ಅವರು ಒಳ್ಳೆಯ ಅಧಿಕಾರಿ ಈ ಹಿಂದೆ ಟ್ರಾಪಿಕ್ ಸಮಸ್ಯೆ ಬಗ್ಗೆ ಬಹಳ ನಿರ್ವಹಣೆ ಮಾಡಿ ಉತ್ತಮ‌ಕಾರ್ಯ ಮಾಡಿದ್ದರು<ʼ ಎಂದು ಪೈ ಸಂಚಾರ ದಟ್ಟಣೆ ಸಮಸ್ಯೆ ಮತ್ತು ಅದರ ಬಗ್ಗೆ ತಾವು ಸ್ಪಂದಿಸಿರುವ ಬಗ್ಗೆ ವಿವರಿಸಿದ್ದಾರೆ.

ವಿಶಾಖಪಟ್ಟಣಕ್ಕೆ ಸಂದಿರುವ ಗೂಗಲ್‌ ಏಐ

ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆಯಾದ ʼಗೂಗಲ್ʼ ತನ್ನ ಏಐ (ಕೃತಕ ಬುದ್ದಿಮತ್ತೆ) ಹಬ್‌ ಸಿಟಿ ಸ್ಥಾಪನೆಗೆ ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆಯೂ ಮೋಹನದಾಸ್‌ ಪೈ ತಮ್ಮ ಅಭಿಪ್ರಾಯವನ್ನು ದ ಫೆಡರಲ್‌ ಕರ್ನಾಟಕದ ಜತೆ ಹಂಚಿಕೊಂಡಿದ್ದಾರೆ.

"ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಬಹಳ ಮುನ್ನಡೆ ಸಾಧಿಸಿದೆ. ಗೂಗಲ್‌ ಎಐ ಸಿಟಿ ಹಬ್‌ ಕೈ ತಪ್ಪಿರುವುದು ರಾಜ್ಯಕ್ಕಾದ ದೊಡ್ಡ ನಷ್ಟ, ವಿಶಾಖಪಟ್ಟಣಂನಲ್ಲಿ ಎಐ ಹಬ್‌ ಸಿಟಿ ನಿರ್ಮಾಣವಾದರೆ ಬೆಂಗಳೂರಿನ ಡೇಟಾ ಸೆಂಟರ್‌ ಕೂಡ ಅಲ್ಲಿಗೆ ಸ್ಥಳಾಂತರವಾಗಲಿದೆ," ಎಂದು ಮೋಹನ್‌ ದಾಸ್‌ ಪೈ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗೂಗಲ್‌ ಸಂಸ್ಥೆಯ ಜತೆ ಪೂರಕವಾಗಿ ಕಾರ್ಯ ನಿರ್ವಹಿಸುವ ಸಂಸ್ಥೆಗಳು ಕೂಡ ವಲಸೆ ಹೋಗುವ ಭೀತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಟಿ.ವಿ. ಮೋಹನದಾಸ್‌ ಪೈ ಅವರ ದ ಫೆಡರಲ್‌ ಕರ್ನಾಟಕ್ಕೆ ನೀಡಿದ ಸಂದರ್ಶನದ ಪೂರ್ಣ ವಿವರ ಈ ಕೆಳಗಿನ ಯೂಟ್ಯೂಬ್‌ ಲಿಂಕ್‌ನಲ್ಲಿದೆ.

Full View
Tags:    

Similar News