ದಲಿತ ಮಹಿಳೆ ಕೊಲೆ ಪ್ರಕರಣ: ತುಮಕೂರಿನ 21 ಮಂದಿಗೆ ಜೀವಾವಧಿ ಶಿಕ್ಷೆ ಘೋಷಣೆ

Update: 2024-11-21 13:31 GMT

ತುಮಕೂರು ಜಿಲ್ಲೆಯ ಗೋಪಾಲಪುರ ಗ್ರಾಮದ ದಲಿತ ಮಹಿಳೆ ಕೊಲೆ ಪ್ರಕರಣದ 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

2010ರ ಜೂನ್ 28ರಂದು ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದ ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆಯನ್ನು ಸವರ್ಣೀಯರು ಕಲ್ಲು ಚಪ್ಪಡಿ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. ಆ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ 27 ಮಂದಿಯ ವಿರುದ್ಧ ಕೊಲೆ ಮತ್ತು ಜಾತಿನಿಂದನೆ ಪ್ರಕರಣ ದಾಖಲಾಗಿತ್ತು.

ಘಟನೆ ನಡೆದು 14 ವರ್ಷಗಳ ಬಳಿಕ ಗುರುವಾರ ತುಮಕೂರು ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದು, 21 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 13,500 ರೂ ದಂಡ ವಿಧಿಸಿ ಆದೇಶಿಸಲಾಗಿದೆ.

ಕೃತ್ಯ ಎಸಗಿದ 27 ಮಂದಿ ಸವರ್ಣೀಯರ ಪೈಕಿ 6 ಜನ ಮೃತಪಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಸದ್ಯ 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 21 ಜನರಲ್ಲಿ ಇಬ್ಬರು ಮಹಿಳೆಯರಿದ್ದು, ಉಳಿದ 19 ಮಂದಿ ಪುರುಷರು.

ಪ್ರಕರಣ ವರದಿಯಾದಾಗ ಡಿವೈಎಸ್ ಪಿಯಾಗಿದ್ದ ಶಿವರುದ್ರಸ್ವಾಮಿ ಅವರು ಪ್ರಕರಣದ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ತುಮಕೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಧೀಶ ನಾಗಿರೆಡ್ಡಿ ಅವರು ಗುರುವಾರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

Tags:    

Similar News