CM SEAT RACE | ಮುಖ್ಯಮಂತ್ರಿ ಸ್ಥಾನಕ್ಕೆ ಹಗ್ಗಜಗ್ಗಾಟ: ವಿಜಯೇಂದ್ರ

ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿರುವ ಕಾರಣ ಸಿಎಂ ಅವರು ನಿಶ್ಚಿತವಾಗಿ ರಾಜೀನಾಮೆ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Update: 2024-09-10 13:55 GMT
ಬಿ.ವೈ.ವಿಜಯೇಂದ್ರ
Click the Play button to listen to article

ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿರುವ ಕಾರಣ ಸಿಎಂ ಅವರು ನಿಶ್ಚಿತವಾಗಿ ರಾಜೀನಾಮೆ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ವರಿಷ್ಠರ ಭೇಟಿಗಾಗಿ ದೆಹಲಿಗೆ ತೆರಳುತ್ತಿದ್ದ ಅವರು, ಮಂಗಳವಾರ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನ ಇಲ್ಲ. ದಿನ ಬೆಳಗಾದರೆ, ನಾನೂ ಮುಖ್ಯಮಂತ್ರಿ ಆಗಬೇಕು ನನಗೂ ಆಸೆ ಇದೆ, ನಾನೇನೂ ಸನ್ಯಾಸಿ ಅಲ್ಲ ಎಂದು ಅನೇಕ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಎಂ.ಬಿ.ಪಾಟೀಲ್, ಬಸವರಾಜ ರಾಯರೆಡ್ಡಿ, ಆರ್.ವಿ.ದೇಶಪಾಂಡೆ ಮೊದಲಾದವರು ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಇಂಥ ಹೇಳಿಕೆ ನಿಲ್ಲಿಸಲು ಸೂಚಿಸುವಂತೆ ಕಾಂಗ್ರೆಸ್ ಮುಖಂಡರು ಕೇಂದ್ರದ ಕಾಂಗ್ರೆಸ್ ಹೈಕಮಾಂಡಿಗೆ ಪತ್ರ ಬರೆದಿದ್ದಾರೆ. ಇದೆಲ್ಲಾ ಏನು ತೋರಿಸುತ್ತದೆ? ಎಂದು ವಿವರಿಸಿದರು.

ಕಾಂಗ್ರೆಸ್ ಹೈಕಮಾಂಡಿನ ಆಶೀರ್ವಾದದಿಂದಲೇ ಕಾಂಗ್ರೆಸ್ಸಿನ ಹಿರಿಯ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ಹಗ್ಗಜಗ್ಗಾಟ ಶುರುವಾಗಿದೆ. ಯಾವುದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ನುಡಿದರು.

ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದ ಹೈಕೋರ್ಟಿನಲ್ಲೂ ವಾದ- ಪ್ರತಿವಾದ ನಡೆಯುತ್ತಿದೆ. ಮುಖ್ಯಮಂತ್ರಿಗಳು ಹಿಂದೆ ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿಲ್ಲ ಎಂದಿದ್ದರು. ಆದರೆ, ಸದನದಲ್ಲಿ ಹಗರಣ ಆದುದನ್ನು ಒಪ್ಪಿಕೊಂಡಿದ್ದಾರೆ. ನಂತರ ಮುಡಾ ಹಗರಣ ನಡೆದಿದೆ. ಆದರೆ, ಮುಖ್ಯಮಂತ್ರಿಗಳು ಮುಡಾ ಹಗರಣ ನಡೆದೇ ಇಲ್ಲ ಎಂದು ಭಂಡ ವಾದ ಮಾಡುತ್ತಿದ್ದರು. ಹಿಂದಿನ ಮುಡಾ ಕಮೀಷನರನ್ನು ಅಮಾನತು ಮಾಡಿದ್ದು, ಮೇಲ್ನೋಟಕ್ಕೇ ಸ್ವತಃ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು ಮುಡಾ ಹಗರಣ ಆಗಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದು ವಿಶ್ಲೇಷಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರ ರಾಜ್ಯಕ್ಕೆ ಮಾರಕ. ಇಂಥ ಸರ್ಕಾರ ಕಿತ್ತೊಗೆಯುವುದು ನಮ್ಮ ದೃಢಸಂಕಲ್ಪ ಎಂದರು.

ಮಂಗಳವಾರ ಸಂಜೆ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ, ಸಂತೋಷ್ ಅವರನ್ನು ಭೇಟಿ ಮಾಡಲಿದ್ದೇನೆ. ಕರ್ನಾಟಕ ರಾಜ್ಯದ ಜೊತೆಗೆ ಇತರ ರಾಜ್ಯಗಳ ಪ್ರಮುಖರ ಸಭೆಯೂ ಇದೆ. ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ಸಿನ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನೂ ಅವರು ನೀಡಲಿದ್ದಾರೆ ಎಂದು ತಿಳಿಸಿದರು.

Tags:    

Similar News