ಸಾರಿಗೆ ಮುಷ್ಕರ: ಆಟೋ ಚಾಲಕರಿಂದ ದುಪ್ಪಟ್ಟು ದರ ವಸೂಲಿ
ಸಾರಿಗೆ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ.;
ಸಾಂದರ್ಭಿಕ ಚಿತ್ರ
ರಾಜ್ಯದಾದ್ಯಂತ ಪ್ರಯಾಣಿಕರಿಗೆ ಸಾರಿಗೆ ಮುಷ್ಕರದ ಬಿಸಿ ತಟ್ಟಿದ್ದು, ಇದೇ ಅವಕಾಶವನ್ನು ಬಂಡವಾಳ ಮಾಡಿಕೊಂಡಿರುವ ಆಟೊ ಚಾಲಕರು ದುಪ್ಪಟ್ಟು ದರ ವಸೂಲಿಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಬೆಂಗಳೂರಿನಲ್ಲಿ ಈಗಾಗಲೇ ಆಟೊ ದರ ಏರಿಕೆಯಾಗಿದೆ. ಮಂಗಳವಾರ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರದಾಟ ಗಮನಿಸಿದ ಆಟೊ ಚಾಲಕರು, ಬೇಕಾಬಿಟ್ಟಿ ದರ ಹೇಳುತ್ತಿರುವುದರಿಂದ ಪ್ರಯಾಣಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.
ಕಡಿಮೆ ದೂರದ ಪ್ರದೇಶಗಳಿಗೂ 300 ರೂ, 400 ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಮೆಜೆಸ್ಟಿಕ್, ಯಶವಂತಪುರ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಆಟೊ ಚಾಲಕರು ಹೆಚ್ಚು ಪ್ರಯಾಣ ದರ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ಆಟೊ ರಿಕ್ಷಾಗಳಿಗೆ ಹೊಸ ಪ್ರಯಾಣ ದರ ನಿಗದಿಪಡಿಸಲಾಗಿದೆ. ಕನಿಷ್ಠ ದರವನ್ನು 30 ರೂ.ರಿಂದ 36 ರೂ.ಗೆ ಹೆಚ್ಚಿಸಲಾಗಿದೆ (ಮೊದಲ 2 ಕಿ.ಮೀ.ಗೆ). ನಂತರದ ಪ್ರತಿ ಕಿಲೋಮೀಟರ್‌ಗೆ ದರ 15 ರೂ.ರಿಂದ 18 ರೂಗೆ ಏರಿಕೆಯಾಗಿದೆ. ಆದರೆ ಆಟೋ ಚಾಲಕರು ಇದ್ಯಾವುದನ್ನೂ ಪಾಲಿಸದೇ ದುಪ್ಪಟ್ಟ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ರಾಜ್ಯದ ಸಾರಿಗೆ ಘಟಕಗಳ ಸಿಬ್ಬಂದಿ, 38 ತಿಂಗಳ ವೇತನ ಬಾಕಿ, ವೇತನ ಪರಿಷ್ಕರಣೆ, ಮತ್ತು 2021ರ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿಗಾಗಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಿದ್ದು, ವಿಶೇಷವಾಗಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯುವ ಮಹಿಳೆಯರಿಗೆ ತೊಂದರೆಯಾಗಿದೆ.