KSRTC | ಸಾರಿಗೆ ನಿಗಮಗಳಿಗೆ 5,200 ಕೋಟಿ ರೂ.ನಷ್ಟ 'ಗ್ಯಾರಂಟಿʼ
ಇಂಧನ ಬೆಲೆ ಹೆಚ್ಚಳ, ಸಿಬ್ಬಂದಿ ನೇಮಕಾತಿ ಹಾಗೂ ವಾಹನ ಬಿಡಿಭಾಗಗಳ ದರ ಹೆಚ್ಚಳದಿಂದಾಗಿ ಆರ್ಥಿಕ ಹೊರೆ ಉಂಟಾಗಿದೆ. ಹಾಗಾಗಿ ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು;
ತೈಲಬೆಲೆ ಏರಿಕೆ, ಸಿಬ್ಬಂದಿ ವೇತನ ಸೇರಿದಂತೆ ಆರ್ಥಿಕ ಸೌಲಭ್ಯಗಳ ನಿರ್ವಹಣೆಯಿಂದಾಗಿ ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಅಧೀನದ ನಾಲ್ಕೂ ಸಾರಿಗೆ ನಿಗಮಗಳು 5,200 ಕೋಟಿ ರೂ.ನಷ್ಟದಲ್ಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಷ್ಟ ಸರಿದೂಗಿಸಲು ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಪುನಶ್ವೇತನಕ್ಕೆ ವಿವಿಧ ಯೋಜನೆ ರೂಪಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಇಂಧನ ಬೆಲೆ ಹೆಚ್ಚಳ, ಸಿಬ್ಬಂದಿ ನೇಮಕಾತಿ ಹಾಗೂ ವಾಹನ ಬಿಡಿಭಾಗಗಳ ದರ ಹೆಚ್ಚಳದಿಂದಾಗಿ ಆರ್ಥಿಕ ಹೊರೆ ಉಂಟಾಗಿದೆ. ಹಾಗಾಗಿ ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ 9,978 ಕೋಟಿ ರೂ. ಅನುದಾನ ಪೈಕಿ ಇನ್ನೂ 2 ಸಾವಿರ ಕೋಟಿ ರೂ. ಬಿಡುಗಡೆಯಾಗಬೇಕಿದೆ. ಅನುದಾನ ಮಂಜೂರಾದ ಬಳಿಕ ಸಾರಿಗೆ ನಿಗಮಗಳಿಗೆ ಅನುದಾನ ನೀಡಲಾಗುವುದು ಎಂದು ಮೇಲ್ಮನೆಯಲ್ಲಿ ತಿಳಿಸಿದರು.
ಮಂಗಳವಾರವಷ್ಟೇ ಸಾರಿಗೆ ಸಂಸ್ಥೆಗಳು ಸೇರಿ 34 ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿವೆ ಎಂದು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ತಿಳಿಸಿತ್ತು.