HighCourt Judges Transfer | ನ್ಯಾಯಮೂರ್ತಿಗಳ ವರ್ಗಾವಣೆ ; ಆದೇಶ ಮರು ಪರಿಶೀಲಿಸಲು ಕೋರಿ ಸಿಜೆಐಗೆ ಪತ್ರ ಬರೆದ ವಕೀಲರ ಸಂಘ
ಬೆಂಗಳೂರು ವಕೀಲರ ಸಂಘದ 200ಕ್ಕೂ ಹೆಚ್ಚು ಯುವ ವಕೀಲರ ನಿಯೋಗವು ಕೊಲಿಜಿಯಂ ಆದೇಶ ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದೆ.;
ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಆದೇಶ ಮರುಪರಿಶೀಲಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘವು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಮನವಿ ಮಾಡಿದೆ.
ಸಂಘದ 200 ಕ್ಕೂ ಹೆಚ್ಚು ಯುವ ವಕೀಲರ ನಿಯೋಗವು ಕೊಲಿಜಿಯಂ ಆದೇಶ ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದೆ. ಸಕಾರಣವಿಲ್ಲದ ನ್ಯಾಯಮೂರ್ತಿಗಳ ವರ್ಗಾವಣೆಯಿಂದ ನ್ಯಾಯಾಂಗದ ಪಾರದರ್ಶಕತೆ ಮತ್ತು ಸ್ವಾತಂತ್ರ್ಯ ದುರ್ಬಲವಾಗಲಿದೆ. ಹಾಗಾಗಿ ಕೊಲಿಜಿಯಂ ಆದೇಶ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಬೆಂಗಳೂರು ವಕೀಲರ ಸಂಘದ 200 ಕ್ಕೂ ಹೆಚ್ಚು ಕಿರಿಯ ವಕೀಲರು ಸಹಿ ಮಾಡಿರುವ ಮನವಿ ಪತ್ರವನ್ನು ಸುಪ್ರೀಂಕೋರ್ಟ್ ಸಿಜೆಐಗೆ ರವಾನಿಸಿದ್ದಾರೆ. ಪ್ರಶ್ನಾರ್ಹರಾದ ನಾಲ್ವರು ನ್ಯಾಯಮೂರ್ತಿಗಳು ತಮ್ಮ ನ್ಯಾಯಸಮ್ಮತ ತೀರ್ಪು, ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಿಸಿದ್ದಾರೆ. ಅಲ್ಲದೇ ಯುವ ವಕೀಲರನ್ನು ತಿದ್ದಿ ತೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಕಿರಿಯ ನ್ಯಾಯವಾದಿಗಳ ವಾದವನ್ನು ತಾಳ್ಮೆಯಿಂದ ಆಲಿಸಿ, ಅರ್ಹತೆಯ ಆಧಾರದ ಮೇಲೆ ಮಾತ್ರ ತೀರ್ಪು ನೀಡುವ ಛಾತಿ ಉಳ್ಳವರಾಗಿದ್ದಾರೆ. ಹಾಗಾಗಿ ವರ್ಗಾವಣೆ ಆದೇಶ ಮರು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿಗಳ ವರ್ಗಾವಣೆಯು ಆಡಳಿತಾತ್ಮಕ ವಿಚಾರವಾಗಿದ್ದರೂ ನ್ಯಾಯಾಂಗ ಮೇಲಿನ ನಂಬಿಕೆ ಉಳಿಸುವುದು ಜರೂರಾಗಿದೆ. ಯುವ ವಕೀಲರಿಗೆ ಮಾದರಿಯಾಗಿರುವ ಇಂತಹ ನ್ಯಾಯಮೂರ್ತಿಗಳ ಉಪಸ್ಥಿತಿ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಲಿಜಿಯಂ ವರ್ಗಾವಣೆ ಆದೇಶವನ್ನು ನಾವಾಗಾಲಿ, ನ್ಯಾಯಾಂಗವನ್ನು ಸೂಕ್ಷ್ಮವಾಗಿ ಗಮನಿಸುವ ಜನರಾಗಲಿ ಪರಾಮರ್ಶಿಸುವುದು ಕಷ್ಟ. ಆದರೆ, ಇಂತಹ ನಿರ್ಧಾರಗಳನ್ನು ಮರು ಪರಿಶೀಲಿಸದೇ ಹೋದರೆ ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯಲ್ಲಿ ನಂಬಿಕೆ ಕುಸಿಯಬಹುದು ಎಂದು ಸಿಜೆಐಗೆ ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ವರ್ಗಾವಣೆ ಆದವರು ಯಾರು?
ಕರ್ನಾಟಕ ಹೈಕೋರ್ಟ್‌ನ ನ್ಯಾ.ಹೇಮಂತ್ ಚಂದನಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ನ್ಯಾ.ಕೃಷ್ಣ ನಟರಾಜನ್ ಅವರನ್ನು ಕೇರಳ ಹೈಕೋರ್ಟ್‌ಗೆ, ನ್ಯಾ.ನೆರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ ಅವರನ್ನು ಗುಜರಾತ್ ಹೈಕೋರ್ಟ್‌ಗೆ ಹಾಗೂ ನ್ಯಾ. ದೀಕ್ಷಿತ್ ಕೃಷ್ಣ ಶ್ರೀಪಾದ್ ಅವರನ್ನು ಒಡಿಶಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ತೆರವಾದ ನಾಲ್ವರು ನ್ಯಾಯಮೂರ್ತಿಗಳ ಹುದ್ದೆಗಳಿಗೆ ನ್ಯಾ. ಪೆರುಗು ಶ್ರೀಸುಧಾ ಹಾಗೂ ಹಾಗೂ ನ್ಯಾ.ಡಾ. ಕುಂಬಜದಲ ಮನ್ಮದ ರಾವ್ ಅವರನ್ನು ವರ್ಗಾವಣೆ ಮಾಡಿ ಕೊಲಿಜಿಯಂ ಆದೇಶಿಸಿದೆ.
ಕೊಲಿಜಿಯಂ ಆದೇಶವನ್ನು ಯಾರೂ ಪ್ರಶ್ನಿಸುವಂತಿಲ್ಲ. ಹೈಕೋರ್ಟ್‌ನಿಂದ ವರ್ಗಾವಣೆಯಾದ ನಾಲ್ವರು ನ್ಯಾಯಮೂರ್ತಿಗಳ ಜಾಗಕ್ಕೆ ಇಬ್ಬರು ನ್ಯಾಯಮೂರ್ತಿಗಳನ್ನು ಮಾತ್ರ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ನಾಲ್ವರನ್ನು ವರ್ಗಾವಣೆ ಮಾಡಿ, ಇಬ್ಬರನ್ನು ಮಾತ್ರ ನೀಡಿರವುದರಿಂದ ನ್ಯಾಯದಾನ ಇನ್ನಷ್ಟು ವಿಳಂಬವಾಗುವ ಆತಂಕವಿದೆ ಎಂದು ಹೈಕೋರ್ಟ್ ವಕೀಲ ಎಲ್. ಉಮಾಪತಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.