ಉಡುಪಿಯಲ್ಲಿ ಹೃದಯವಿದ್ರಾವಕ ಘಟನೆ: ಅಣ್ಣ-ತಂಗಿ ಆತ್ಮಹತ್ಯೆ, ಕಾರಣ ನಿಗೂಢ
ಮನೆಯಲ್ಲಿ ಯಾರೂ ಇಲ್ಲದ ವೇಳೆ, ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ, ಹೀಗಾಗಿ ಆತ್ಮಹತ್ಯೆಗೆ ನಿಖರ ಕಾರಣ ನಿಗೂಢವಾಗಿಯೇ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಉಡುಪಿ ನಗರದ ಅಂಬಲಪಾಡಿ ಸಮೀಪದ ಲೇಬರ್ ಕಾಲೋನಿಯ ಜೋಪಡಿಯೊಂದರಲ್ಲಿ ಅಕ್ಕ-ತಂಗಿಯರ ಮಕ್ಕಳಾದ ಯುವಕ ಮತ್ತು ಅಪ್ರಾಪ್ತ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಅಕ್ಟೋಬರ್ 16ರಂದು ಸಂಜೆ ನಡೆದಿದೆ.
ಮೃತರನ್ನು ರಾಯಚೂರು ಮೂಲದ ಮಲ್ಲೇಶ್ (23) ಮತ್ತು ಪವಿತ್ರಾ (17) ಎಂದು ಗುರುತಿಸಲಾಗಿದೆ. ಪವಿತ್ರಾ ಅವರ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಇಬ್ಬರೂ ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಏನಿದು ಘಟನೆ?
ಪವಿತ್ರಾ ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಮತ್ತು ಬೇರೊಂದು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಸಂಬಂಧಿಕರಾದ ಮಲ್ಲೇಶ್, ವಾರದ ಹಿಂದಷ್ಟೇ ಗಾರೆ ಕೆಲಸಕ್ಕಾಗಿ ಉಡುಪಿಗೆ ಬಂದಿದ್ದು, ತನ್ನ ಚಿಕ್ಕಮ್ಮ ಅಂದರೆ ಪವಿತ್ರಾ ಅವರ ತಾಯಿ ಹನುಮವ್ವ ಅವರ ಮನೆಯಲ್ಲೇ ಉಳಿದುಕೊಂಡಿದ್ದರು. ಘಟನೆ ನಡೆದಾಗ ಹನುಮವ್ವ ಅವರು ತಮ್ಮ ಊರಾದ ರಾಯಚೂರಿಗೆ ಹೋಗಿದ್ದರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ, ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ, ಹೀಗಾಗಿ ಆತ್ಮಹತ್ಯೆಗೆ ನಿಖರ ಕಾರಣ ನಿಗೂಢವಾಗಿಯೇ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಿಂದ ಸ್ಥಳೀಯರು ಆಘಾತಕ್ಕೊಳಗಾಗಿದ್ದು, ಯುವ ಸಮುದಾಯ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)