ಹುಣಸೂರಿನಲ್ಲಿ ಘೋರ ದುರಂತ: ವಿದ್ಯುತ್ ಸ್ಪರ್ಶಿಸಿ ತಾಯಿ-ಮಗ ಸ್ಥಳದಲ್ಲೇ ಸಾವು
ಬುಧವಾರ ಬೆಳಿಗ್ಗೆ, ನೀಲಮ್ಮ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ವಿದ್ಯುತ್ ಕಂಬದಿಂದ ತುಂಡಾಗಿ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದಾರೆ.
ಮೃತ ತಾಯಿ ಮತ್ತು ಮಗ
ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ ಮತ್ತು ಮಗ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಮ್ಮೆಕೊಪ್ಪಲು ಗ್ರಾಮದ ನಿವಾಸಿಗಳಾದ ನೀಲಮ್ಮ (39) ಮತ್ತು ಅವರ ಮಗ ಹರೀಶ್ (19) ಮೃತಪಟ್ಟ ದುರ್ದೈವಿಗಳು. ಬುಧವಾರ ಬೆಳಿಗ್ಗೆ, ನೀಲಮ್ಮ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ವಿದ್ಯುತ್ ಕಂಬದಿಂದ ತುಂಡಾಗಿ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದಾರೆ. ವಿದ್ಯುತ್ ಪ್ರವಾಹದಿಂದಾಗಿ ಅವರು ಕೂಗಿಕೊಂಡಾಗ, ತಾಯಿಯನ್ನು ರಕ್ಷಿಸಲು ಧಾವಿಸಿದ ಮಗ ಹರೀಶ್ ಕೂಡ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದಾರೆ. ಪರಿಣಾಮವಾಗಿ, ಇಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಚೆಸ್ಕಾಂ ವಿರುದ್ಧ ಜನರ ಆಕ್ರೋಶ
ಈ ದುರ್ಘಟನೆಗೆ ಚೆಸ್ಕಾಂ ಅಧಿಕಾರಿಗಳ ಘೋರ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಿದ್ಯುತ್ ತಂತಿಗಳು ಹಳೆಯದಾಗಿದ್ದು, ಅವುಗಳನ್ನು ಬದಲಾಯಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಹುಣಸೂರು ನಗರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.