
ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಮನೆ
ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಭೇದಿಸಿದ ಆರೋಗ್ಯ ಇಲಾಖೆ
ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದ ಐಷಾರಾಮಿ ಬಂಗಲೆಯೊಂದು ಈ ಅನೈತಿಕ ಚಟುವಟಿಕೆಯ ಕೇಂದ್ರವಾಗಿತ್ತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಣದ ಆಸೆಗಾಗಿ ಅರಳುವ ಜೀವಗಳನ್ನೇ ಚಿವುಟಿ ಹಾಕುತ್ತಿದ್ದ ಕಾನೂನುಬಾಹಿರ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಜಾಲವನ್ನು ಆರೋಗ್ಯ ಇಲಾಖೆ ಬೇಧಿಸಿದೆ.
ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಐಷಾರಾಮಿ ಬಂಗಲೆಯೇ ಕರಾಳ ಕೃತ್ಯದ ಅಡ್ಡೆ
ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದ ಐಷಾರಾಮಿ ಬಂಗಲೆಯೊಂದು ಈ ಅನೈತಿಕ ಚಟುವಟಿಕೆಯ ಕೇಂದ್ರವಾಗಿತ್ತು. ಗರ್ಭಿಣಿಯರನ್ನು ಕರೆತಂದು, ಅವರ ಹೊಟ್ಟೆಯಲ್ಲಿರುವ ಮಗುವಿನ ಲಿಂಗ ಪತ್ತೆ ಹಚ್ಚಿ, ಹೆಣ್ಣು ಭ್ರೂಣವಾದರೆ ಅದರ ಹತ್ಯೆ ಮಾಡಲಾಗುತ್ತಿತ್ತು.
ದಾಳಿಯ ವೇಳೆ ಹಣಕಾಸು ವ್ಯವಹಾರ ದಾಖಲಿಸಿದ್ದ ಡೈರಿ, ಲಕ್ಷಾಂತರ ರೂಪಾಯಿ ನಗದು ಮತ್ತು ವೈದ್ಯಕೀಯ ಕಿಟ್‌ಗಳು ಸ್ಥಳದಲ್ಲಿ ಪತ್ತೆಯಾಗಿವೆ.
ಬನ್ನೂರು ನರ್ಸಿಂಗ್ ಹೋಂ ಪಾತ್ರದ ಶಂಕೆ
ಬಂಧಿತ ಆರೋಪಿಗಳಲ್ಲಿ ಒಬ್ಬ ಮಹಿಳೆ ನರ್ಸ್ ಎಂದು ತಿಳಿದು ಬಂದಿದ್ದು, ಹಣಕಾಸಿನ ಡೈರಿಯಲ್ಲಿ ಲಕ್ಷಾಂತರ ರೂ.ಗಳ ವ್ಯವಹಾರವನ್ನು ದಾಖಲಿಸಲಾಗಿದೆ. ಭ್ರೂಣ ಲಿಂಗ ಪತ್ತೆಗೆ 25,000 ರೂ.ಮತ್ತು ಹೆಣ್ಣು ಭ್ರೂಣದ ಹತ್ಯೆಗೆ 30,000 ರೂ. ದರ ನಿಗದಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಈ ಕೃತ್ಯದ ಹಿಂದೆ ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು,ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಗರ್ಭಿಣಿ ಮಹಿಳೆಯೇ 'ಸಹಾಯಕಿ'
ಭ್ರೂಣ ಹತ್ಯೆ ಬೇರು ಸಮೇತ ಕಿತ್ತೊಗೆಯಲು ಆರೋಗ್ಯ ಇಲಾಖೆಯ ಉಪ ನಿರ್ದೇಶಕ ವಿವೇಕ್ ದೊರೈ, ಮಂಡ್ಯ ಹಾಗೂ ಮೈಸೂರು ಡಿಹೆಚ್‌ಓಗಳಾದ ಮೋಹನ್ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳ ಕೃತ್ಯ ಬಯಲಿಗೆಳೆಯಲು ಅಧಿಕಾರಿಗಳು ಯೋಜನಾಬದ್ಧವಾಗಿ ಒಬ್ಬ ಗರ್ಭಿಣಿ ಮಹಿಳೆಯ ಸಹಕಾರ ಪಡೆದಿದ್ದರು. ವರುಣ ಪೊಲೀಸರ ಸಹಯೋಗದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಕರಾಳ ದಂಧೆ ಬಯಲಾಗಿದೆ.
ವೈದ್ಯಕೀಯ ತ್ಯಾಜ್ಯ ವಿಲೇವಾರಿಯೂ ಅಕ್ರಮ
ಭ್ರೂಣ ಹತ್ಯೆಗಾಗಿ ಬಳಸಿದ್ದ ವೈದ್ಯಕೀಯ ಪರಿಕರಗಳು ಮತ್ತು ಔಷಧಿಗಳನ್ನು ಮನೆಯ ಮುಂದೆಯೇ ಸುಟ್ಟು ಹಾಕಲಾಗಿತ್ತು. ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದ್ದ ವೈದ್ಯಕೀಯ ತ್ಯಾಜ್ಯವನ್ನು, ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಅರೆಬರೆ ಸುಟ್ಟುಹಾಕಿದ್ದರು.
'ಮತ್ತೊಮ್ಮೆ ಹೆಣ್ಣು ಮಗು' ಭಯವೇ ದಂಧೆಗೆ ಕಾರಣ
ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಭ್ರೂಣ ಲಿಂಗ ಪತ್ತೆಗೆ ಆಗಮಿಸಿದ್ದ ಇಬ್ಬರು ಗರ್ಭಿಣಿಯರು ಪತ್ತೆಯಾಗಿದ್ದಾರೆ. ಅವರಲ್ಲಿ ಒಬ್ಬ ಮಹಿಳೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ಬಾರಿಯೂ ಹೆಣ್ಣು ಮಗುವಾದರೆ ಎಂಬ ಆತಂಕ ಇದ್ದುದರಿಂದ ಜಾಲವನ್ನು ಸಂಪರ್ಕಿಸಿದ್ದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ವರುಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.