ಶೆಡ್ ನಿರ್ಮಾಣದ ವೇಳೆ ದುರಂತ: ವಿದ್ಯುತ್ ಸ್ಪರ್ಶಿಸಿ ತೋಟದ ಮಾಲೀಕರ ಮಗ ಸೇರಿ ಮೂವರು ದುರ್ಮರಣ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂ ಹೆಚ್ಚುವರಿ ಶಾಖಾಧಿಕಾರಿ ಪಾಲಯ್ಯ ಅವರು, "ಶೆಡ್ ನಿರ್ಮಾಣದ ಕುರಿತು ಬೆಸ್ಕಾಂ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ;
ಸಾಂದರ್ಭಿಕ ಚಿತ್ರ
ಸಮೀಪದ ಕಾಳಘಟ್ಟ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದ ಭೀಕರ ದುರಂತದಲ್ಲಿ, ಶೆಡ್ ನಿರ್ಮಾಣ ಮಾಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ತೋಟದ ಮಾಲೀಕರ ಮಗ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ತೋಟದ ಮಾಲೀಕ ರಾಟೆರ ನಾಗರಾಜಪ್ಪ ಅವರ ಪುತ್ರ ಜಿ.ಎನ್. ಶ್ರೀನಿವಾಸ್ (35), ದಾವಣಗೆರೆ ತಾಲ್ಲೂಕಿನ ಎಂ.ನಾಸಿರ್ (34) ಹಾಗೂ ಕಾರ್ಮಿಕ ಮಹಮ್ಮದ್ ಫಾರೂಕ್ (32) ಎಂದು ಗುರುತಿಸಲಾಗಿದೆ.
ಕಾಳಘಟ್ಟ ಗ್ರಾಮದ ತೋಟವೊಂದರಲ್ಲಿ ನಾಗರಾಜಪ್ಪ ಅವರು ಶೆಡ್ ನಿರ್ಮಿಸಲು, ಫೈರೋಜ್ ಎಂಬುವವರಿಗೆ ಗುತ್ತಿಗೆ ನೀಡಿದ್ದರು. ಬುಧವಾರ ಬೆಳಿಗ್ಗೆ ಶೆಡ್ ನಿರ್ಮಾಣದ ವೇಳೆ, ಕಾರ್ಮಿಕರು ಕಬ್ಬಿಣದ ಕಂಬಿಯನ್ನು ಎತ್ತಿ ಇಡಲು ಮುಂದಾದಾಗ, ಅದು ಆಕಸ್ಮಿಕವಾಗಿ ಮೇಲಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ. ತೀವ್ರ ವಿದ್ಯುತ್ ಪ್ರವಹಿಸಿದ್ದರಿಂದ ಮೂವರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೆಸ್ಕಾಂ ನಿರ್ಲಕ್ಷ್ಯದ ಆರೋಪ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂ ಹೆಚ್ಚುವರಿ ಶಾಖಾಧಿಕಾರಿ ಪಾಲಯ್ಯ ಅವರು, "ಶೆಡ್ ನಿರ್ಮಾಣದ ಕುರಿತು ಬೆಸ್ಕಾಂ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಸುರಕ್ಷತೆಗಾಗಿ ಪಡೆಯಬೇಕಾದ ಲೈನ್ ಕ್ಲಿಯರ್ (ಎಲ್.ಸಿ.) ಅನ್ನು ಸಹ ಪಡೆದಿರಲಿಲ್ಲ. ಇದು ತೀವ್ರ ನಿರ್ಲಕ್ಷ್ಯ," ಎಂದು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.