ಯೆಲ್ಲೋ ಮೆಟ್ರೋ ನಾಳೆಯಿಂದ ಮುಕ್ತ; ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ, ಕೆಲವು ಪ್ರಮುಖ ರಸ್ತೆಗಳಲ್ಲಿ ಭಾನುವಾರ ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.;

Update: 2025-08-09 04:35 GMT

ನಮ್ಮ ಮೆಟ್ರೊ (ಹಳದಿ ಮಾರ್ಗ) 

ನಮ್ಮ ಮೆಟ್ರೋದ ಯೆಲ್ಲೋ ಲೈನ್‌ ಮಾರ್ಗದ ಉದ್ಘಾಟನೆಗೆ ಭಾನುವಾರ ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.

ಕೆಲವು ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:30 ರವರೆಗೆ ಈ ನಿರ್ಬಂಧಗಳು ಮುಂದುವರೆಯಲಿವೆ.

ಪ್ರಧಾನಿ ನರೇಂದ್ರ ಮೋದಿ 5,056.99 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಮಾರ್ಗದಿಂದ ಬೆಂಗಳೂರಿನ 6 ಲಕ್ಷಕ್ಕೂ ಹೆಚ್ಚು ಮಂದಿಗೆ ಅನುಕೂಲವಾಗಲಿದೆ. ವಾಣಿಜ್ಯ ಸಂಚಾರ ಆರಂಭಿಸಲು ಅಂತಿಮ ಹಂತದ ತಯಾರಿಗಳು ಮುಕ್ತಾಯಗೊಂಡಿವೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಸುರಕ್ಷತಾ ತಪಾಸಣೆ ನಡೆಸಿ ಕೆಲವೊಂದು ಸಲಹೆ ನೀಡಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿಸಲು 'ನಮ್ಮ ಮೆಟ್ರೋ' ಸಕಲ ಸಿದ್ಧತೆಯನ್ನು ಕೈಗೊಂಡಿದೆ.

ಪ್ರಧಾನಿ ಬೆಂಗಳೂರು ಭೇಟಿಯ ಅಧಿಕೃತ ವೇಳಾಪಟ್ಟಿಯು ಪ್ರಕಟವಾಗಿದ್ದು, ಬೆಂಗಳೂರಿನಲ್ಲಿ 4 ಗಂಟೆ ಇರಲಿದ್ದಾರೆ. ಈ ಸಂದರ್ಭದಲ್ಲಿ 3 ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 1 ಮೆಟ್ರೋ ಮಾರ್ಗ, 3 ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದಾರೆ.  ನಮ್ಮ ಮೆಟ್ರೋ 3 ನೇ ಹಂತದ 2 ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಬೆಳಗಾವಿ - ಬೆಂಗಳೂರು, ನಾಗ್ಪುರದ ಅಜ್ನಿ- ಪುಣೆ ಮತ್ತು ಅಮೃತಸರ - ಶ್ರೀಮಾತಾ ವೈಷ್ಣೋದೇವಿ -ಕಾತ್ರಾ ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ನಮ್ಮ ಮೆಟ್ರೋ 3 ನೇ ಹಂತದ ಕೆಂಪಾಪುರ - ಜೆಪಿ ನಗರ ನಡುವಿನ ಕಿತ್ತಳೆ ಮಾರ್ಗ ಮತ್ತು ಹೊಸಹಳ್ಳಿ - ಕಡಬಗೆರೆ ನಡುವಿನ ಬೂದು ಮಾರ್ಗಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಹಾಗಾಗಿ ಈ ಪ್ರದೇಶಗಳ ಸುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಸಂಬಂಧ ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ನಿರ್ಬಂಧಿತ ರಸ್ತೆಗಳು

ಮಾರೇನಹಳ್ಳಿ ರಾಜಲಕ್ಷ್ಮೀ ಜಂಕ್ಷನ್‌ನಿಂದ 18ನೇ ಮುಖ್ಯ ರಸ್ತೆ

ಈಸ್ಟ್ ಎಂಡ್ ಜಂಕ್ಷನ್‌ನಿಂದ ಅರವಿಂದ ಜಂಕ್ಷನ್

ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ (ಹೊಸೂರು ಕಡೆಯಿಂದ ನಗರದ ಕಡೆಗೆ)

ಇನ್‌ಫೋಸಿಸ್ ಅವೆನ್ಯೂ ಮತ್ತು ವೇಲಾಂಕಣಿ ರಸ್ತೆಗಳು.

ಪರ್ಯಾಯ ಮಾರ್ಗಗಳು

ಮಾರೇನಹಳ್ಳಿ ರಾಜಲಕ್ಷ್ಮೀ ಜಂಕ್ಷನ್‌ನಿಂದ ಜಯದೇವ ಕಡೆಗೆ ಸಾಗುವ ವಾಹನಗಳು: ಬನಶಂಕರಿ ಬಸ್ ನಿಲ್ದಾಣ, ಸಾರಕ್ಕಿ ಮಾರುಕಟ್ಟೆ, ಆರ್.ವಿ. ಡೆಂಟಲ್ ಜಂಕ್ಷನ್ ಅಥವಾ ಸಾರಕ್ಕಿ ಜಂಕ್ಷನ್ ಔಟರ್ ರಿಂಗ್ ರಸ್ತೆ ಮೂಲಕ ಬನ್ನೇರುಘಟ್ಟ ರಸ್ತೆಯ ಕಡೆಗೆ ಸಾಗಬಹುದು.

ಈಸ್ಟ್ ಎಂಡ್ ಸರ್ಕಲ್‌ನಿಂದ ಬನಶಂಕರಿ ಕಡೆಗೆ ಸಾಗುವ ವಾಹನಗಳು: 28ನೇ ಮುಖ್ಯ ರಸ್ತೆ, 9ನೇ ಕ್ರಾಸ್ ಜಂಕ್ಷನ್, ಡಾಲಿಯಾ ಜಂಕ್ಷನ್, ಅಥವಾ ಔಟರ್ ರಿಂಗ್ ರಸ್ತೆ ಮೂಲಕ ಸಾರಕ್ಕಿ ಜಂಕ್ಷನ್, ಕನಕಪುರ ರಸ್ತೆ ಮತ್ತು ಬನಶಂಕರಿ ಕಡೆಗೆ ಸಾಗಬಹುದು.

ಹೊಸೂರು ರಸ್ತೆಯಿಂದ ಇತರ ಕಡೆಗೆ ಹೋಗುವವರು: ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ತುಮಕೂರು ಕಡೆಗೆ ಹೋಗಲು ನೈಸ್ (NICE) ರಸ್ತೆಯನ್ನು ಬಳಸಲು ಸೂಚಿಸಲಾಗಿದೆ.

ನೈಸ್ ರಸ್ತೆಯಿಂದ ಬರುವ ವಾಹನಗಳು: ಬನ್ನೇರುಘಟ್ಟ ಜಂಕ್ಷನ್, ಜಿಗಣಿ ರಸ್ತೆ, ಬೊಮ್ಮಸಂದ್ರ ಜಂಕ್ಷನ್ ಮೂಲಕ ಹೊಸೂರು ರಸ್ತೆಗೆ ಸೇರಬಹುದು

ಈ ಕ್ರಮಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸದಂತೆ ನೋಡಿಕೊಳ್ಳಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಳಗ್ಗೆ 11:30ರ ಸುಮಾರಿಗೆ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಮತ್ತು ಬೆಳಗಾವಿ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ವಾಹನ ಸವಾರರು ಈ ಸಂಚಾರ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕೆಂದು ಎಂದು ಬೆಂಗಳೂರು ಸಂಚಾರ ಪೊಲೀಸ್‌ ಪ್ರಕಟನೆ ತಿಳಿಸಿದೆ. 

Tags:    

Similar News