
ಆ.10 ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ; ಪ್ರಧಾನಿ ಮೋದಿ ಚಾಲನೆ
ಹಳದಿ ಮಾರ್ಗಕ್ಕೆ ಬೇಕಾದ 15 ರೈಲುಗಳ ಪೈಕಿ ಮೂರು ರೈಲುಗಳು ಮಾತ್ರ ಲಭ್ಯವಿವೆ. ನಾಲ್ಕನೇ ರೈಲು ಆಗಸ್ಟ್ 10ರ ಸುಮಾರಿಗೆ ಬರುವ ನಿರೀಕ್ಷೆಯಿದೆ. ಹೊಸ ರೈಲನ್ನು ಪ್ರಯಾಣಿಕರ ಸೇವೆಗೆ ಸೇರ್ಪಡೆ ಮಾಡುವ ಮೊದಲು ಸುಮಾರು ಮೂರು ವಾರಗಳ ಕಾಲ ಮುಖ್ಯ ಮಾರ್ಗದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಬೆಂಗಳೂರಿನ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೊ (ಹಳದಿ ಮಾರ್ಗ) ವಾಣಿಜ್ಯ ಸಂಚಾರ ಆ.10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಲಿದ್ದು, ಉದ್ಘಾಟನಾ ಸಮಾರಂಭಕ್ಕಾಗಿ ಜಯನಗರ 5 ನೇ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ವೇದಿಕೆ ಸಜ್ಜಾಗುತ್ತಿದೆ.
ಹಳದಿ ಮಾರ್ಗದಲ್ಲಿ 8 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ. ವಾಣಿಜ್ಯ ಸಂಚಾರ ಆರಂಭಕ್ಕೆ ಅಂತಿಮ ಹಂತದ ತಯಾರಿಗಳು ನಡೆಯುತ್ತಿದ್ದು, ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಸುರಕ್ಷತಾ ತಪಾಸಣೆ ಮುಗಿಸಿದ್ದಾರೆ.
ಹಳದಿ ಮಾರ್ಗಕ್ಕೆ ಬೇಕಾದ 15 ರೈಲುಗಳ ಪೈಕಿ ಮೂರು ರೈಲುಗಳು ಮಾತ್ರ ಲಭ್ಯವಿವೆ. ನಾಲ್ಕನೇ ರೈಲು ಆಗಸ್ಟ್ 10ರ ಸುಮಾರಿಗೆ ಬರುವ ನಿರೀಕ್ಷೆಯಿದೆ. ಹೊಸ ರೈಲನ್ನು ಪ್ರಯಾಣಿಕರ ಸೇವೆಗೆ ಸೇರ್ಪಡೆ ಮಾಡುವ ಮೊದಲು ಸುಮಾರು ಮೂರು ವಾರಗಳ ಕಾಲ ಮುಖ್ಯ ಮಾರ್ಗದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಸೆಪ್ಟೆಂಬರ್ ವೇಳೆಗೆ ಇನ್ನೂ ಎರಡು ರೈಲುಗಳು ಬರುವ ನಿರೀಕ್ಷೆಯಿದೆ. ಎಲ್ಲಾ 15 ರೈಲುಗಳನ್ನು ಸ್ವೀಕರಿಸಿದ ನಂತರ 2026ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಹೇಳಲಾಗಿದೆ.
ಹಳದಿ ಮಾರ್ಗದ ಅನುಕೂಲಗಳು
ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ಕೇಂದ್ರ ಭಾಗಕ್ಕೆ ತ್ವರಿತ ಸಂಪರ್ಕ ಕಲ್ಪಿಸಲಿದೆ.
ಜನ ಮೆಟ್ರೋ ಬಳಸುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಕಡಿಮೆಯಾಗಿ ಟ್ರಾಫಿಕ್ ದಟ್ಟಣೆ ತಗ್ಗಲಿದೆ.
ಎಚ್‌ಎಸ್‌ಆರ್ ಲೇಔಟ್, ಬಿಟಿಎಂ, ಸಿಂಗಸಂದ್ರ, ಬೊಮ್ಮನಹಳ್ಳಿ, ಜಯನಗರ, ತಿಲಕ್‌ನಗರ ಸೇರಿದಂತೆ ಹಲವು ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರತಿಷ್ಠಿತ ಜಯದೇವ ಆಸ್ಪತ್ರೆ, ಇನ್ಫೋಸಿಸ್‌ಗೆ ತೆರಳುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಬೆಂಗಳೂರಿನಿಂದ ತಮಿಳುನಾಡು (ಹೊಸೂರು) ಭಾಗಕ್ಕೆ ತೆರಳುವ ಪ್ರಯಾಣಿಕರಿಗೂ ನೆರವಾಗಲಿದೆ.
16 ನಿಲ್ದಾಣ ಹೊಂದಿರುವ ಮಾರ್ಗ
5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಳದಿ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗವು ಪ್ರತಿದಿನ ಸುಮಾರು ಎಂಟು ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. 15,611 ಕೋಟಿ ರೂ.ವೆಚ್ಚದ ಹಂತ-3ರ ವಿಸ್ತರಣೆಗೆ ಪ್ರಧಾನಿಯವರು ತಮ್ಮ ಮೂರನೇ ಅವಧಿಯ ಆಡಳಿತದ ಮೊದಲ 100 ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಕೊಡಿಸಿದ್ದರು.
ಬೆಂಗಳೂರು ಮೆಟ್ರೋದ ಹಂತ- 3 ಅನ್ನು ಕಿತ್ತಳೆ ಮಾರ್ಗ ಎಂದೂ ಕರೆಯಲ್ಪಡುತ್ತದೆ. ಇದು 44.65 ಕಿ.ಮೀ. ಹೊಸ ಮಾರ್ಗಗಳನ್ನು ಸೇರಿಸುವ ಮೂಲಕ ನಗರದ ಮೆಟ್ರೋ ಜಾಲವನ್ನು ವಿಸ್ತರಿಸುವ ಯೋಜನೆಯಾಗಿದೆ. ಈ ಯೋಜನೆಯು ಎರಡು ಮಾರ್ಗಗಳು ಮತ್ತು 31 ನಿಲ್ದಾಣಗಳನ್ನು ಒಳಗೊಂಡಿದೆ. 2029 ರ ಅಂತ್ಯದ ವೇಳೆಗೆ ಅಂದಾಜು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಹಂತ-3 ಪ್ರಾಥಮಿಕವಾಗಿ ಮಾಗಡಿ ರಸ್ತೆ ಮತ್ತು ಹೊರ ವರ್ತುಲ ರಸ್ತೆಯ (ORR) ಪಶ್ಚಿಮ ಭಾಗದ ಉದ್ದಕ್ಕೂ ಸೇವೆ ಸಲ್ಲಿಸದ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತದೆ.