Namma Metro | ಹಳದಿ ಮೆಟ್ರೋ ಮಾರ್ಗ ಆರಂಭವಾದರೆ 20 ನಿಮಿಷಕ್ಕೊಮ್ಮೆ  ಮಾತ್ರ ರೈಲು!
x

Namma Metro | ಹಳದಿ ಮೆಟ್ರೋ ಮಾರ್ಗ ಆರಂಭವಾದರೆ 20 ನಿಮಿಷಕ್ಕೊಮ್ಮೆ ಮಾತ್ರ ರೈಲು!

ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆಗಸ್ಟ್‌ ತಿಂಗಳಲ್ಲಿ ಆರಂಭಗೊಳ್ಳುವುದರಿಂದ ಸಮಯ, ವೇಳಾಪಟ್ಟಿ ರೂಪಿಸುವುದು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಸವಾಲಾಗಿ ಪರಿಣಮಿಸಿದೆ.


ಸಿಲಿಕಾನ್‌ ಸಿಟಿ ಬೆಂಗಳೂರು ವಿಶ್ವಮಾನ್ಯ ಖ್ಯಾತಿ ಪಡೆದಿರುವ ಜತೆ ಜತೆಗೆ ಸಂಚಾರದಟ್ಟಣೆಯು ಅಧಿಕಗೊಳ್ಳುತ್ತಿದೆ. ಇದರ ನಿಯಂತ್ರಣಕ್ಕಾಗಿ ಮೆಟ್ರೋ ಸಂಚಾರ ಸುಲಭ ಮಾರ್ಗವಾಗಿದ್ದು, ಐಟಿ ಕಂಪನಿಗಳು ಹೆಚ್ಚಿರುವ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದ ಹಳದಿ ಮೆಟ್ರೋ ಮಾರ್ಗವು ಸ್ವಾತಂತ್ರ್ಯ ದಿನಾಚರಣೆ ಹೊಸ್ತಿಲಿನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂಬ ನಿರೀಕ್ಷೆ ಇದೆ.

ಆದರೂ, ಪ್ರಯಾಣಿಕರಿಗೆ ರೈಲುಗಳ ಸಂಚಾರದ ಪೂರ್ಣ ಪ್ರಯೋಜನ ಲಭ್ಯವಾಗಬೇಕಾದರೆ 2026ರ ಮಾರ್ಚ್‌ವರೆಗೆ ಕಾಯುವುದು ಅನಿವಾರ್ಯವಾಗಿದೆ.

ಆರ್‌ವಿ ರಸ್ತೆಯಿಂದ (ರಾಷ್ಟ್ರೀಯ ವಿದ್ಯಾಲಯ ರಸ್ತೆ) ಬೊಮ್ಮಸಂದ್ರವರೆಗೆ ಹರಡಿಕೊಂಡಿರುವ ಈ ಮಾರ್ಗವು, ನಿತ್ಯದ ಭಾರೀ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಪ್ರಯಾಣಿಕರಿಗೆ ದೊಡ್ಡ ಸೌಲಭ್ಯ ಒದಗಿಸಲಿದೆ. ಆದರೆ, ಆಗಸ್ಟ್‌ನಲ್ಲಿ ಸೇವೆ ಆರಂಭಗೊಂಡರೂ ಪರಿಪೂರ್ಣ ಪ್ರಯೋಜನವು ಮುಂದಿನ ವರ್ಷಕ್ಕೆ ಲಭ್ಯವಾಗಲಿವೆ. ಇದರ ಜೊತೆಗೆ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆಗಸ್ಟ್‌ ತಿಂಗಳಲ್ಲಿ ಆರಂಭಿಸುವುದರಿಂದ ಸಮಯ, ವೇಳಾಪಟ್ಟಿ ರೂಪಿಸುವುದು ಸಹ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಸವಾಲಾಗಿ ಪರಿಣಮಿಸಿದೆ.

ಐಟಿ ಹಬ್‌ಗೆ ಸಂಪರ್ಕಿಸುವ ಈ ಮಾರ್ಗ ಆರಂಭಕ್ಕೆ ಸಾಕಷ್ಟು ಒತ್ತಡ ಬಿಎಂಆರ್‌ಸಿಎಲ್‌ ಮೇಲಿದೆ. ಆದರೆ, ಇರುವ ಮೂರೇ ರೈಲುಗಳಿಂದ ಆರ್‌.ವಿ. ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ 18.82 ಕಿಮೀ ಉದ್ದದ, 16 ನಿಲ್ದಾಣಗಳನ್ನು ಒಳಗೊಂಡ ಈ ಮಾರ್ಗಕ್ಕೆ ವ್ಯವಸ್ಥಿತ ಸಮಯ, ವೇಳಾಪಟ್ಟಿ ರೂಪಿಸಿಕೊಳ್ಳುವುದು ತಲೆನೋವಾಗಿದೆ. ಬಿಎಂಆರ್‌ಸಿಎಲ್‌ ನೀಡಿರುವ ಮಾಹಿತಿ ಪ್ರಕಾರ ಈ ತಿಂಗಳ (ಜುಲೈ) ಅಂತ್ಯದೊಳಗೆ ಹಳದಿ ಮಾರ್ಗವನ್ನು ದಕ್ಷಿಣ ವಲಯದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ತಪಾಸಣೆ ನಡೆಸಲಿದ್ದಾರೆ. ಆಗಸ್ಟ್‌ ನಡುವಿನ ಅವಧಿಯಲ್ಲಿ ವಾಣಿಜ್ಯ ಸಂಚಾರ ಆರಂಭವಾಗುವ ಸಾಧ್ಯತೆಯಿದೆ.

ಚೀನಾದ ಪ್ರೋಟೋಟೈಪ್‌

ಈ ಮಾರ್ಗಕ್ಕೆ ಒಟ್ಟಾರೆ 15 ರೈಲುಗಳು ಬರಬೇಕು. ಚೀನಾದ ಸಿಆರ್‌ಆರ್‌ಸಿಯಿಂದ ಬಂದ ಪ್ರೊಟೊಟೈಪ್‌ ರೈಲು ಕೋಚ್‌ಗಳು, ಕೊಲ್ಕತ್ತಾದ ತೀತಾಘರ್‌ ರೈಲ್ವೆ ವ್ಯವಸ್ಥೆ ಪೂರೈಸಿರುವ ಎರಡು ರೈಲು ಕೋಚ್‌ಗಳು ಸೇರಿ ಒಟ್ಟೂ ಮೂರು ರೈಲುಗಳ ಕೋಚ್‌ಗಳು ಬಿಎಂಆರ್‌ಸಿಎಲ್‌ ಬಳಿಯಿವೆ. ಮುಂದಿನ ಒಂದೆರಡು ತಿಂಗಳಿಗೆ ಎರಡು ರೈಲುಗಳಂತೆ ತೀತಾ ಘರ್‌ ರೈಲು ಫ್ಯಾಕ್ಟರಿ ಉಳಿದ 12 ರೈಲುಗಳನ್ನು ಪೂರೈಸಲಿದೆ. ಎಲ್ಲ ರೈಲುಗಳು ಬಂದು ಸೇರಲು ಸುಮಾರು 10 ತಿಂಗಳ ಕಾಲಾವಧಿ ಬೇಕಾಗಬಹುದು. ರೈಲುಗಳು ಸೇರ್ಪಡೆ ಆಗುತ್ತಿದ್ದಂತೆ ಸಂಚಾರದ ಆವರ್ತನ ಅವಧಿ ಹಂತ ಹಂತವಾಗಿ ತಗ್ಗಲಿದೆ. ಹೀಗಾಗಿ ಪ್ರಯಾಣಿಕರಿಗೆ ಹಳದಿ ಮೆಟ್ರೋ ರೈಲಿನ ಸಂಪೂರ್ಣ ಸೇವೆ ಲಭ್ಯವಾಗಲು 2026ರ ಮಾರ್ಚ್‌ವರೆಗೆ ಕಾಯಲೇಬೇಕಾಗಿದೆ ಎಂದು ಹೇಳಲಾಗಿದೆ.

ಸದ್ಯಕ್ಕೆ ಏಳು ನಿಲ್ದಾಣದಲ್ಲಿ ಮಾತ್ರದಲ್ಲಿ ನಿಲುಗಡೆ

18.82ಕಿಮೀ ಉದ್ದದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಸದ್ಯಕ್ಕೆ ರೈಲುಗಳ ಸಂಚಾರದ ನಡುವೆ 25 ನಿಮಿಷದ ಅಂತರ ಇರಲಿದ್ದು, ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯುವುದು ಅನಿವಾರ್ಯ. ಸದ್ಯಕ್ಕೆ ಹಳದಿ ಮಾರ್ಗಕ್ಕಾಗಿ ಕೇವಲ 3 ರೈಲುಗಳು ಮಾತ್ರ ಲಭ್ಯವಿದೆ. ಈ ಮೊದಲು ಹಳದಿ ಮಾರ್ಗದ ಎಲ್ಲ 16 ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಮಾಡುವ ಬದಲು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಲು ಯೋಜಿಸಲಾಗಿತ್ತು. ಈ ಮೂಲಕ ರೈಲುಗಳ ಆವರ್ತನದ ಅವಧಿ ಕಡಿಮೆಗೊಳಿಸಿ ಪ್ರಯಾಣಿಕರ ಕಾಯುವಿಕೆ ತಪ್ಪಿಸಲು ಯೋಚನೆ ಇತ್ತು. ಇದೀಗ ಕೇವಲ ಏಳು ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವ ಯೋಚನೆ ಇದೆ.

ಎಲ್ಲ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸುತ್ತ ತೆರಳಿದರೆ ರೈಲುಗಳ ನಡುವೆ ಸುಮಾರು ಅರ್ಧಗಂಟೆ ಅಂತರ ಏರ್ಪಡುವ ಸಾಧ್ಯತೆಯಿದೆ. ಆದರೆ, ಹೊಸ ಮಾರ್ಗದ ಆದಾಯ, ಪ್ರಯಾಣಿಕರ ಅನುಕೂಲತೆ ದೃಷ್ಟಿಯನ್ನು ಇಟ್ಟುಕೊಂಡು ಎರಡು ಮೂರು ಮಾರ್ಗಸೂಚಿಗಳನ್ನು ರೂಪಿಸಿಕೊಂಡಿದೆ. ಹಳದಿ ಮಾರ್ಗದ ಪ್ರಮುಖವಾದ, ಹೆಚ್ಚು ಜನ ಬಳಸಲಿರುವ ಏಳು ಸ್ಟೇಷನ್‌ಗಳ ನಿಲುಗಡೆಯೊಂದಿಗೆ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್‌ ಯೋಜಿಸಿದೆ. ಆರ್‌ವಿ ರಸ್ತೆ, ಜಯದೇವ ಹಾಸ್ಪಿಟಲ್‌, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ಕೂಡ್ಲು ಗೇಟ್‌, ಹೊಸ ರೋಡ್‌, ಇನ್ಫೋಸಿಸ್‌ ಫೌಂಡೇಷನ್‌ ಕೋಣಪ್ಪನ ಅಗ್ರಹಾರ ಹಾಗೂ ಬೊಮ್ಮಸಂದ್ರ ನಿಲ್ದಾಣಗಳಲ್ಲಿ ನಿಲ್ಲಿಸಬಹುದು. ಇದರಿಂದ 20 ನಿಮಿಷಕ್ಕೊಮ್ಮೆ ರೈಲು ಓಡಾಡಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಇದರ ಜೊತೆಗೆ ಕೇವಲ ಅರ್ಧ ಮಾರ್ಗ ಮಾತ್ರ ಅಂದರೆ 12 ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಬೊಮ್ಮಸಂದ್ರ ದಿಂದ ಸಿಲ್ಕ್ ಬೋರ್ಡ್‌ವರೆಗೆ ಮಾತ್ರ ಸಂಚರಿಸುವ ಬಗ್ಗೆಯೂ ಬಿಎಂಆರ್‌ಸಿಎಲ್‌ ಯೋಜಿಸಿದೆ. ಹೀಗಾದಲ್ಲಿ ಆರ್‌.ವಿ.ರಸ್ತೆ, ರಾಗಿಗುಡ್ಡ, ಜಯದೇವ, ಬಿಟಿಎಂ ಲೇಔಟ್‌ ನಿಲ್ದಾಣಗಳು ತಪ್ಪಲಿವೆ.

3-4 ದಿನಗಳ ಕಾಲ ನಡೆಯಲಿದೆ ಪರಿಶೀಲನೆ

ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಸಿಬಿಟಿಸಿ ತಂತ್ರಜ್ಞಾನ ಆಧಾರಿತ ಸಿಗ್ನಲಿಂಗ್‌ ಅಳವಡಿಕೆ ಆದ ಹಿನ್ನೆಲೆಯಲ್ಲಿ ಹಳದಿ ಮಾರ್ಗದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನವನ್ನು (ಐಎಸ್‌ಎ) ಸಿಗ್ನಲಿಂಗ್‌ ಗುತ್ತಿಗೆ ಪಡೆದ ಸೈಮನ್ಸ್‌ ಇಂಡಿಯಾ ಲಿ. ಕಂಪನಿ ಬಿಎಂಆರ್‌ಸಿಎಲ್‌ಗೆ ಸಲ್ಲಿಸಲಿದೆ. ಬಹುತೇಕ ಇದೇ ವಾರ ಸಿಎಂಆರ್‌ಎಸ್‌ ತಂಡವನ್ನು ಬಿಎಂಆರ್‌ಸಿಎಲ್‌ ತಪಾಸಣೆಗೆ ಆಹ್ವಾನಿಸಲಿದೆ. ಹೊಸ ಮಾರ್ಗ, ಹೊಸ ಮಾದರಿಯ ರೈಲು ಬಳಕೆ ಆಗುತ್ತಿರುವ ಕಾರಣ ಮೂರು-ನಾಲ್ಕು ದಿನಗಳ ಕಾಲ ಮಾರ್ಗದ ಪರಿಶೀಲನೆಯನ್ನು ಸಿಎಂಆರ್‌ಎಸ್‌ ನಡೆಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

90ಸೆಕೆಂಡ್‌ಗೊಮ್ಮೆ ರೈಲು ಓಡಾಟ ನಿರೀಕ್ಷೆ

ಯೋಜನೆ ಪ್ರಕಾರ ಈ ಮಾರ್ಗದಲ್ಲಿ 90 ಸೆಕೆಂಡ್‌ಗೊಮ್ಮೆ ರೈಲುಗಳು ಓಡಾಡಬೇಕು. ಸದ್ಯ ನೇರಳೆ, ಹಸಿರು ಮಾರ್ಗದಲ್ಲಿ ಡಿಟಿಜಿ (ಡಿಸ್ಟೆನ್ಸ್‌ ಟು ಗೋ) ತಂತ್ರಜ್ಞಾನದಲ್ಲಿ ರೈಲುಗಳು 3-4 ನಿಮಿಷಕ್ಕೊಮ್ಮೆ ಸಂಚರಿಸುತ್ತಿವೆ. ಹಳದಿ ಮಾರ್ಗದ ರೈಲುಗಳು ಸಿಬಿಟಿಸಿ (ಕಮ್ಯೂನಿಕೇಶನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌) ತಂತ್ರಜ್ಞಾನ ಆಧಾರಿತವಾಗಿ ಸಂಚರಿಸಲಿವೆ. ಈ ತಂತ್ರಜ್ಞಾನ ರೈಲುಗಳ ಸಂಚಾರದ ನಡುವಿನ ಅಂತರ 90 ಸೆಕೆಂಡುಗಳಿಗೆ ಇಳಿಸುವ ಬಗ್ಗೆ ಮೆಟ್ರೋ ಚಿಂತನೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಿದ್ದಾರೆ.

ಈ ನಡುವೆ, ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳ ಗುಂಪು ಚೀನಾದ ಸಿಆರ್‌ಆರ್‌ಸಿ ಸೌಲಭ್ಯಕ್ಕೆ ಭೇಟಿ ನೀಡಿದ್ದು, ಹಳದಿ ಮಾರ್ಗದ ತರಬೇತುದಾರರ ಕೆಲಸವನ್ನು ಪರಿಶೀಲಿಸಿದೆ. ಕಂಪನಿಯು 2019 ರಲ್ಲಿ ಬಿಎಂಆರ್​ಸಿಎಲ್​ಗೆ 1,578 ರೂಪಾಯಿ ವೆಚ್ಚದಲ್ಲಿ 216 ಮೆಟ್ರೋ ಕೋಚ್‌ಗಳನ್ನು ಪೂರೈಸುವ ಒಪ್ಪಂದವನ್ನು ಪಡೆದುಕೊಂಡಿದೆ.

ಹಸಿರು, ನೇರಳೆ ಮಾರ್ಗದಲ್ಲಿ 52 ರೈಲುಗಳ ಓಡಾಟ

ಹಸಿರು, ನೇರಳೆ ಮಾರ್ಗದಲ್ಲಿ ಪ್ರತಿ 3-4 ನಿಮಿಷಗಳ ಅಂತರದಲ್ಲಿ ರೈಲುಗಳ ಸಂಚಾರ ಆಗಲಿದೆ. ಇದು ಹಸಿರು, ನೇರಳೆ ಮಾರ್ಗದಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಿದೆ. ಈ ಎರಡು ಮಾರ್ಗದಲ್ಲಿ ಒಟ್ಟು 57 ರೈಲುಗಳಿವೆ. ಈ ಪೈಕಿ 52 ರೈಲುಗಳ ಓಡಾಟ ನಡೆಯುತ್ತಿದೆ. ಉಳಿದ ಐದು ರೈಲುಗಳನ್ನು ಮೀಸಲು ಇಡಲಾಗಿದೆ. ತುರ್ತು ಸಮಯದಲ್ಲಿ ಅವುಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ, ಹಳದಿ ಮಾರ್ಗದಲ್ಲಿ ಸದ್ಯಕ್ಕೆ ಇಷ್ಟೊಂದು ರೈಲುಗಳು ಇಲ್ಲದ ಕಾರಣ ಪ್ರಸ್ತುತ ಮೂರು ರೈಲುಗಳು ಸಂಚಾರವಾಗಲಿದ್ದು, 2026ರ ಮಾರ್ಚ್‌ ಅಂತ್ಯದ ವೇಳೆ ಪೂರ್ಣಪ್ರಮಾಣದ ಸಂಚಾರ ಆರಂಭವಾಗಲಿದೆ ಎನ್ನಲಾಗಿದೆ.

Read More
Next Story