ದಿಢೀರ್ ಪ್ರತಿಭಟನೆಗಿಳಿದ ಬಿಎಂಟಿಸಿ ಇವಿ ಬಸ್ ಚಾಲಕರು; ಸಂಚಾರದಲ್ಲಿ ವ್ಯತ್ಯಯ

ಈ ಎಲೆಕ್ಟ್ರಿಕ್ ಬಸ್‌ಗಳ ಚಾಲಕರು ನೇರವಾಗಿ ಬಿಎಂಟಿಸಿ ನೌಕರರಲ್ಲ. ಇವರು ಗುತ್ತಿಗೆ ಆಧಾರದ ಮೇಲೆ ಖಾಸಗಿ ಸಂಸ್ಥೆಯೊಂದರಿಂದ ನೇಮಕಗೊಂಡವರಾಗಿದ್ದಾರೆ. ಒಪ್ಪಂದದ ಪ್ರಕಾರ, ಬಿಎಂಟಿಸಿಯು ಪ್ರತಿ ಕಿಲೋಮೀಟರ್‌ಗೆ ಖಾಸಗಿ ಕಂಪನಿಗೆ ಹಣ ಪಾವತಿಸುತ್ತದೆ. ಆದರೆ, ಚಾಲಕರ ಸಂಬಳ, ಭತ್ಯೆ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿ ಆ ಖಾಸಗಿ ಸಂಸ್ಥೆಯದ್ದೇ ಆಗಿರುತ್ತದೆ.

Update: 2025-10-23 07:53 GMT

ಬಿಎಂಟಿಸಿ

Click the Play button to listen to article

ಅಟೆಂಡೆನ್ಸ್ ಬೋನಸ್ ಹಾಗೂ ವೇತನ ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಎಲೆಕ್ಟ್ರಿಕ್ ಬಸ್ ಚಾಲಕರು ಗುರುವಾರ ದಿಢೀರ್ ಪ್ರತಿಭಟನೆ ಆರಂಭಿಸಿದ್ದಾರೆ. ಮೈಸೂರು ರಸ್ತೆಯ ದೀಪಾಂಜಲಿ ನಗರದಲ್ಲಿರುವ ಬಿಎಂಟಿಸಿ ಡಿಪೋ ಸಂಖ್ಯೆ 16ರಲ್ಲಿ 100ಕ್ಕೂ ಹೆಚ್ಚು ಚಾಲಕರು ಬಸ್‌ಗಳನ್ನು ಡಿಪೋದಿಂದ ಹೊರತೆಗೆಯದೆ ಮುಷ್ಕರ ನಡೆಸುತ್ತಿದ್ದು, ಇದರಿಂದಾಗಿ ಬೆಳಗ್ಗಿನ ಅವಧಿಯಲ್ಲಿ ಹಲವು ಮಾರ್ಗಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಪ್ರಯಾಣಿಕರು ಪರದಾಡುವಂತಾಗಿದೆ.

ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಅಟೆಂಡೆನ್ಸ್ ಬೋನಸ್ ಮತ್ತು ವೇತನ ಭತ್ಯೆಯನ್ನು ತಕ್ಷಣವೇ ಪಾವತಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ. "ಸಮಯಕ್ಕೆ ಸರಿಯಾಗಿ ಸಂಬಳ, ಭತ್ಯೆ ನೀಡುತ್ತಿಲ್ಲ. ಅಪಘಾತವಾದಾಗ ಕಂಪನಿಯಿಂದ ಸರಿಯಾದ ಸ್ಪಂದನೆ ಸಿಗುವುದಿಲ್ಲ, ನಮಗೆ ಯಾವುದೇ ರೀತಿಯ ಭದ್ರತೆಯೂ ಇಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಬಸ್ ಓಡಿಸುವುದಿಲ್ಲ" ಎಂದು ಚಾಲಕರು ಪಟ್ಟು ಹಿಡಿದಿದ್ದಾರೆ.

ಈ ಎಲೆಕ್ಟ್ರಿಕ್ ಬಸ್‌ಗಳ ಚಾಲಕರು ನೇರವಾಗಿ ಬಿಎಂಟಿಸಿ ನೌಕರರಲ್ಲ. ಇವರು ಗುತ್ತಿಗೆ ಆಧಾರದ ಮೇಲೆ ಖಾಸಗಿ ಸಂಸ್ಥೆಯೊಂದರಿಂದ ನೇಮಕಗೊಂಡವರಾಗಿದ್ದಾರೆ. ಒಪ್ಪಂದದ ಪ್ರಕಾರ, ಬಿಎಂಟಿಸಿಯು ಪ್ರತಿ ಕಿಲೋಮೀಟರ್‌ಗೆ ಖಾಸಗಿ ಕಂಪನಿಗೆ ಹಣ ಪಾವತಿಸುತ್ತದೆ. ಆದರೆ, ಚಾಲಕರ ಸಂಬಳ, ಭತ್ಯೆ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿ ಆ ಖಾಸಗಿ ಸಂಸ್ಥೆಯದ್ದೇ ಆಗಿರುತ್ತದೆ.

ಇದೇ ರೀತಿಯ ಸಮಸ್ಯೆಗಳಿಂದಾಗಿ ಈ ಹಿಂದೆ ಬೆಂಗಳೂರಿನ ಕತ್ರಿಗುಪ್ಪೆ ಮತ್ತು ಸೂರ್ಯನಗರ ಡಿಪೋಗಳಲ್ಲಿಯೂ ಇವಿ ಬಸ್ ಚಾಲಕರು ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು. ಆಗಲೂ ಸಹ, ಸಂಬಳ ವಿಳಂಬ ಮತ್ತು ಕಡಿಮೆ ವೇತನದಂತಹ ಸಮಸ್ಯೆಗಳೇ ಮುಷ್ಕರಕ್ಕೆ ಪ್ರಮುಖ ಕಾರಣವಾಗಿದ್ದವು. .

ಸದ್ಯ, ಚಾಲಕರು ಮತ್ತು ಖಾಸಗಿ ಕಂಪನಿಯ ನಡುವಿನ ಮಾತುಕತೆ ವಿಫಲವಾಗಿದ್ದು, ಡಿಪೋದಲ್ಲಿ 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ನಿಂತಲ್ಲೇ ನಿಂತಿವೆ. ಇದರಿಂದಾಗಿ ಮೈಸೂರು ರಸ್ತೆ, ವಿಜಯನಗರ, ಚಂದ್ರ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

Tags:    

Similar News