ಮದುವೆ ಹೆಸರಲ್ಲಿ ಯುವತಿಗೆ ವಂಚನೆ; ಕೊಲೆ ಬೆದರಿಕೆ, ದೂರು ದಾಖಲು
ಮೊಹಮದ್ ಇಶಾಕ್ ಎಂಬಾತ 2024ರ ಅಕ್ಟೋಬರ್ 17ರಂದು ಸಂತ್ರಸ್ತ ಯುವತಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಈತ, ಪ್ರೀತಿ-ಪ್ರೇಮದ ಮಾತುಗಳನ್ನಾಡಿ, 'ನಿಮ್ಮ ಮನೆಯವರೊಂದಿಗೆ ಮಾತನಾಡಿ ನಿನ್ನನ್ನೇ ಮದುವೆಯಾಗುತ್ತೇನೆ' ಎಂದು ನಂಬಿಸಿ ಮೋಸ ಮಾಡಿದ್ದ.
ಆರೋಪಿ ಮೊಹಮದ್ ಇಶಾಕ್
ಮದುವೆಯಾಗುವುದಾಗಿ ನಂಬಿಸಿ ಅನ್ಯ ಧರ್ಮದ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು, ನಂತರ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿರುವ ಘಟನೆಯೊಂದು ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಯುವಕನ ಮೋಸವನ್ನು ಪ್ರಶ್ನಿಸಿದ ಯುವತಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಹಮದ್ ಇಶಾಕ್ ಎಂಬಾತನೇ ಈ ವಂಚನೆ ಎಸಗಿದ ಆರೋಪಿ. 2024ರ ಅಕ್ಟೋಬರ್ 17ರಂದು ಸಂತ್ರಸ್ತ ಯುವತಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಈತ, ಪ್ರೀತಿ-ಪ್ರೇಮದ ಮಾತುಗಳನ್ನಾಡಿ, 'ನಿಮ್ಮ ಮನೆಯವರೊಂದಿಗೆ ಮಾತನಾಡಿ ನಿನ್ನನ್ನೇ ಮದುವೆಯಾಗುತ್ತೇನೆ' ಎಂದು ನಂಬಿಸಿದ್ದ.
ಮದುವೆಯಾಗುವ ಭರವಸೆಯ ಮೇಲೆ, ಯುವಕನು ಯುವತಿಯನ್ನು ಪದೇ ಪದೇ ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಮಯದಲ್ಲಿ, ಯುವಕನಿಗೆ ಬೇರೆ ಯುವತಿಯರೊಂದಿಗೆ ಸಂಪರ್ಕವಿರುವ ಬಗ್ಗೆ ಸಂತ್ರಸ್ತೆಗೆ ತಿಳಿದಿರಲಿಲ್ಲ.2025ರ ಸೆಪ್ಟೆಂಬರ್ 14ರಂದು, ಮೊಹಮದ್ ಇಶಾಕ್ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರ ಸಂತ್ರಸ್ತೆಗೆ ತಿಳಿದುಬಂದಿದೆ. ಇದರಿಂದ ಆಘಾತಗೊಂಡ ಯುವತಿ, ತಾನು ಮೋಸ ಹೋಗಿರುವುದನ್ನು ಅರಿತುಕೊಂಡಿದ್ದಾಳೆ.
ತಕ್ಷಣವೇ ಯುವಕನನ್ನು ಪ್ರಶ್ನಿಸಿದಾಗ, ಆತ, 'ನಿನ್ನ ದಾರಿ ನೀನು ನೋಡಿಕೋ' ಎಂದು ಉಡಾಫೆಯಾಗಿ ಉತ್ತರಿಸಿದ್ದಾನೆ. ನಂತರ, ಯುವತಿ ಮತ್ತೆ ಕರೆ ಮಾಡಿದರೆ, 'ನಿನ್ನನ್ನು ಕೊಲೆ ಮಾಡುತ್ತೇನೆ' ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ, ಯುವತಿಯ ದೂರಿನ ಅನ್ವಯ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಮೊಹಮದ್ ಇಶಾಕ್ ವಿರುದ್ಧ ವಂಚನೆ ಮತ್ತು ಜೀವ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.