ಹಾಸನಾಂಬ ಉತ್ಸವಕ್ಕೆ ಇಂದು ವಿದ್ಯುಕ್ತ ತೆರೆ; 26 ಲಕ್ಷ ಭಕ್ತರಿಂದ ದರ್ಶನ
ಹಾಸನಾಂಬೆ ಉತ್ಸವಕ್ಕೆ ಇಂದು ವಿದ್ಯುಕ್ತವಾಗಿ ತೆರೆ ಬೀಳಲಿದೆ. ತುಪ್ಪದ ದೀಪ ಹಚ್ಚಿ ದೇವರ ಮುಂದೆ ಇಡಲಾಗುತ್ತದೆ. ಈ ದೀಪವು ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆಯುವವರೆಗೂ ನಿರಂತರವಾಗಿ ಉರಿಯುತ್ತಲೇ ಇರುತ್ತದೆ ಎಂಬುದು ಇಲ್ಲಿನ ನಂಬಿಕೆ.
ಗರ್ಭಗುಡಿಯಲ್ಲಿ ಅಲಂಕೃತವಾಗಿರುವ ಹಾಸನಾಂಬೆ
ರಾಜ್ಯದ ಪ್ರಸಿದ್ದ ಧಾರ್ಮಿಕ ಸ್ಥಳವಾದ ಹಾಸನಾಂಬ ದೇವಾಲಯದ ಬಾಗಿಲನ್ನು ಗುರುವಾರ (ಅ.23) ಶಾಸ್ತ್ರೋಕ್ತವಾಗಿ ಮುಚ್ಚಲಾಗುವುದು. ಅ.9 ರಿಂದ ಆರಂಭವಾದ ಹಾಸನಾಂಬೆ ಉತ್ಸವದಲ್ಲಿ ಇಲ್ಲಿಯವರೆಗೆ ಸುಮಾರು 26ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಅ.22ರ ಅಂತ್ಯಕ್ಕೆ ಪ್ರಸಾದ ಹಾಗೂ 1,000ರೂ. ಹಾಗೂ 3,00 ರೂ. ಗಳ ವಿಶೇಷ ಟಿಕೆಟ್‌ನಿಂದಲೇ 20 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಸಾರ್ವಜನಿಕರ ದರ್ಶನದ ಕೊನೆಯ ದಿನವಾಗಿದ್ದ ಬುಧವಾರ 1.60 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಗುರುವಾರ(ಇಂದು) ಪೂಜೆ, ನೈವೇದ್ಯ ಹಾಗೂ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಮುಚ್ಚುವುದರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅ.10ರಂದು 58ಸಾವಿರ, ಅ.11ರಂದು 2.08 ಲಕ್ಷ, ಅ.12ರಂದು 1.45 ಲಕ್ಷ, ಅ.13ರಂದು 2.29 ಲಕ್ಷ , ಅ.14ರಂದು 2.44 ಲಕ್ಷ, ಅ.15ರಂದು 2.47 ಲಕ್ಷ, ಅ.16ರಂದು 2.58 ಲಕ್ಷ, ಅ.17ರಂದು 3.62 ಲಕ್ಷ,ಅ.18 2.17 ಲಕ್ಷ, ಅ.19ರಂದು 1.27ಲಕ್ಷ, ಅ.20ರಂದು 2.02ಲಕ್ಷ, ಅ.21 ರಂದು 1.50 ಲಕ್ಷ, ಅ.22ರಂದು 1.60 ಲಕ್ಷ ಭಕ್ತಾದಿಗಳು ದರ್ಶನ ಪಡೆದಿದ್ದಾರೆ.
ನಂದಾದೀಪ, ನೈವೇದ್ಯ ಅರ್ಪಣೆ
ಇಂದು ದೇವಾಲಯದ ಬಾಗಿಲು ಮುಚ್ಚುವ ಮೊದಲು ಗರ್ಭಗುಡಿಯಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತದೆ. ಒಂದು ತುಪ್ಪದ ದೀಪವನ್ನು ಹಚ್ಚಿ ಇಡಲಾಗುತ್ತದೆ. ಈ ದೀಪವು ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆಯುವವರೆಗೂ ನಿರಂತರವಾಗಿ ಉರಿಯುತ್ತಲೇ ಇರುತ್ತದೆ. ದೇವಿಗೆ ನೈವೇದ್ಯ (ಎರಡು ಚೀಲಗಳಷ್ಟು ಅಕ್ಕಿ, ಆಹಾರ) ಮತ್ತು ಹೂವುಗಳನ್ನು ಇಡಲಾಗುತ್ತದೆ. ಈ ನೈವೇದ್ಯವು ಒಂದು ವರ್ಷದ ನಂತರವೂ ತಾಜಾ ಆಗಿರುತ್ತದೆ ಎಂಬುದು ನಂಬಿಕೆ.
ಗರ್ಭಗುಡಿ ಬಾಗಿಲು ಬಂದ್
ಎಲ್ಲಾ ವಿಧಿವಿಧಾನಗಳು ಮುಗಿದ ನಂತರ, ಗರ್ಭಗುಡಿಯ ಒಳಗೆ ದೇವಿಯ ವಿಗ್ರಹದ ಎದುರು ತುಪ್ಪದ ದೀಪ ಮತ್ತು ನೈವೇದ್ಯವನ್ನು ಇರಿಸಿ, ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲಿಗೆ ಮುದ್ರೆ ಹಾಕಲಾಗುತ್ತದೆ. ಇದು ಮುಂದಿನ ವರ್ಷದ ಜಾತ್ರೆ ಸಮಯದಲ್ಲಿ ಮತ್ತೆ ಪುನಾ ತೆರೆಯುತ್ತದೆ.
ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಹಾಸನಾಂಬ ಉತ್ಸವದ ಕೊನೆಯ ದಿನ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ನಡೆಯುತ್ತದೆ. ಇದು ಹಾಸನಾಂಬ ಜಾತ್ರೆಯ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಹಾಸನಾಂಬೆ ದರ್ಶನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಹೆಚ್.ಡಿ. ರೇವಣ್ಣ , ಕೆ.ಎನ್.ರಾಜಣ್ಣ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ನಟ ಶಿವರಾಜ್‌ಕುಮಾರ್, ನಟಿಯರಾದ ಶೃತಿ, ಜಯಮಾಲಾ, ತಾರಾ ಅನುರಾಧ ಸೇರಿದಂತೆ ಹಲವು ಗಣ್ಯರು ಆಗಮಿಸಿ ದರ್ಶನ ಪಡೆದಿದ್ದಾರೆ.
20 ಕೋಟಿಗೂ ಅಧಿಕ ಹಣ ಸಂಗ್ರಹ ನಿರೀಕ್ಷೆ
ಅ.9ರಿಂದ ಆರಂಭವಾದ ಹಾಸನಾಂಬ ದೇವಾಲಯಕ್ಕೆ ವಿಶೇಷ ದರ್ಶನ ಹಾಗೂ ಪ್ರಸಾದದಿಂದ 20 ಕೋಟಿ ರೂ.ಸಂಗ್ರಹವಾಗಿತ್ತು. ಇನ್ನೂ ಹುಂಡಿ ಹಣ ಎಣಿಕೆ ಬಾಕಿ ಇರುವುದರಿಂದ ಹಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. 2024 ರಲ್ಲಿ ಹಾಸನಾಂಬ ದೇವಾಲಯದ ಒಟ್ಟು ಆದಾಯ (ಹುಂಡಿ ಹಣ ಮತ್ತು ವಿಶೇಷ ದರ್ಶನ ಟಿಕೆಟ್ ಮತ್ತು ಪ್ರಸಾದ ಮಾರಾಟ ಸೇರಿ) 12.63 ಕೋಟಿ ಆಗಿತ್ತು.
ಇದು ದೇವಾಲಯದ ಇತಿಹಾಸದಲ್ಲಿಯೇ ದಾಖಲೆ ಆದಾಯವಾಗಿತ್ತು.ಕಾಣಿಕೆ ಹುಂಡಿ ಹಣವೇ 2.55 ಕೋಟಿ ರೂ, ಚಿನ್ನ 51 ಗ್ರಾಂ, ಬೆಳ್ಳಿ 913 ಗ್ರಾಂ. ಸಂಗ್ರಹವಾಗಿತ್ತು.