ಸಿಎಂ ಸ್ಥಾನಕ್ಕೆ ಎಲ್ಲರೂ ಸಮರ್ಥರೇ, ಇಲ್ಲಿ ಯಾರೂ ಸನ್ಯಾಸಿಗಳಲ್ಲ; ಎಂ.ಬಿ. ಪಾಟೀಲ್ ಅಚ್ಚರಿಯ ಹೇಳಿಕೆ

ಮುಖ್ಯಮಂತ್ರಿ ಬದಲಾವಣೆ, ಆಯ್ಕೆ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ. ಸತೀಶ್ ಜಾರಕಿಹೊಳಿ ಅವರು 2028ಕ್ಕೆ ಸಿಎಂ ಆಕಾಂಕ್ಷಿ ಆಗಿದ್ದರೆ ತಪ್ಪೇನಿದೆ?, ಎಲ್ಲರೂ ಅರ್ಹರಿದ್ದಾರೆ, ಎಲ್ಲಾ ಶಾಸಕರು ಅರ್ಹರಿದ್ದಾರೆ ಎಂದು ಎಂ.ಬಿ.ಪಾಟೀಲ್‌ ಹೇಳಿದರು.

Update: 2025-10-23 08:02 GMT

ಎಂ ಬಿ ಪಾಟೀಲ್‌

'ನವೆಂಬರ್‌ ಕ್ರಾಂತಿ' ಹೇಳಿಕೆಗಳ ಬೆನ್ನಲ್ಲೇ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಜೋರಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ನಾಯಕರು ಸಮರ್ಥರಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿರುವುದು ತೀವ್ರ ಕುತೂಹಲ ಮೂಡಿಸಿದೆ.  

"ಇಲ್ಲಿ ಯಾರೂ ಸನ್ಯಾಸಿಗಳಲ್ಲ. ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಕೃಷ್ಣಭೈರೇಗೌಡ ಎಲ್ಲರೂ ಸಮರ್ಥರಿದ್ದಾರೆ. ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ, ಸಿಎಂ ಸ್ಥಾನಕ್ಕಾಗಿ ನಾವ್ಯಾರು ಹಕ್ಕು ಪ್ರತಿಪಾದಿಸಬೇಕಾಗಿಲ್ಲ" ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ. 

ಹೈಕಮಾಂಡ್ ತೀರ್ಮಾನವೇ ಅಂತಿಮ

ಮುಖ್ಯಮಂತ್ರಿ ಆಯ್ಕೆ ಅಥವಾ ಬದಲಾವಣೆಯ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ. ಸತೀಶ್ ಜಾರಕಿಹೊಳಿ ಅವರು 2028ಕ್ಕೆ ಸಿಎಂ ಆಕಾಂಕ್ಷಿ ಆಗಿದ್ದರೆ ತಪ್ಪೇನಿದೆ?, ಇಲ್ಲಿ ಎಲ್ಲಾ ಶಾಸಕರು ಅರ್ಹರಿದ್ದಾರೆ ಎಂದು ಹೇಳಿದ್ದಾರೆ. 

ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಕುರಿತು ವಿಪಕ್ಷಗಳು ಭವಿಷ್ಯ ನುಡಿಯುತ್ತಿವೆ. ಅವರ ಕನಸು ನನಸಾಗುವುದಿಲ್ಲ. ನಮ್ಮಲ್ಲಿ ಏನೇ ಆದರೂ ಅದು ಬಿಜೆಪಿ ಕೈಯಲ್ಲಿ ಇರುವುದಿಲ್ಲ. ನಮ್ಮಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮವಾಗಿರಲಿದೆ. ಡಿ.ಕೆ. ಶಿವಕುಮಾರ್ ಸಹ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿ, ಚುನಾವಣೆಯಲ್ಲಿ ಶ್ರಮ ವಹಿಸಿದ್ದಾರೆ. ಅವರಿಗೂ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ, ಪರಮೇಶ್ವರ್ ಅವರಿಗೂ ಅರ್ಹತೆ ಇದೆ ಎಂದು ಹೇಳಿದ್ದಾರೆ. 

ಯತೀಂದ್ರ ಹೇಳಿಕೆಗೆ ಸ್ಪಷ್ಟನೆ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, "ಯತೀಂದ್ರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗಮನಿಸಬೇಕು. ಸಿದ್ದರಾಮಯ್ಯ ಅವರದ್ದು ಕೊನೆಯ ಚುನಾವಣೆ ಆಗಿರಬಹುದು, ಮುಂದೆಯೂ ಅವರ ನಾಯಕತ್ವ ಅಗತ್ಯವಿದೆ. ಸಿದ್ದರಾಮಯ್ಯ ಅವರನ್ನು ಬಿಟ್ಟು ಮಾಡೋಕೆ ಆಗಲ್ಲ. ತುಮಕೂರಿಗೆ ಯತೀಂದ್ರ ಹೋಗಿದ್ದರೆ, ಅಲ್ಲಿ ಪರಮೇಶ್ವರ್ ಬಗ್ಗೆ ಹೇಳ್ತಿದ್ರು. ಇದಕ್ಕೆಲ್ಲಾ ಸುಣ್ಣ ಬಣ್ಣ ಹಚ್ಚುವುದು ಬೇಡ" ಎಂದು ಹೇಳಿದ್ದಾರೆ. 

ಸತೀಶ್ ಸಮರ್ಥ ನಾಯಕ, ಆದರೆ ಸಿಎಂ ಕುರ್ಚಿ ಖಾಲಿ ಇಲ್ಲ

ಸತೀಶ್ ಜಾರಕಿಹೊಳಿ ಸಾಮರ್ಥ್ಯವನ್ನು ಶ್ಲಾಘಿಸಿದ ಪಾಟೀಲ್ ಅವರು, "ಸತೀಶ್ ಜಾರಕಿಹೊಳಿ ಪ್ರಮುಖ ನಾಯಕರು. ಸಿಎಂ ಆಗುವ ಎಲ್ಲ ಅರ್ಹತೆ ಅವರಿಗಿದೆ. ಆದರೆ, ನಮ್ಮಲ್ಲಿ ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಸತೀಶ್ ಜಾರಕಿಹೊಳಿ ಸಮರ್ಥರಿದ್ದಾರೆ, ಸಂಘಟನಾ ಚತುರರು. 2028ಕ್ಕೆ ಸಿಎಂ ಆಗುತ್ತೇನೆ ಎಂದರೆ ತಪ್ಪೇನಿದೆ?, ನಾವು 2028ಕ್ಕೆ 150 ಸ್ಥಾನ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಅಂತಿಮ ಅಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಏಕಾಏಕಿ ತೀರ್ಮಾನ ಮಾಡಿದರೂ ಯಾರು ಪ್ರಶ್ನೆ ಮಾಡಲು ಆಗುವುದಿಲ್ಲ. ಶಾಸಕರ ಅಭಿಪ್ರಾಯವೂ ಮುಖ್ಯವೇ ಹೌದು. ಹೈಕಮಾಂಡ್ ಶಾಸಕರ ಅಭಿಪ್ರಾಯವೂ ಕೇಳುತ್ತೆ. ಯಾವಾಗ ಏನು ಸೂಕ್ತವೋ ಅದನ್ನು ಹೈಕಮಾಂಡ್ ಮಾಡುತ್ತದೆ ಎಂದು ತಿಳಿಸಿದ್ದಾರೆ. 

Tags:    

Similar News