ತಾಪಂ, ಜಿಪಂ ಮೀಸಲಾತಿ | ಮತ್ತೆ ಮೂರು ವಾರ ಕಾಲಾವಕಾಶ ಕೋರಿದ ಸರ್ಕಾರ

Update: 2024-09-06 13:05 GMT

ಕಳೆದ ನಾಲ್ಕು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಿಗೆ ಮೀಸಲಾತಿ ನಿಗದಿ ಮಾಡಲು ರಾಜ್ಯ ಸರ್ಕಾರ ಪುನಃ ಮೂರು ವಾರಗಳ ಕಾಲಾವಕಾಶ ಕೋರಿ ಹೈಕೋರ್ಟಿಗೆ ಮನವಿ ಮಾಡಿದೆ.

ಸರ್ಕಾರ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಮೀಸಲಾತಿ ನಿಗದಿ ಮಾಡಲು ವಿಳಂಬ ಮಾಡುತ್ತಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ ಎಂದು ಸಲ್ಲಿಕೆಯಾಗಿರುವ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ವೇಳೆ ರಾಜ್ಯ ಸರ್ಕಾರ ಈ ಮನವಿ ಮಾಡಿದೆ.

ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಕಾಮೇಶ್ವರ್ ರಾವ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ಹಾಜರಾದ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, "ಎಲ್ಲಾ 31 ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ಮುಗಿದಿದೆ. ಈಗ ಮೀಸಲಾತಿ ನಿಗದಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ ಇನ್ನೂ ಮೂರು ವಾರಗಳ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

ಆ ಕೋರಿಕೆಯನ್ನು ಮನ್ನಿಸಿದ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು. ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಹಾಗೂ ಅರ್ಜಿದಾರರ ಪರ ಎ ಮೊಹಮ್ಮದ್ ತಾಹೀರ್ ಅವರುಗಳು ವಿಚಾರಣೆಗೆ ಹಾಜರಾಗಿದ್ದರು.

12 ವಾರಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳ ಮೀಸಲಾತಿ ಘೋಷಿಸಲಾಗುವುದು ಎಂದು ಈ ಹಿಂದೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆದರೆ, 2023ರ ಡಿಸೆಂಬರ್ 19ರಂದು ಮಾಡಿದ್ದ ಆ ಮನವಿಯಂತೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿ ಮಾಡಿ ಘೋಷಿಸುವಲ್ಲಿ ವಿಫಲವಾಗಿತ್ತು. ರಾಜ್ಯ ಸರ್ಕಾರದ ಈ ಲೋಪ, ನ್ಯಾಯಾಂಗ ನಿಂದನೆಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಹಾಗೇ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುವಲ್ಲಿ ಏಕಸದಸ್ಯ ಪೀಠದ ಆದೇಶ ಪಾಲಿಸದೆ ಸರ್ಕಾರ ನ್ಯಾಯಾಂಗ ನಿಂದನೆ ಎಸಗಿದೆ ಎಂದು ಮತ್ತೊಂದು ದೂರು ಕೂಡ ಸಲ್ಲಿಕೆಯಾಗಿದೆ.

ಈ ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾ. ವಿ ಕಾಮೇಶ್ವರ್ ರಾವ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

Tags:    

Similar News