ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸದಿದ್ದರೆ ಬೃಹತ್‌ ಹೋರಾಟ; ಬಿಜೆಪಿ ಎಚ್ಚರಿಕೆ

ಬಾಗಲಕೋಟೆ, ಬಿಜಾಪುರ ಜಿಲ್ಲೆ ಸೇರಿ ಈ ಭಾಗದ ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

Update: 2025-11-04 10:51 GMT

ಬೆಳಗಾವಿಯಲ್ಲಿ ನಡೆದ ಕಬ್ಬು ಬೆಳೆಗಾರರ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದರು. 

Click the Play button to listen to article

ಕಬ್ಬಿಗೆ ವೈಜ್ಞಾನಿಕ ದರ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಆರನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ಕಾವು ಮತ್ತಷ್ಟು ತೀವ್ರಗೊಂಡಿದೆ. ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಒಕ್ಕೊರಲಿನಿಂದ ಕಿಡಿಕಾರಿದ್ದು, ತಕ್ಷಣವೇ ರೈತರ ಸಮಸ್ಯೆ ಬಗೆಹರಿಸದಿದ್ದರೆ, ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ಸರ್ಕಾರಕ್ಕೆ ಆದಾಯವಿದೆ, ಆದರೆ ರೈತರಿಗೆ ಸ್ಪಂದನೆಯಿಲ್ಲ: ಬಿ.ವೈ. ವಿಜಯೇಂದ್ರ

ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ಬೆಂಬಲ ಸೂಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ರಾಜ್ಯದಲ್ಲಿ ಪ್ರತಿ ವರ್ಷ 60 ಲಕ್ಷ ಟನ್ ಕಬ್ಬು ಅರೆಯಲಾಗುತ್ತಿದ್ದು, ಮೊಲಾಸೆಸ್ ಮತ್ತು ಎಥೆನಾಲ್‌ನಂತಹ ಉಪ-ಉತ್ಪನ್ನಗಳಿಂದಲೇ ಸರ್ಕಾರಕ್ಕೆ ಸುಮಾರು 55,000 ಕೋಟಿ ರೂಪಾಯಿ ಆದಾಯ ಬರುತ್ತದೆ. ಇಷ್ಟೆಲ್ಲಾ ಆದಾಯವಿದ್ದರೂ, ಸರ್ಕಾರ ಸಂಕಷ್ಟದಲ್ಲಿರುವ ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ," ಎಂದು ಅವರು ಆರೋಪಿಸಿದರು.

"ಭೀಕರ ಮಳೆಯಿಂದ ತೊಂದರೆಗೆ ಸಿಲುಕಿರುವ ರೈತರು ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಕಂದಾಯ ಅಥವಾ ಕೃಷಿ ಸಚಿವರಾಗಲಿ ಈ ಭಾಗಕ್ಕೆ ಭೇಟಿ ನೀಡಿಲ್ಲ. ಇದು ರೈತರ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ," ಎಂದು ವಿಜಯೇಂದ್ರ ಕಿಡಿಕಾರಿದರು.

2014ರಲ್ಲಿ ರೈತ ವಿಠಲ ಅರಬಾವಿ ಅವರ ಬಲಿದಾನವನ್ನು ಸ್ಮರಿಸಿದ ಅವರು, "ಅಂದು ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ಬೀದಿಗಿಳಿದು ಹೋರಾಟ ಮಾಡಿ, ಸರ್ಕಾರದಿಂದ ಹೆಚ್ಚುವರಿ ದರವನ್ನು ಕೊಡಿಸಿದ್ದರು. ಇಂದು ಕಾಂಗ್ರೆಸ್ ಸರ್ಕಾರಕ್ಕೆ ಆ ಇಚ್ಛಾಶಕ್ತಿ ಇಲ್ಲ. ಅವರಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಆಂತರಿಕ ಯುದ್ಧ ನಡೆಯುತ್ತಿದೆ. ರೈತರ ಸಮಸ್ಯೆ ಬಗೆಹರಿಸುವ ಬದಲು, ಅವರು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.

ರೈತರಿಗೆ ನ್ಯಾಯಯುತ ಬೆಲೆ ನೀಡಿ: ನಿಖಿಲ್ ಕುಮಾರಸ್ವಾಮಿ

ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಮಹಾರಾಷ್ಟ್ರ ಸರ್ಕಾರವು ಪ್ರತಿ ಟನ್‌ಗೆ 3,550 ರೂಪಾಯಿ ದರ ನಿಗದಿಪಡಿಸಿದೆ. ಆದರೆ, ತಮ್ಮನ್ನು 'ರೈತರ ಚಾಂಪಿಯನ್' ಎಂದು ಕರೆದುಕೊಳ್ಳುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಇನ್ನೂ ಬೆಲೆ ನಿಗದಿ ಮಾಡಿಲ್ಲ. ರಾಜಕಾರಣಿಗಳೇ ಸಕ್ಕರೆ ಕಾರ್ಖಾನೆಗಳ ಮಾಲೀಕರಾದಾಗ, ರೈತರ ಪರ ಯಾರು ನಿಲ್ಲುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ.

"ನಮಗೆ ಅನ್ನ ನೀಡುವ ರೈತರನ್ನು ರಕ್ಷಿಸಲು ನಾವೆಲ್ಲರೂ ಒಗ್ಗೂಡಬೇಕು. ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರೊಂದಿಗೆ ನಿಂತು, ಅವರಿಗೆ ನ್ಯಾಯಯುತ ಬೆಲೆ ನೀಡಬೇಕು," ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.


Tags:    

Similar News