ಕೆ-ಸೆಟ್ 2025 ಪರೀಕ್ಷೆ: ಕೀ ಉತ್ತರಗಳು ಪ್ರಕಟ, ಆಕ್ಷೇಪಣೆ ಸಲ್ಲಿಸಲು ನವೆಂಬರ್ 6 ಕೊನೆಯ ದಿನ
ಪ್ರತಿ ಆಕ್ಷೇಪಣೆಗೂ 50 ರೂಪಾಯಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಕೆಇಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಆಕಾಂಕ್ಷಿಗಳಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ನವೆಂಬರ್ 2ರಂದು ನಡೆದಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) 2025ರ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಂಗಳವಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ 1.36 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಇದೀಗ ತಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಆಕ್ಷೇಪಣೆ ಸಲ್ಲಿಸುವುದು ಹೇಗೆ?
ಕೆ-ಸೆಟ್ ಪರೀಕ್ಷೆಯ ಕೀ ಉತ್ತರಗಳ ಕುರಿತು ಯಾವುದೇ ಆಕ್ಷೇಪಣೆಗಳಿದ್ದರೆ, ಅಭ್ಯರ್ಥಿಗಳು ಅವುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 6, ಮಧ್ಯಾಹ್ನ 3 ಗಂಟೆಯೊಳಗೆ, ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಲಿಂಕ್ ಮೂಲಕ, ಸೂಕ್ತ ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಗಳನ್ನು ಅಪ್‌ಲೋಡ್ ಮಾಡಬೇಕು. ಪ್ರತಿ ಆಕ್ಷೇಪಣೆಗೂ 50 ರೂಪಾಯಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಪರೀಕ್ಷೆಯ ವಿವರಗಳು
ಈ ಬಾರಿಯ ಕೆ-ಸೆಟ್ ಪರೀಕ್ಷೆಯು ಒಟ್ಟು 33 ವಿಷಯಗಳಿಗೆ, ರಾಜ್ಯದ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ನಡೆದಿತ್ತು. ಬೆಂಗಳೂರಿನಲ್ಲಿ ಎಲ್ಲಾ 33 ವಿಷಯಗಳ ಪರೀಕ್ಷೆಗಳು ನಡೆದರೆ, ಉಳಿದ ಜಿಲ್ಲೆಗಳಲ್ಲಿ 11 ಪ್ರಮುಖ ವಿಷಯಗಳ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಮೌಲ್ಯಮಾಪನ ಇರುವುದಿಲ್ಲ. ಅಭ್ಯರ್ಥಿಗಳು 100 ಅಂಕಗಳ ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು 200 ಅಂಕಗಳ ತಮ್ಮ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆಗೆ ಉತ್ತರಿಸಿದ್ದರು.