ಆರ್​​ಬಿಐ ಹಿಂಪಡೆದ 2000 ರೂ. ನೋಟುಗಳಿಗೆ ಪೂಜೆ ನೆಪದಲ್ಲಿ ವಂಚಿಸುತ್ತಿದ್ದ 10 ಮಂದಿ ಅರೆಸ್ಟ್

ಮೊದಲ ಆರೋಪಿಯು ನೀಡಿದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಹಂತ ಹಂತವಾಗಿ ಕಾರ್ಯಾಚರಣೆ ನಡೆಸಿ, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಆಂಧ್ರಪ್ರದೇಶದ ವಿವಿಧೆಡೆ ತಲೆಮರೆಸಿಕೊಂಡಿದ್ದ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ.

Update: 2025-11-04 10:52 GMT

ಸಾಂದರ್ಭಿಕ ಚಿತ್ರ 

Click the Play button to listen to article

‘ವಿಶೇಷ ಪೂಜೆ’ಯ ಮೂಲಕ ನೀವು ನೀಡಿದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೂರು ಪಟ್ಟು ಹೆಚ್ಚಿಸಿ, 'ಹಣದ ಮಳೆ' ಸುರಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ 10 ಮಂದಿಯ ಅಂತರರಾಜ್ಯ ಜಾಲವನ್ನು ಹಲಸೂರು ಗೇಟ್ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 18 ಲಕ್ಷ ಮೌಲ್ಯದ 2000 ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಲಾವಣೆಯಿಂದ ಹಿಂಪಡೆಯಲಾದ 2000 ಮುಖಬೆಲೆಯ ನೋಟುಗಳ ಸರಣಿ ಮತ್ತು ಕ್ರಮಸಂಖ್ಯೆಗಳನ್ನು ತಿದ್ದಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ (ಆರ್‌ಬಿಐ) ಜಮಾ ಮಾಡಲಾಗುತ್ತಿದೆ ಎಂದು ಅಕ್ಟೋಬರ್ 17ರಂದು ಆರ್‌ಬಿಐ ವ್ಯವಸ್ಥಾಪಕರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಕಬ್ಬನ್‌ಪೇಟೆಯ ನಿವಾಸಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಈ ಬೃಹತ್ ವಂಚನೆ ಜಾಲ ಬೆಳಕಿಗೆ ಬಂದಿದೆ.

ಆರೋಪಿಗಳ ಬಂಧನ

ಮೊದಲ ಆರೋಪಿಯು ನೀಡಿದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಹಂತ ಹಂತವಾಗಿ ಕಾರ್ಯಾಚರಣೆ ನಡೆಸಿ, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಆಂಧ್ರಪ್ರದೇಶದ ವಿವಿಧೆಡೆ ತಲೆಮರೆಸಿಕೊಂಡಿದ್ದ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ, 2000 ರೂಪಾಯಿ ನೋಟುಗಳ ಸರಣಿ ಸಂಖ್ಯೆ, ಮುದ್ರಿತ ವರ್ಷ ಇತ್ಯಾದಿಗಳನ್ನು ತಿದ್ದಲು ಬೇಕಾದ ಪರಿಕರಗಳನ್ನು ಪೂರೈಸುತ್ತಿದ್ದ ಯಶವಂತಪುರದ ಪ್ರಮುಖ ಆರೋಪಿಯೂ ಸೇರಿದ್ದಾನೆ. ಆತನಿಂದ 6 ಲಕ್ಷ ರೂಪಾಯಿ ನಗದು ಮತ್ತು ನೋಟು ತಿದ್ದುವ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಂಚನೆಯ ವಿಧಾನ

ಈ ಜಾಲವು, ಚಲಾವಣೆಯಿಂದ ಹಿಂಪಡೆಯಲಾದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹೊಂದಿರುವ ಸಾರ್ವಜನಿಕರನ್ನು ಸಂಪರ್ಕಿಸುತ್ತಿತ್ತು. 'ವಿಶೇಷ ಪೂಜೆ' ಮಾಡಿದರೆ, ನಿಮ್ಮ ಹಣ ನೂರು ಪಟ್ಟು ಹೆಚ್ಚಾಗುತ್ತದೆ (ಬಾರಿಷ್) ಎಂದು ನಂಬಿಸುತ್ತಿದ್ದರು. ಈ ಆಮಿಷಕ್ಕೆ ಒಳಗಾದವರಿಂದ ನೋಟುಗಳನ್ನು ಪಡೆದು, ಅವುಗಳನ್ನು ಇದೇ ಜಾಲದ ಇನ್ನೊಬ್ಬ ಸದಸ್ಯನಿಗೆ ನೀಡಿ, ಸರಣಿ ಸಂಖ್ಯೆಗಳನ್ನು ಬದಲಾಯಿಸಿ, ಆರ್‌ಬಿಐಗೆ ಜಮಾ ಮಾಡಿ, ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.

ಬಂಧಿತ 10 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Tags:    

Similar News