ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದಕ್ಕೆ ನಿರ್ಬಂಧ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಚಟುವಟಿಕೆಗಳಿಗೆ ಪರೋಕ್ಷವಾಗಿ ನಿರ್ಬಂಧ ಹೇರುವ ಉದ್ದೇಶದಿಂದ, 2025ರ ಅಕ್ಟೋಬರ್ 18ರಂದು ರಾಜ್ಯ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಮಂದಿ ಸೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು.

Update: 2025-11-04 11:21 GMT
ಕರ್ನಾಟಕ ಹೈಕೋರ್ಟ್‌
Click the Play button to listen to article

ಸಾರ್ವಜನಿಕ ಸ್ಥಳಗಳಾದ ರಸ್ತೆ, ಉದ್ಯಾನ, ಮತ್ತು ಆಟದ ಮೈದಾನಗಳಲ್ಲಿ 10ಕ್ಕಿಂತ ಹೆಚ್ಚು ಜನರು ಸೇರುವುದನ್ನು 'ಅಕ್ರಮ ಕೂಟ' ಎಂದು ಪರಿಗಣಿಸಿ, ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ವಿಭಾಗೀಯ ಪೀಠವು ಪೂರ್ಣಗೊಳಿಸಿದ್ದು, ತನ್ನ ತೀರ್ಪನ್ನು ಕಾಯ್ದಿರಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಚಟುವಟಿಕೆಗಳಿಗೆ ಪರೋಕ್ಷವಾಗಿ ನಿರ್ಬಂಧ ಹೇರುವ ಉದ್ದೇಶದಿಂದ, 2025ರ ಅಕ್ಟೋಬರ್ 18ರಂದು ರಾಜ್ಯ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಮಂದಿ ಸೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ 'ಪುನಶ್ಚೇತನ ಸೇವಾ ಸಂಸ್ಥೆ'ಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, "ಸರ್ಕಾರದ ಈ ಆದೇಶವು ಸಂವಿಧಾನದ 19(1)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 19(1)(ಬಿ) (ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತವಾಗಿ ಸೇರುವ) ವಿಧಿಗಳ ಅಡಿಯಲ್ಲಿ ಸಾರ್ವಜನಿಕರಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವಂತಿದೆ. ಮೂಲಭೂತ ಹಕ್ಕುಗಳನ್ನು ಕಾನೂನು ರೂಪಿಸುವ ಮೂಲಕ ನಿರ್ಬಂಧಿಸಬಹುದೇ ಹೊರತು, ಸರ್ಕಾರಿ ಆದೇಶದ ಮೂಲಕವಲ್ಲ," ಎಂದು ಅಭಿಪ್ರಾಯಪಟ್ಟು, ಅಕ್ಟೋಬರ್ 28ರಂದು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ, ರಾಜ್ಯ ಸರ್ಕಾರವು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಸರ್ಕಾರ ಮತ್ತು ಅರ್ಜಿದಾರರ ವಾದ-ಪ್ರತಿವಾದ

ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ಬಿ. ಗೀತಾ ಅವರಿದ್ದ ವಿಭಾಗೀಯ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ, ಎರಡೂ ಕಡೆಯಿಂದ ತೀವ್ರ ವಾದ-ಪ್ರತಿವಾದ ನಡೆಯಿತು. ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, "ಸರ್ಕಾರಿ ಆಸ್ತಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಜವಾಬ್ದಾರಿ. ಅನುಮತಿ ಇಲ್ಲದೆ ಖಾಸಗಿ ಸಂಸ್ಥೆಗಳು ಸರ್ಕಾರಿ ಆಸ್ತಿಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ರಸ್ತೆ, ಮೈದಾನಗಳಲ್ಲಿ ರ್ಯಾಲಿ, ಸಮಾವೇಶ ನಡೆಸಿದರೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದನ್ನು ತಡೆಯಲು ಈ ಆದೇಶ ಹೊರಡಿಸಲಾಗಿದೆ," ಎಂದು ಸಮರ್ಥಿಸಿಕೊಂಡರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, "ಸಾರ್ವಜನಿಕ ಸ್ಥಳಗಳು ಜನರಿಗಾಗಿ ಇರುವುದೇ ಹೊರತು, ಸರ್ಕಾರದ ಸ್ವತ್ತಲ್ಲ. ಮೈದಾನದಲ್ಲಿ ಕ್ರಿಕೆಟ್ ಆಡಲು ಪ್ರತಿದಿನವೂ ಸರ್ಕಾರದ ಅನುಮತಿ ಪಡೆಯಬೇಕೇ? ಶಾಂತಿಯುತವಾಗಿ ಸೇರುವುದನ್ನು ನಿರ್ಬಂಧಿಸುವುದು ಸಂವಿಧಾನಬಾಹಿರ. ಇದು ಸರ್ಕಾರದ ಸ್ವೇಚ್ಛೆಯ ಆದೇಶವಾಗಿದೆ. ಸರ್ಕಾರಕ್ಕೆ ನಿಜವಾಗಿಯೂ ನಿಯಂತ್ರಿಸಬೇಕಿದ್ದರೆ, ಕಾನೂನು ರೂಪಿಸಲಿ, ಕಾರ್ಯಕಾರಿ ಆದೇಶದ ಮೂಲಕ ಜನರ ಹಕ್ಕುಗಳನ್ನು ಕಸಿಯಬಾರದು," ಎಂದು ಬಲವಾಗಿ ವಾದಿಸಿದರು.

ಎರಡೂ ಕಡೆಯ ವಾದವನ್ನು ಆಲಿಸಿದ ವಿಭಾಗೀಯ ಪೀಠವು, ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ರಾಜ್ಯದಾದ್ಯಂತ ಈ ಪ್ರಕರಣದ ಕುರಿತು ತೀವ್ರ ಕುತೂಹಲ ಮೂಡಿದೆ.

Similar News