ʼಟಾಕ್ಸಿಕ್ʼ ಚಿತ್ರೀಕರಣದ ಸೆಟ್ ಜಾಗ ನಮ್ಮದಲ್ಲ: ಎಚ್‌ಎಂಟಿ ಸ್ಪಷ್ಟನೆ
ʼಟಾಕ್ಸಿಕ್ʼ ಚಿತ್ರದ ಚಿತ್ರೀಕರಣಕ್ಕೆ ಸೆಟ್ ಹಾಕಿರುವ ಜಾಗ ಕೆನರಾ ಬ್ಯಾಂಕ್ ಸುಪರ್ದಿಯಲ್ಲಿದೆ ಎಂದು ಎಚ್‌ಎಂಟಿ ತನ್ನ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅಲ್ಲದೇ ಚಿತ್ರೀಕರಣದ ನಡೆದ ಜಾಗ ಉಪಗ್ರಹ ಚಿತ್ರದ ಮೇಲೂ ಕೆನರಾ ಬ್ಯಾಂಕ್ ಸ್ವತ್ತು ಎಂದು ಬರೆದು ಪೋಸ್ಟ್ ಹಂಚಿಕೊಂಡಿದೆ.;
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ನಡೆದಿರುವ ಜಾಗಕ್ಕೂ ತಮಗೂ ಸಂಬಂಧವಿಲ್ಲ ಎಂದು ಎಚ್ಎಂಟಿ ಸಂಸ್ಥೆ ಸ್ಪಷ್ಟಪಡಿಸಿದೆ.
ಟಾಕ್ಸಿಕ್ ಚಿತ್ರೀಕರಣಕ್ಕೆ ಸೆಟ್ ಹಾಕಿರುವ ಜಾಗ ಕೆನರಾ ಬ್ಯಾಂಕ್ ಸುಪರ್ದಿಯಲ್ಲಿದೆ ಎಂದು ತನ್ನ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅಲ್ಲದೇ ಚಿತ್ರೀಕರಣದ ನಡೆದ ಜಾಗ ಉಪಗ್ರಹ ಚಿತ್ರದ ಮೇಲೂ ಕೆನರಾ ಬ್ಯಾಂಕ್ ಸ್ವತ್ತು ಎಂದು ಬರೆದು ಪೋಸ್ಟ್ ಹಂಚಿಕೊಂಡಿದೆ.
ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕಾಗಿ ಎಚ್ಎಂಟಿ ಜಾಗದಲ್ಲಿ ಅರಣ್ಯ ನಾಶ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಚಿತ್ರೀಕರಣದ ಸೆಟ್ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಎಚ್ಎಂಟಿ ಕಾರ್ಖಾನೆಗೆ ನೀಡಿದ್ದ ಜಾಗವನ್ನು ಅಕ್ರಮವಾಗಿ ಕೆನರಾ ಬ್ಯಾಂಕಿಗೆ ಮಾರಾಟ ಮಾಡಿದ್ದಾರೆ. ಬ್ಯಾಂಕ್ ಆ ಜಾಗವನ್ನು ಚಿತ್ರೀಕರಣಕ್ಕಾಗಿ ಬಾಡಿಗೆ ನೀಡಿದೆ. ಮೂಲ ಅರಣ್ಯ ಇಲಾಖೆಗೆ ಸೇರಿರುವ ಈ ಜಾಗದಲ್ಲಿ ನೂರಾರು ಮರಗಳನ್ನು ಕಡಿಯಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಚಿವರು ಸ್ಥಳ ಪರಿಶೀಲನೆ ನಡೆಸಿ, ಆ ಕುರಿತು ತನಿಖೆ ನಡೆಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಚಿತ್ರೀಕರಣ ಸೆಟ್ ಜಾಗಕ್ಕೆ ಸಚಿವರು ಭೇಟಿ ನೀಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಈಶ್ವರ್ ಖಂಡ್ರೆ ಅವರು ಎಚ್ಎಂಟಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಎಚ್ಎಂಟಿ ಸಂಸ್ಥೆ ಅದು ತನ್ನ ಜಾಗವಲ್ಲ ಎಂದು ಹೇಳಿರುವುದು ಮತ್ತೊಂದು ವಿವಾದಕ್ಕೆ ಮತ್ತೊಂದು ತಿರುವು ನೀಡಿದೆ.