ರಾಜ್ಯದಲ್ಲಿ ಮುಸಲಧಾರೆ ಅಬ್ಬರ : ಬೆಂಗಳೂರು ಸೇರಿ ಹಲವೆಡೆ ಮುಂಜಾನೆ ಮಳೆ
ಕೇರಳದ ಕರಾವಳಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಮೋಡ ಕವಿದ ವಾತಾವರಣ ಇದ್ದು, ರಾತ್ರಿ ವೇಳೆ ಮಳೆಯಾಗುತ್ತಿದೆ.;
ಭಾರೀ ಮಳೆ
ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಕೇರಳದ ಕರಾವಳಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಮೋಡ ಕವಿದ ವಾತಾವರಣ ಇದ್ದು, ರಾತ್ರಿ ವೇಳೆ ಮಳೆಯಾಗುತ್ತಿದೆ.
ಕರಾವಳಿ: ಕೇರಳದ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ.
ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕರಾವಳಿ ತೀರ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ.
ಕೇರಳ ಕರಾವಳಿಯಲ್ಲಿ ಉಂಟಾಗಿದ್ದ ಮೇಲ್ಮೈ ಸುಳಿಗಾಳಿಯು ದಕ್ಷಿಣ ಕನ್ನಡ, ಉಡುಪಿ ಕರಾವಳಿವರೆಗೆ ಹಬ್ಬಿದ್ದು, ಸಂಜೆಯ ವೇಳೆಗೆ ಶಿಥಿಲಗೊಳ್ಳಲಿದೆ.
ಈಗಿನಂತೆ ಮುಂದಿನ 10 ದಿನಗಳವರೆಗೂ ಬಿಸಿಲು ಹಾಗೂ ಅಲ್ಲಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡು : ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕೊಡಗು ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂದು ಮಧ್ಯಾಹ್ನದ ನಂತರ, ಸಂಜೆ, ರಾತ್ರಿ ಮಳೆಯಾಗುವ ಮುನ್ಸೂಚನೆ ಇದ್ದು, ಉಳಿದ ಭಾಗಗಳಲ್ಲಿ ರಾತ್ರಿ ವೇಳೆ ಮಳೆ ಬೀಳಲಿದೆ.
ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ.
ಒಳನಾಡು : ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಇಂದು ಮುಂಜಾನೆ ಮಳೆಯಾಗಿದ್ದು, ತಡ ರಾತ್ರಿ ಅಥವಾ ನಾಳೆ ಮುಂಜಾನೆ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಚಾಮರಾಜನಗರದ ಅಲ್ಲಲ್ಲಿ ತುಂತುರು ಮಳೆಯಾಗಲಿದೆ.
ಮುಂಗಾರು ದುರ್ಬಲಗೊಂಡಿದ್ದು, ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ ಬಂಗಾಳಕೊಲ್ಲಿಯ ಕಡೆಯಿಂದ ಗಾಳಿ ಸೆಳೆಯಲ್ಪಡುವುದರಿಂದ ರಾಜ್ಯದ ಒಳನಾಡು ಭಾಗಗಳಲ್ಲಿ ಮಳೆಯಾಗುತ್ತಿದೆ.