Toll Rate Hike | ಏಪ್ರಿಲ್ನಿಂದ ರಾಜ್ಯದಲ್ಲಿ ಟೋಲ್ ಸುಂಕ ಏರಿಕೆ
ಏಪ್ರಿಲ್ 1 ರಿಂದ ಕರ್ನಾಟಕದಾದ್ಯಂತ ಟೋಲ್ ಸುಂಕ ಶೇ.3-5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂಲಗಳು ತಿಳಿಸಿವೆ.;
ರಾಜ್ಯದಲ್ಲಿ ಟೋಲ್ ದರ ಏರಿಕೆಯಾಗಲಿದೆ.
ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ನಂದಿನಿ ಹಾಲು, ಬಸ್ ಹಾಗೂ ಮೆಟ್ರೋ ಪ್ರಯಾಣ ದರ ಹೆಚ್ಚಾಗಿದೆ. ಬೆಲೆ ಏರಿಕೆ ಈ ಸರಣಿಗೆ ಇದೀಗ ಟೋಲ್ ಸುಂಕ ಕೂಡ ಸೇರುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಕೂಡ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬರೆ ಎಳೆಯಲು ಮುಂದಾಗಿದೆ.
ಏಪ್ರಿಲ್ 1 ರಿಂದ ಕರ್ನಾಟಕದಾದ್ಯಂತ ಟೋಲ್ ಸುಂಕ ಶೇ 3-5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ ಹೆಚ್ಚಳಕ್ಕೆ ಎನ್ಎಚ್ಎಐ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಸುಮಾರು 66 ಟೋಲ್ ಪ್ಲಾಜಾಗಳಿವೆ. ಟೋಲ್ ಸುಂಕ ಹೆಚ್ಚಾಗುವ ಟೋಲ್ ಪ್ಲಾಜಾಗಳಲ್ಲಿ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಟೋಲ್ ಪ್ಲಾಜಾಗಳೂ ಸೇರಿವೆ.