ಅಭಿಮಾನಿಗಳಿಂದ 'ವರನಟ' ಡಾ ರಾಜ್‌ಕುಮಾರ್ ಜನ್ಮದಿನ ಆಚರಣೆ
ಇಂದು ಅಣ್ಣಾವ್ರ ಜನ್ಮದಿನದ ಪ್ರಯುಕ್ತ ಡಾ.ರಾಜ್‌ಕುಮಾರ್ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.
ಇಂದು ವರನಟ ದಿವಂಗತ ಡಾ.ರಾಜ್‌ಕುಮಾರ್ ಅವರ 95ನೇ ಜನ್ಮದಿನ. ಡಾ. ರಾಜ್‌ಕುಮಾರ್ ಅವರು ಏಪ್ರಿಲ್ 24, 1929ರಂದು ಚಾಮರಾಜನಗರ ಜಿಲ್ಲೆಯ ತಾಳವಾಡಿ ತಾಲೂಕಿನಲ್ಲಿ ದೊಡ್ಡಗಾಜನೂರಿನಲ್ಲಿ ಜನಿಸಿದ್ದರು. ಇಂದು ಅಣ್ಣಾವ್ರ ಜನ್ಮದಿನದ ಪ್ರಯುಕ್ತ ಡಾ.ರಾಜ್‌ಕುಮಾರ್ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಸ್ಮಾರಕದ ಬಳಿ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ಡಾ.ರಾಜ್ ಪುತ್ರಿ ಲಕ್ಷ್ಮಿ ದಂಪತಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಪುತ್ರಿ ವಂದಿತಾ ಹಾಗೂ ಕುಟುಂಬವರ್ಗದವರು ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ.
ಕುಟುಂಬದ ಸದಸ್ಯರು ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.
ಸಮಾಧಿಗೆ ಹೂವಿನ ಅಲಂಕಾರ
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ರಾಜ್‌ಕುಮಾರ್ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದ್ದು, ನೂರಾರು ಜನರು ಭೇಟಿ ನೀಡುತ್ತಿದ್ದಾರೆ. ಸಮಾಧಿ ಮುಂದೆ ಕೇಕ್‌ಗಳನ್ನು ಇಟ್ಟು ಅಭಿಮಾನಿಗಳು ತಮ್ಮ ಪ್ರೀತಿ ತೋರುತ್ತಿದ್ದಾರೆ.
ಸಮಾಧಿ ಬಳಿ ರಕ್ತದಾನ, ಅನ್ನದಾನ, ನೇತ್ರದಾನ
ಬದುಕಿದ್ದಾಗ ನೇತ್ರದಾನದ ಮೂಲಕ ಜಾಗೃತಿ ಮೂಡಿಸಿದ್ದ ರಾಜ್‌ಕುಮಾರ್, ತಮ್ಮ ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅವರ ಸಮಾಧಿ ಸ್ಥಳದ ಬಳಿ ನೇತ್ರದಾನ ನೋಂದಣಿ, ರಕ್ತದಾನ, ಅನ್ನದಾನದ ಕಾರ್ಯಗಳು ನಡೆದವು. ಪುಣ್ಯಭೂಮಿಗೆ ಬರುವ ಅಭಿಮಾನಿಗಳಿಗೆ ಅಭಿಮಾನಿಗಳಿಂದಲೇ ಅನ್ನದಾನ ನೆರವೇರಿತು.
ತಾತನಿಗೆ ಧನ್ಯಾ ರಾಮ್‌ಕುಮಾರ್ ವಿಶೇವಾಗಿ ಶ್ರದ್ಧಾಂಜಲಿ
ಡಾ ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ತಮ್ಮ ತಾತನಿಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಜೊತೆ ಅಣ್ಣಾವ್ರ ಸೂಪರ್ ಹಿಟ್ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಡಿ.ಕೆ.ಶಿವಕುಮಾರ್ ಸ್ಮರಣೆ
ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಸ್ಮರಿಸಿಕೊಂಡಿದ್ದು, ವರನಟ, ಕನ್ನಡಿಗರ ಆರಾಧ್ಯ ದೈವ, ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಅನರ್ಘ್ಯ ರತ್ನ. ಗೋಕಾಕ್ ಚಳವಳಿ ಬೆಂಬಲಿಸಿ ಕನ್ನಡ ಪರ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದ ಅವರ ಸಾಮಾಜಿಕ ಕಳಕಳಿಯನ್ನು ಕನ್ನಡನಾಡು ಎಂದಿಗೂ ಮರೆಯದು. ಕನ್ನಡ ಚಿತ್ರರಂಗದ ಧೃವತಾರೆ ಅಣ್ಣಾವ್ರ ಹುಟ್ಟುಹಬ್ಬದಂದು ಅಭಿಮಾನಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಗೌರವಪೂರ್ವಕ ಪ್ರಣಾಮ ಸಲ್ಲಿಸಿದ ಎಚ್‌ಡಿಕೆ
ಕರ್ನಾಟಕ ರತ್ನ, ಕನ್ನಡಿಗರ ಸಾಕ್ಷೀಪ್ರಜ್ಞೆ, ಮೇರುನಟರಾದ ಡಾ.ರಾಜ್ ಕುಮಾರ್ ಅವರ ಜನ್ಮದಿನದ ಈ ದಿನದಂದು ಅವರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು. ಸಿನಿಮಾ ಮೂಲಕವೇ ಸಮಾಜ ಸುಧಾರಣೆ ಮಾಡಿದ ಅನನ್ಯ ಸುಧಾರಕರು, ಸರಳತೆ ಸಜ್ಜನಿಕೆಯ ಗೌರಿಶಂಕರವೇ ಆಗಿದ್ದ ಅಣ್ಣಾವ್ರ ಬದುಕು ಸದಾ ಸ್ಮರಣೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನುಳಿದಂತೆ ಸಿನಿಮಾ ರಂಗದ ನಟ ನಟಿಯರು, ಅಭಿಮಾನಿಗಳು ಅಣ್ಣಾವ್ರ ಹುಟ್ಟುಹಬ್ಬವನ್ನು ಸ್ಮರಿಕೊಂಡು ಗೌರವ ಸಲ್ಲಿಸಿದ್ದಾರೆ.