ಚುನಾವಣೆಗಾಗಿ 50 ಕೋಟಿ ರೂ. ನೀಡುವಂತೆ ಬೆದರಿಕೆ; ಎಚ್‌ಡಿಕೆ ವಿರುದ್ಧ ಉದ್ಯಮಿ ಗಂಭೀರ ಆರೋಪ
ಚುನಾವಣೆ ವೆಚ್ಚಕ್ಕಾಗಿ 50 ಕೋಟಿ ರೂ. ನೀಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬೆದರಿಕೆ ಹಾಕಿದ್ದರು ಎಂದು ಸ್ವತಃ ಜೆಡಿಎಸ್ ಉಪಾಧ್ಯಕ್ಷರಾಗಿರುವ ಉದ್ಯಮಿ ವಿಜಯ್ ತಾತಾ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ನಾನು ಯಾರೆಂಬುದೇ ಗೊತ್ತಿಲ್ಲವಂತೆ. ಇದು ನನಗೆ ತುಂಬಾ ಆಶ್ಚರ್ಯ ತಂದಿದೆ. ನಾನೇ ಅವರ ಪುತ್ರನ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ನಿಂತಿದ್ದ ವೇಳೆ ನಾನೇ ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದೇನೆ. ಈಗ ನನ್ನ ಮೇಲೆ ಎರಡು ಸಾವಿರ ದೂರುಗಳಿವೆ ಎಂದು ಆರೋಪಿಸಿದ್ದಾರೆ. ತಾಕತ್ತಿದ್ದರೆ ನನ್ನ ಮೇಲಿರುವ ಎರಡೇ ಎರಡು ದೂರು ತೋರಿಸಲಿ ಎಂದು ವಿಜಯ್ ತಾತಾ ಸವಾಲೆಸೆದರು.
ಪಿಎಸಿಎಲ್ ಕಂಪನಿ ಹೆಸರಲ್ಲಿ ಕೋಟಿಗಟ್ಟಲೇ ಅವ್ಯವಹಾರ ನಡೆದಿರುವುದು ನಿಜ. ನನ್ನ ಬಳಿ ಶ್ರೀಧರ ಎಂಬ ವ್ಯಕ್ತಿ ಬಂದು ಪಿಎಸಿಎಲ್ ವಿರುದ್ಧ ದೂರು ನೀಡಬೇಕು ಎಂದಿದ್ದೂ ಸತ್ಯ. ನಾನೇ ದೂರು ನೀಡಲು ಸಹಾಯ ಮಾಡಿದ್ದೆ. ಆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರು ಕುಮಾರಸ್ವಾಮಿ ಬಳಿ ಹೋಗಿದ್ದರು. ಈಗ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಚ್.ಎಂ.ರಮೇಶ್ ಗೌಡ ಅವರು ಕರೆ ಮಾಡಿ ಕುಮಾರಸ್ವಾಮಿ ಬಳಿ ಮಾತನಾಡಲು ಮೊಬೈಲ್ ನೀಡಿದ್ದರು. ಆಗ ಕುಮಾರಸ್ವಾಮಿ ಅವರು ಚುನಾವಣೆಗೆ 50 ಕೋಟಿ ರೂ.ಕೊಡಬೇಕು ಎಂದು ಕೇಳಿದ್ದರು. ಸದ್ಯ ಹಣಕಾಸಿನ ಮುಗ್ಗಟ್ಟಿದೆ, ಆಗುವುದಿಲ್ಲ ಎಂದು ಹೇಳಿದ್ದೆ. ಹಣ ನೀಡದಿದ್ದರೆ ನೀಡದಿದ್ದರೆ ನನ್ನ ಮೇಲಿರುವ ಎಲ್ಲ ಪ್ರಕರಣಗಳಿಗೆ ಮರುಜೀವ ನೀಡುವುದಾಗಿ ಬೆದರಿಸಿದ್ದರು ಎಂದು ಅವರು ಆರೋಪಿಸಿದರು.
50 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ವಿಷಯ ನನಗೆ, ಕುಮಾರಸ್ವಾಮಿ ಹಾಗೂ ರಮೇಶ್ ಗೌಡಗೆ ಸಂಬಂಧಪಟ್ಟಿದ್ದ ವಿಚಾರ. ಆದರೆ, ಇದರಲ್ಲಿ ಇನ್ಸ್ಪೆಕ್ಟರ್ ಒಬ್ಬರು ಭಾಗಿಯಾಗಿದ್ದರು. ಶ್ರೀಧರ್ ಎಂಬ ವ್ಯಕ್ತಿ ನಕಲಿ ಚೆಕ್ ಗಳನ್ನು ಕೊಟ್ಟು 15 ಕೋಟಿಗೆ ಪಿಎಸಿಎಲ್ ಜಾಗ ಮಾರಾಟ ಮಾಡಿದ್ದಾರೆ. ಈ ಹಣ ನೇರ ಕುಮಾರಸ್ವಾಮಿ ಅವರಿಗೆ ಹೋಗಿದೆ ಎಂದು ಗಂಭೀರ ಆರೋಪ ಮಾಡಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿ ಎಡಿಜಿಪಿ ಚಂದ್ರಶೇಖರ್ ಒಬ್ಬ ಬ್ಯಾಕ್ಮೇಲರ್, ಕ್ರಿಮಿನಲ್ ಎಂದು ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಜಯ್ ತಾತಾ ಈ ಆರೋಪ ಮಾಡಿದ್ದಾರೆ.
ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರ ಹಣಕಾಸು ವಿವರಗಳ ಕುರಿತು ದಾಖಲೆ ಸಮೇತ ಆರೋಪ ಮಾಡಿದ್ದರು. ಈ ವೇಳೆ ಚಂದ್ರಶೇಖರ್ ಹಾಗೂ ವಿಜಯ್ ತಾತಾ ನಡುವೆ ಹಣಕಾಸಿನ ವ್ಯವಹಾರ ಇತ್ತು ಎಂದು ಆರೋಪಿಸಿದ್ದರು.