Caste Census | ಜಾತಿಗಣತಿ ವರದಿ ಜಾರಿಗೆ ಆತುರವಿಲ್ಲ; ಅಧ್ಯಯನಕ್ಕೆ ಕಾಲಾವಕಾಶ ಕೋರುವ ಸಾಧ್ಯತೆ

ಒಕ್ಕಲಿಗ ಸಮುದಾಯ ವರದಿಗೆ ವಿರೋಧ ವ್ಯಕ್ತಪಡಿಸಿದೆ. ವೀರಶೈವ-ಲಿಂಗಾಯತರು ಹಾಗೂ ಬ್ರಾಹ್ಮಣರ ಬೆಂಬಲದೊಂದಿಗೆ ಆಂದೋಲನ ರೂಪಿಸುವುದಾಗಿ ಒಕ್ಕಲಿಗರ ಸಂಘ ಎಚ್ಚರಿಸಿದೆ. ಹೀಗಿರುವಾಗ ಸರ್ಕಾರಕ್ಕೆ ವರದಿಯ ಕೂಲಂಕಷ ಅಧ್ಯಯನ ನಡೆಸುವುದು ಅನಿವಾರ್ಯವಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.;

Update: 2025-04-17 08:38 GMT

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕುರಿತಂತೆ ಇಂದು (ಗುರುವಾರ) ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಆತುರಪಡುತ್ತಿಲ್ಲ. ಬದಲಿಗೆ ವರದಿ ಕುರಿತು ಅಧ್ಯಯನಕ್ಕೆ ಇನ್ನಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಜಾತಿಗಣತಿ ವರದಿ ಮಂಡನೆ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆದಿದ್ದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ವರದಿಗೆ ವಿರೋಧ ವ್ಯಕ್ತವಾಗಿದೆ. ವೀರಶೈವ-ಲಿಂಗಾಯತರು ಹಾಗೂ ಬ್ರಾಹ್ಮಣರ ಬೆಂಬಲ ಪಡೆದು ರಾಜ್ಯಾದ್ಯಂತ ಆಂದೋಲನ ರೂಪಿಸುವುದಾಗಿ ಒಕ್ಕಲಿಗರ ಸಂಘ ಎಚ್ಚರಿಸಿದೆ. ಹೀಗಿರುವಾಗ ಸರ್ಕಾರಕ್ಕೆ ವರದಿಯ ಕೂಲಂಕಷ ಅಧ್ಯಯನ ನಡೆಸುವುದು ಅನಿವಾರ್ಯವಾಗಿದೆ. ಈ ವಿಚಾರದಲ್ಲಿ ವಿಸ್ತೃತ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

2015 ರಲ್ಲಿ ಎಚ್.ಕಾಂತರಾಜು ಅವರಿಗೆ ಸಮೀಕ್ಷೆಯ ಹೊಣೆ ವಹಿಸಿದಾಗ ಅಂದಿನ ಕಾನೂನು ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಅವರು ಕಳೆದ ಒಂದು ದಶಕದಲ್ಲಿ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದ್ದರು. ಸಮೀಕ್ಷೆಗೆ ನೀಡಲಾದ 54 ನಿಯತಾಂಕಗಳಲ್ಲಿ ಜಾತಿಯೂ ಒಂದು. ಆದರೆ, ಈಗ ಕೇವಲ ಜಾತಿ ದತ್ತಾಂಶದ ಮೇಲೆ ಮಾತ್ರ ಗಮನಹರಿಸುತ್ತಿದ್ದು, ಉಳಿದ 53 ನಿಯತಾಂಕಗಳ ಸಂಶೋಧನೆಗಳು ಏನೆಂದು ಯಾರೂ ಕೂಡ ಪರಿಶೀಲಿಸುತ್ತಿಲ್ಲ ಎಂದು ಹೇಳಿದ್ದಾರೆ.

ವರದಿಯನ್ನು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ವಿರೋಧಿಸಿದರೆ ಇತರೆ ಹಿಂದುಳಿದ ವರ್ಗಗಳ ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರು ವರದಿಯ ವೈಜ್ಞಾನಿಕ ಅಧ್ಯಯನವನ್ನು ಸಮರ್ಥಿಸಿಕೊಂಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ವರದಿಯಲ್ಲಿ ಲೋಪವಿದ್ದರೆ ಸರಿಪಡಿಸಬಹುದು. ಆದರೆ, ವರದಿ ವಿರೋಧಿಸಲು ಪ್ರಬಲ ಸಮುದಾಯಗಳು ಆತುರಪಡುತ್ತಿವೆ ಎನ್ನುತ್ತಿದ್ದಾರೆ. ಸರ್ಕಾರದ ಸಚಿವರಲ್ಲೇ ವರದಿಗೆ ದ್ವಂದ್ವ ನಿಲುವು ಇರುವುದರಿಂದ ವಿಸ್ತೃತ ಅಧ್ಯಯನ ಅಗತ್ಯವಾಗಿದೆ ಎಂದು ರಾಯರಡ್ಡಿ ತಿಳಿಸಿದ್ದಾರೆ.

Tags:    

Similar News