ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆ ತಡೆಹಿಡಿಯಲಾಗಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬಳ್ಳಾರಿ ಬಾಣಂತಿಯರ ಸಾವಿನ ಘಟನೆ ಬಳಿಕ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆ ತಡೆಹಿಡಿಯಲಾಗಿದೆ. ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾದ ಬ್ಯಾಚ್ ನ ದ್ರಾವಣವನ್ನು ಅನರೋಬಿಕ್ ಟೆಸ್ಟ್ ಗೆ ಕಳುಹಿಸಲಾಗಿದೆ.;
ಬಾಣಂತಿಯರ ಸಾವಿನಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಮರಣಕೂಪದಂತೆ ಮಾರ್ಪಟ್ಟಿದೆ. 15 ದಿನಗಳಲ್ಲಿ ನಾಲ್ವರು ಬಾಣಂತಿಯರ ಸಾವು ಬೆಚ್ಚಿ ಬೀಳಿಸಿವೆ. ಈ ಸಾವಿಗೆ ಕಾರಣವಾದ ಅಂಶಗಳು ಚರ್ಚೆಯ ಮುನ್ನೆಲೆಗೆ ಬಂದಿವೆ. ಸರ್ಕಾರ ನಿಷೇಧಿಸಿದ್ದ ಐವಿ ದ್ರಾವಣ ರಿಂಗರ್ ಲ್ಯಾಕ್ಟೇಕ್ ಬಳಕೆಯಿಂದಲೇ ಸಾವು ಸಂಭವಿಸಿರುವ ಶಂಕೆ ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾಗಿ ಸರ್ಕಾರವೇ ಸಾವಿಗೆ ನೇರ ಹೊಣೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಬಾಣಂತಿಯರಿಗೆ ನೀಡಲಾದ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪಶ್ಚಿಮ ಬಂಗಾಳದ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ಪೂರೈಸಿತ್ತು. ಆದರೆ, ಈ ಬಾರಿ ಔಷಧ ಸರಬರಾಜು ನಿಗಮಕ್ಕೆ ಬಂದ 192 ಬ್ಯಾಚ್ ಗಳಲ್ಲಿ ಎರಡು ಬ್ಯಾಚ್ ಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಎಲ್ಲ 192 ಬ್ಯಾಚ್‌ಗಳ ದ್ರಾವಣವನ್ನು ಬಳಸದಂತೆ ತಡೆಹಿಡಿದಿತ್ತು. ಸರ್ಕಾರದ ಆದೇಶದ ವಿರುದ್ಧ ಫಾರ್ಮಾಸುಟಿಕಲ್ ಕಂಪೆನಿಯು ಹೈ ಕೋರ್ಟ್ ಮೊರೆ ಹೋಗಿತ್ತು. ದ್ರಾವಣದ ಪರೀಕ್ಷೆಗೆ ಸೂಚಿಸಲಾಗಿತ್ತು. ಐವಿ ದ್ರಾವಣವನ್ನು ಸೆಂಟ್ರಲ್ ಡ್ರಗ್ ಲ್ಯಾಬರೋಟರಿಯಲ್ಲಿ ಪರೀಕ್ಷೆ ನಡೆಸಿದಾಗ ಬಳಕೆಗೆ ಯೋಗ್ಯ ಎಂಬ ವರದಿ ಬಂದಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಜ್ಞರ ತಾಂತ್ರಿಕ ಸಮಿತಿಯೊಂದನ್ನು ರಚಿಸಿ ಸ್ಟ್ಯಾಂಡರ್ಡ್ ಕ್ವಾಲಿಟಿಯ ಕೆಲವು ಬ್ಯಾಚ್‌ಗಳ ದ್ರಾವಣವನ್ನು ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಬಳ್ಳಾರಿ ಆಸ್ಪತ್ರೆಯಲ್ಲಿ ಬಳಸಿದ ದ್ರಾವಣದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಬಳ್ಳಾರಿ ಘಟನೆ ಬಳಿಕ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆ ತಡೆಹಿಡಿಯಲಾಗಿದೆ. ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾದ ಬ್ಯಾಚ್ ನ ದ್ರಾವಣವನ್ನು ಅನರೋಬಿಕ್ ಟೆಸ್ಟ್ ಗೆ ಕಳುಹಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಬಾಣಂತಿಯರ ಸಾವಿಗೆ ಐವಿ ದ್ರಾವಣವೂ ಒಂದು ಕಾರಣ ಆಗಿರಬಹುದಾ ಅಥವಾ ಇಲ್ಲವಾ ಎಂಬ ಬಗ್ಗೆ ಅನರೋಬಿಕ್ ಟೆಸ್ಟ್ ಗೆ ಕಳುಹಿಸಲಾಗಿದೆ. ಈ ಪರೀಕ್ಷೆಯಲ್ಲಿ ಸ್ಪಷ್ಟತೆ ಸಿಗಲಿದೆ. ವಾರದಲ್ಲಿ ಪರೀಕ್ಷಾ ವರದಿ ಬರಲಿದೆ. ಆ ಬಳಿಕ ಐವಿ ದ್ರಾವಣ ಬಳಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮುಂಜಾಗ್ರತೆ ಕ್ರಮವಾಗಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನು ರಾಜ್ಯಾದ್ಯಂತ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ನಮಗೆ ಪ್ರತಿಯೊಂದು ಜೀವವು ಮುಖ್ಯ. ಈ ರೀತಿಯ ಅನುಮಾನಗಳು ವ್ಯಕ್ತವಾದಾಗ ಮುನ್ನೆಚ್ಚೆರಿಕೆ ವಹಿಸಬೇಕು. ಹಾಗಾಗಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಸದಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ನಿಷೇಧಿತ ದ್ರಾವಣ ಪತ್ತೆ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸರಣಿ ಸಾವು ಬೆನ್ನಲ್ಲೇ ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ8 ಅಧಿಕಾರಿಗಳ ತಂಡ ಬೆಳಗಾವಿ ಜಿಲ್ಲಾ ಬಿಮ್ಸ್ ಆಸ್ಪತ್ರೆ ಆವರಣದ ಉಗ್ರಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅದೇ ಕಂಪೆನಿ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸ್ಗಳು ಪತ್ತೆ ಆಗಿವೆ.
ಬೆಳಗಾವಿ ಜಿಲ್ಲಾದ್ಯಂತ ಕಳೆದ ಏಪ್ರಿಲ್ ತಿಂಗಳಿಂದಲೇ RLS ಐವಿ ಗ್ಲುಕೋಸ್ ಪೂರೈಕೆಯಾಗಿದ್ದು, ಎಲ್ಲೆಲ್ಲಿ ಪೂರೈಕೆಯಾಗಿದೆ ಎಂಬ ಬಗ್ಗೆ ಉಗ್ರಾಣ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ಇದೆ.