ಪೊಲೀಸರ ಹಲ್ಲೆ | ರೌಡಿಶೀಟರ್‌ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

ಬಂಧಿಸಲು ಮುಂದಾದ ಪೊಲೀಸರ ಮೇಲೆ ರೌಡಿ ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

Update: 2024-08-31 07:45 GMT
ಪೊಲೀಸರ ಮೇಲೆ ರೌಡಿ ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
Click the Play button to listen to article

ಅಪಹರಣ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ರೌಡಿಶೀಟರ್ ಅನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ರೌಡಿ ಮಚ್ಚಿನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುರುಬಕೇಳಗಿ ಗ್ರಾಮದಲ್ಲಿ ನಡೆದಿದೆ.

ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಗಮೇಶ್ ಎಂಬ ಆರೋಪಿ ಕುರುಬಕೇಳಗಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಬಳಿ ಅಡಗಿ ಕುಳಿತಿದ್ದ. ಆರೋಪಿಯನ್ನು ಹಿಡಿಯಲು ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಪೊಲೀಸರು ಶುಕ್ರವಾರ ಮುಂಜಾನೆ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸ್‌ ಸಿಬ್ಬಂದಿಯಾದ ಗುರುನಾಥ್, ರಾಜೇಂದ್ರ ಮೇಲೆ ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಗುಂಡೇಟು ತಿಂದ ರೌಡಿಶೀಟರ್‌ಗೆ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿರುವ ಸಿಬ್ಬಂದಿ ಗುರುನಾಥ್, ರಾಜೇಂದ್ರ ಕೂಡ ಭಾಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಬೀದರ್ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ ಗುಂಟಿ ಮಾಹಿತಿ ನೀಡಿದ್ದಾರೆ. 

ಘಟನೆಯ ಹಿನ್ನೆಲೆ

ಪ್ರಕಾಶ ಸ್ವಾಮಿ ಎಂಬುವವರ ಅಪಹರಣ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ. ಹನುಮಂತಪ್ಪ ಹಾಗೂ ಪ್ರಕಾಶ ಸ್ವಾಮಿ ಎಂಬವರ ನಡುವೆ ಗಲಾಟೆ ನಡೆದಿತ್ತು. ಹನುಮಂತಪ್ಪ ಎಂಬುವವರ ಸುಪಾರಿ ಮೇರೆಗೆ ಪ್ರಕಾಶ ಸ್ವಾಮಿಯನ್ನು ಸಂಗಮೇಶ ಮತ್ತು ಆತನ ಗ್ಯಾಂಗ್ ಅಪಹರಣ ಮಾಡಿತ್ತು. ಸಂಗಮೇಶ ಮತ್ತು ಆತನ ಗ್ಯಾಂಗಿನ 6 ಜನರ ಪೈಕಿ ಮೂವರನ್ನು ಮಹಾರಾಷ್ಟ್ರದ ನಿಜಾಮಾಬಾದ್‌ನಲ್ಲಿ ಬಂಧಿಸಲಾಗಿದೆ.

ಪ್ರಮುಖ ಆರೋಪಿಗಳಾದ ಸಂಗಮೇಶ್ ಮತ್ತು ವಿಜಯ್, ಗುಂಡಪ್ಪ ಮೂರು ಜನರನ್ನು ಪೊಲೀಸರು ಬಂಧಿಸಿ ಭಾಲ್ಕಿಗೆ ಕರೆತರುವ ವೇಳೆ ಭಾಲ್ಕಿ ತಾಲೂಕಿನ ಕಾರಂಜಿ ಗ್ರಾಮದ ಬಳಿ ಶೌಚಕ್ಕೆ ಹೋಗ್ತಿನಿ ಎಂದು ಗಾಡಿಯಿಂದ ಇಳಿದ ಆರೋಪಿ ಸಂಗಮೇಶ, ಪಿಎಸ್ಐರನ್ನು ತಳ್ಳಿ ತಪ್ಪಿಸಿಕೊಂಡಿದ್ದ. ಕುರುಬಕೇಳಗಿ ಸಮೀಪದ ಸಿದ್ದೇಶ್ವರ ದೇವಸ್ಥಾನದ ಬಳಿ ಸಂಗಮೇಶ ಅಡಗಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಸಂಗಮೇಶ್‌ ರೌಡಿಶೀಟರ್‌ ಆಗಿದ್ದು, ಈತನ ಮೇಲೆ ಒಟ್ಟು 18 ಕೇಸ್‌ಗಳು ಇವೆ. 2021 ರಲ್ಲಿಯೂ ಈತ ಕಡಕ್‌ಹಳ್ಳಿ ಬಳಿ ಚಿಂಚೋಳಿ ಇನ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡಿದ ಆರೋಪ ಕೂಡ ಇದೆ.

Tags:    

Similar News