CAFE BLAST | ದೇಶ ಬಿಟ್ಟು ಪರಾರಿಯಾದನೇ ಪ್ರಮುಖ ಆರೋಪಿ?
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ನಡೆದು ಏಳು ದಿನ ಕಳೆದಿದ್ದರೂ, ಆರೋಪಿ ಪೊಲೀಸರ ಕೈಗೆ ಸಿಗದಷ್ಟು ದೂರ ಸಾಗಿದ್ದಾನೆ.;
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ನಡೆದು ಏಳು ದಿನ ಕಳೆದಿದ್ದರೂ, ಆರೋಪಿ ಪೊಲೀಸರ ಕೈಗೆ ಸಿಗದಷ್ಟು ದೂರ ಸಾಗಿದ್ದಾನೆ. ತನಿಖಾಧಿಕಾರಿಗಳು ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಿರುವ ಎಲ್ಲಾ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರೂ, ಈಗ ಅವರ ಬಳಿಯಿರುವುದು ಸಿಸಿಟಿವಿಗಳಿಂದ ಲಭ್ಯವಾಗಿರುವ ಫೋಟೋಗಳು ಮತ್ತು ವಿಡಿಯೋಗಳು ಮಾತ್ರ.
ಹಾಗಾದರೆ ಆರೋಪಿ ಎಲ್ಲಿದ್ದಾನೆ? ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ ಆತ ಕರ್ನಾಟಕ ಮಾತ್ರವಲ್ಲ, ದೇಶದ ಗಡಿಯನ್ನೇ ದಾಟಿದ್ದಾನೆ! ಆತ ತಕ್ಷಣ ಕೈಗೆ ಸಿಗುವ ಸಾಧ್ಯತೆ ಕಡಿಮೆಯಾಗಿರುವುದು ಆತನ ಪತ್ತೆಗೆ ಬೃಹತ್ ಮೊತ್ತದ ಅಂದರ 10 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸುವಂತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಮಾರ್ಚ್ 1 ರಂದು ಸ್ಫೋಟ ಸಂಭವಿಸಿದ್ದು, ಹತ್ತು ಮಂದಿಯನ್ನು ಗಾಯಗೊಳಿಸಿದ ಘಟನೆಯು ಒಂದು ವಾರ (ಮಾರ್ಚ್ 8) ಸಮೀಪಿಸುತ್ತಿರುವಾಗ ಆರೋಪಿಯ ಜಾಡು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆಯಲ್ಲಿನ ಉನ್ನತ ಮೂಲಗಳ ಪ್ರಕಾರ, ಆರೋಪಿ ರಾಜ್ಯದ ಗಡಿಯನ್ನು ದಾಟಿದ್ದಲ್ಲದೆ ದೇಶವನ್ನು ತೊರೆದಿರಬಹುದು. ಆತ ಬೆಂಗಳೂರು-ಬಳ್ಳಾರಿ- ಭಟ್ಕಳದ ಮೂಲಕ ಕೇರಳ ಗಡಿ ದಾಟಿರಬಹುದು. ಅಥವಾ ಬೆಂಗಳೂರು- ಬಳ್ಳಾರಿ, ಬೀದರ್‌ನ ಹುಮ್ನಾಬಾದ್, ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಕೇರಳಕ್ಕೆ ತೆರಳಿರಬಹುದು. ಅಲ್ಲಿಂದ ದೇಶವನ್ನೇ ಬಿಟ್ಟು ಹೋಗಿರುವ ಅಥವಾ ಭೂಗತನಾಗಿರುವ ಸಾಧ್ಯತೆ ಇದೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಆತನ ಚಲನವಲನಗಳನ್ನು ತೋರಿಸುವ ಸಿಸಿಟಿವಿ ದಾಖಲೆಗಳನು ಈ ನಿಲುವಿಗೆ ಪುರಾವೆ ಒದಗಿಸುತ್ತದೆ ಎಂಬುದು ಅವರ ಅಭಿಪ್ರಾಯ.
ಆರೋಪಿಯು ರಾಮೇಶ್ವರಂ ಹೋಟೆಲ್, ಬಸ್ಸುಗಳು ಇತ್ಯಾದಿಗಳ ಸಿಸಿಟಿವಿ ಚಿತ್ರಗಳನ್ನು ಹೊರತುಪಡಿಸಿ ತನಿಖೆಗೆ ಸಹಾಯ ಮಾಡುವ ಯಾವುದೇ ಅಂಶಗಳನ್ನು ಬಿಟ್ಟು ಹೋಗಿಲ್ಲ. ಆದರೆ ಅವನ ಇತರ ವಿವರಗಳನ್ನು ಪತ್ತೆ ಹಚ್ಚಲು ಪೊಲೀಸರ ವಿವಿಧ ವಿಭಾಗಗಳು ಶ್ರಮವಹಿಸುತ್ತಿವೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿ ಕೆಫೆಗೆ ಪ್ರವೇಶಿಸಿ, ರವಾ ಇಡ್ಲಿಯನ್ನು ಸವಿಯುತ್ತಾ ಸುಮಾರು 10 ನಿಮಿಷಗಳ ಕಾಲ ಕಳೆದು, ಐಇಡಿ (ಇಂಪ್ರೂವೈಸ್ಡ್ ಎಕ್ಸ್‌ಪ್ಲೋಸಿವ್ ಡಿವಐಸ್ ) ಸ್ಫೋಟಕವನ್ನು ಹೊಂದಿರುವ ಕೈಚೀಲವನ್ನು ವಾಶ್ ಬೇಸಿನ್ ಬಳಿ ಆಯಕಟ್ಟಿನ ಜಾಗದಲ್ಲಿ ಇಟ್ಟು ಹೊರಟಿದ್ದ. ಒಂದು ಗಂಟೆಯ ನಂತರ ಐಇಡಿ ಸ್ಫೋಟಗೊಂಡಿದೆ. ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ಸ್ಥಳಕ್ಕೆ ತಲುಪಲು ಮತ್ತು ಅದೊಂದು ಬಾಂಬ್ ಸ್ಫೋಟ ಎಂದು ಖಚಿತಪಡಿಸಲು ಸುಮಾರು ಎರಡು ಗಂಟೆಗಳ ಸಮಯ ವ್ಯರ್ಥವಾಗಿತ್ತು. ಹೀಗಾಗಿ ಮೂರು ಗಂಟೆಯೊಳಗೆ ಆತ ತನ್ನ ʼನಿಗದಿತ ದಾರಿʼಯಲ್ಲಿ ತನ್ನ ಯೋಜನೆಯಂತೆ ಪರಾರಿಯಾಗಲು ಅವಕಾಶವಾಗಿತ್ತು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿ.
ಆದಾಗ್ಯೂ, ಆರೋಪಿ ಬೆಂಗಳೂರಿನಿಂದ ಬಳ್ಳಾರಿಗೆ (ಮಂತ್ರಾಲಯ) ಬಸ್ ಪ್ರಯಾಣ ಮಾಡಿದ ಬಗ್ಗೆ ಸಿಸಿಟಿವಿ ಚಿತ್ರಗಳು ಮತ್ತು ವೀಡಿಯೊ ಕ್ಲಿಪ್ಪಿಂಗ್‌ಗಳನ್ನು ತನಿಖಾ ಸಂಸ್ಥೆಗಳು ಪಡೆದುಕೊಂಡಿವೆ. ಆದರೆ ಇಲ್ಲಿಂದ, ಆರೋಪಿ ಯಾವುದೇ ಕುರುಹು ಬಿಟ್ಟಿಲ್ಲ. ವಿವಿಧ ಮಾರ್ಗಗಳ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ಆರೋಪಿಯ ಚಿತ್ರವನ್ನು ಹೋಲುವ ಕೆಲವರು ತಮ್ಮ ಬಸ್‌ಗಳಲ್ಲಿ ಭಟ್ಕಳ (ಉತ್ತರ ಕೆನರಾ ಜಿಲ್ಲೆ) ಕಡೆಗೆ ಪ್ರಯಾಣಿಸಿದ್ದಾರೆ ಎಂದು ಹೇಳಿದರೆ, ಇತರರು ತಾವು ಹುಮ್ನಾಬಾದ್ (ಉತ್ತರ ಕರ್ನಾಟಕದ ಬೀದರ್ ಜಿಲ್ಲೆ) ಕಡೆಗೆ ಅದೇ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ತೆರಲಿರುವ ಬಗ್ಗೆ ಮಾಹಿತಿ ನೀಡುತ್ತಾರೆ. ಹೀಗಾಗಿ ಸಂಭವನೀಯ ಮಾರ್ಗಗಳ ಮೂಲಕ ಆತ ತೆರಳಿರುವ ಬಗ್ಗೆ ಬಸ್‌ಗಳು ಮಾತ್ರವಲ್ಲದೆ, ಬಸ್ ನಿಲ್ದಾಣಗಳ ಬಳಿ ಇರುವ ಸಿಸಿಟಿವಿ ದೃಶ್ಯಗಳನ್ನು ಪಡೆಯುವ ಮೂಲಕ ತನಿಖಾಧಿಕಾರಿಗಳು ಆತನ ಪತ್ತೆಗೆ ಶ್ರಮ ವಹಿಸಿದ್ದಾರೆ.
ಮೂಲಗಳ ಪ್ರಕಾರ ಆರೋಪಿ ಭಟ್ಕಳ (ಕರಾವಳಿ ನಗರ) ಕಡೆಗೆ ಪ್ರಯಾಣಿಸಿ ಕರಾವಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕೇರಳಕ್ಕೆ ತೆರಳಿರುವ ಸಾಧ್ಯತೆಯಿದೆ. ಹುಮ್ನಾಬಾದ್‌ಗೆ ತೆರಳಿದರೆ ಆ ಆರೋಪಿ ಅಲ್ಲಿಂದ ರೈಲುಗಳು ಅಥವಾ ಬಸ್‌ಗಳ ಅಥವಾ ಇನ್ನಿತರ ಸಾರಿಗೆ ವಾಹನಗಳ ಮೂಲಕ ಕೇರಳವನ್ನು ತಲುಪಬಹುದು ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಯೊಬ್ಬರ ಪ್ರಕಾರ, ಆತ ದೇಶದಿಂದ ಪಲಾಯನ ಮಾಡಿರುವ ಸಾಧ್ಯತೆಯೂ ಇದೆ. "ನಾವು ಎಲ್ಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಇಮಿಗ್ರೇಷನ್ ಕೇಂದ್ರಗಳು, ಇಂಟರ್ಪೋಲ್ ನೋಡಲ್ ಏಜೆನ್ಸಿಗಳು ಇತ್ಯಾದಿಗಳಿಂದ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಆರೋಪಿಯ ಚಲನವಲನವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ನೆರೆಯ ದೇಶಗಳ ವಲಸೆ ವಿಭಾಗಗಳ ಸಹಕಾರವನ್ನೂ ಕೇಂದ್ರ ಗೃಹ ಸಚಿವಾಲಯವು ಕೋರಿಕೊಂಡಿದೆ" ಎಂದು ಆ ಅಧಿಕಾರಿ ಹೇಳಿದ್ದಾರೆ. "ಸಾಮಾನ್ಯವಾಗಿ ಅಂತಹ ಆರೋಪಿಗಳು ಅನೇಕ ಪ್ರಕರಣಗಳಲ್ಲಿ ಭೂಗತರಾಗುತ್ತಾರೆ ಮತ್ತು ಈ ಅವಕಾಶವೂ ಇದೆ" ಎಂದು ಅವರು ವಿವರಿಸಿದ್ದಾರೆ.