ಅಕ್ರಮವಾಗಿ ವಿದೇಶಿ ಚಾಕಲೇಟ್ ಮಾರಾಟ; ಪೊಲೀಸರ ದಾಳಿ
ಈ ವೇಳೆ ಒಂದು ಕೋಟಿಗೂ ಅಧಿಕ ಮೌಲ್ಯದ ವಿದೇಶಿ ಕಂಪೆನಿಗಳ ವಿವಿಧ ಚಾಕಲೇಟ್ ಹಾಗೂ ಇತರೆ ಪಾದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.;
ವಿದೇಶದಿಂದ ಅಕ್ರಮವಾಗಿ ಚಾಕಲೇಟ್, ಬಿಸ್ಕೆಟ್, ಪಾನೀಯ ಹಾಗೂ ಇತರೆ ವಸ್ತುಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡು ಎಫ್ಎಸ್ಎಸ್ಎಐ ಸ್ಟಿಕ್ಕರ್‌ಗಳನ್ನು ಅಂಟಿಸಿ ಸೂಪರ್ ಮಾರ್ಕೆಟ್ ಹಾಗೂ ಮಾಲ್ಗಳಿಗೆ ಸರಬರಾಜು ಮಾಡುತ್ತಿದ್ದ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿಯ ಮೇರಗೆ ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಸುಧಾಮನಗರದ ನಾರಾಯಣಸ್ವಾಮಿ ಲ ಗೋಡೌನ್ಗೆ ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ಕೋಟಿಗೂ ಅಧಿಕ ಮೌಲ್ಯದ ವಿದೇಶಿ ಕಂಪೆನಿಗಳ ವಿವಿಧ ಚಾಕಲೇಟ್ ಹಾಗೂ ಇತರೆ ಪಾದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಕೊಂಡಿರುವ ಆಹಾರ ಪದಾರ್ಥಗಳು ದೇಶದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮಗಳಾನುಸಾರ ತಯಾರಿಸದೆ ಇರುವುದು ಕಂಡುಬಂದಿದೆ. ಈ ಆಹಾರ ಪದಾರ್ಥಗಳ ಮೇಲೆ ನಕಲಿ ಎಫ್ಎಸ್ಎಸ್ಎಐ ಸ್ಟಿಕ್ಕರ್‌ಗಳನ್ನು ಬಳಸಿ ತಮಗೆ ಇಷ್ಟಬಂದ ದರವನ್ನು ನಿಗದಿಪಡಿಸಲಾಗಿದೆ. ಚಾಕಲೇಟುಗಳನ್ನು ವಿದೇಶದಿಂದ ಆಮದು ಮಾಡಿಕೊಂಡಿರುವ ಬಗ್ಗೆ ಯಾವುದೇ ರೀತಿಯ ದಾಖಲಾತಿಗಳು ಇಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.
ಇನ್ನು ಈ ಸಂಬಂಧ ಕಾಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.