ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ | ಮೃತ ಮಾಲಾಧಾರಿಗಳ ಸಂಖ್ಯೆ ಆರಕ್ಕೆ ಏರಿಕೆ
ಹುಬ್ಬಳ್ಳಿಯ ಉಣಕಲ್ ಸಮೀಪದ ಸಾಯಿನಗರದಲ್ಲಿ ನ.22 ರಂದು ಸಂಭವಿಸಿದ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆ ಐದಕ್ಕೆ ಏರಿದ್ದು, ಕ್ಷಣಕ್ಷಣಕ್ಕೂ ಆತಂಕ ಎದುರಾಗಿದೆ. ಇನ್ನೂ ನಾಲ್ವರು ಮಾಲಾಧಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇಲ್ಲಿನ ಉಣಕಲ್ ಸಮೀಪದ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ನ. 22 ರಂದು ರಾತ್ರಿ ಸಿಲಿಂಡರ್ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಭತ್ತು ಮಂದಿ ಮಾಲಾಧಾರಿಗಳು ಗಂಭೀರ ಗಾಯಗೊಂಡಿದ್ದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಘಟನೆಯಲ್ಲಿ ಮಾಲಾಧಾರಿಗಳಾದ ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24) ಮೃತಪಟ್ಟಿದ್ದರು. ಶನಿವಾರ ರಾತ್ರಿ ಶಂಕರ್ ಚವ್ಹಾಣ್ (29) ಮೃತಪಟ್ಟರೆ, ಭಾನುವಾರ ಮಂಜುನಾಥ ವಾಗ್ಮೋಡೆ ಮೃತಪಟ್ಟಿದ್ದಾರೆ. ಉಳಿದ ಮೂವರು ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಯ ಎದುರು ಸಂಬಂಧಿಕರ ಗೋಳು ಹೇಳತೀರದಾಗಿದೆ. ಕ್ಷಣ ಕ್ಷಣಕ್ಕೂ ಆತಂಕದಲ್ಲೇ ತಮ್ಮವರಿಗಾಗಿ ಎದುರು ನೋಡುವಂತಾಗಿದೆ.
ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಸಾವು
ಶನಿವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಐದನೇ ಮಾಲಾಧಾರಿ ಶಂಕರ್ ಚವಾಣ್(29) ಇದೇ ಕಿಮ್ಸ್ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಸಾಯಿನಗರದ ಅಚ್ಚವ್ವಳ ಕಾಲೊನಿಯಲ್ಲಿ ವಾಸವಾಗಿದ್ದ ಈತ ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆರೈಕೆಯಲ್ಲಿ ಬೆಳೆದಿದ್ದ. ಕಿಮ್ಸ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ ಚವಾಣ್ ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ್ದರು.
ಕಳೆದ ಏಳು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕರ್ ಶನಿವಾರ ಮಧ್ಯರಾತ್ರಿ ಮೃತಪಟ್ಟರು. ಶಂಕರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ನಡೆದಿದ್ದು ಹೇಗೆ?
ನ.22 ರಂದು ಭಾನುವಾರ ಸಾಯಿನಗರ ಈಶ್ವರ ದೇವಸ್ಥಾನದಲ್ಲಿ ಭಜನೆ ಮುಗಿಸಿ, ಊಟ ಸೇವಿಸಿದ ಮಾಲಾಧಾರಿಗಳು ಅಲ್ಲಿಯೇ ಮಲಗಿದ್ದರು. ನಿದ್ರೆ ಮಂಪರಿನಲ್ಲಿ ಮಾಲಾಧಾರಿಗಳ ಕಾಲು ಸಿಲಿಂಡರ್ ಪೈಪ್ಗೆ ಸೋಕಿ ಅನಿಲ ಸೋರಿಕೆಯಾಗಿದೆ. ದೇವಸ್ಥಾನದಲ್ಲಿ ಬೆಳಗುತ್ತಿದ್ದ ದೀಪದಿಂದ ಸಿಲಿಂಡರ್ ಸ್ಫೋಟಗೊಂಡಿದೆ. ಮಲಗಿದ್ದ ೯ ಮಂದಿ ಮಾಲಾಧಾರಿಗಳು ಕೂಡ ಗಂಭೀರ ಗಾಯಗೊಂಡಿದ್ದರು. ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.
ಮೃತರ ಪೈಕಿ ನಿಜಲಿಂಗಪ್ಪ ಬೇಪುರಿಯ ಅವರ ದೇಹ ಶೇ86 ಸುಟ್ಟು ಹೋಗಿತ್ತು. ಸಂಜಯ್ ಸವದತ್ತಿಯ ಅವರ ದೇಹ ಶೇ80 ರಷ್ಟು, ರಾಜು ಮೂಗೇರಿಯ ದೇಹ ಶೇ74 ರಷ್ಟು, ಲಿಂಗಾರಾಜು ಬೀರನೂರ ದೇಹ ಶೇ86 ರಷ್ಟು ಹಾಗೂ ಶಂಕರ್ ಚವ್ಹಾಣ್ ದೇಹ ಶೇ99 ರಷ್ಟು,ಮಂಜುನಾಥ್ ವಾಗ್ಮೋಡೆಯ ದೇಹ ಶೇ70 ರಷ್ಟು ಸುಟ್ಟಿತ್ತು.
ಚಿಕಿತ್ಸೆ ಪಡೆಯುತ್ತಿರುವ ಮೂವರಲ್ಲಿ ಪ್ರಕಾಶ್ ಬಾರಕೇರ್ ದೇಹ ಶೇ91 ರಷ್ಟು, ತೇಜಸ್ವರ್ ಸಾತರೆಯ ದೇಹ ಶೇ74 ರಷ್ಟು ಹಾಗೂ ವಿನಾಯಕ್ ಭಾರಕೇರ್ ಅವರ ದೇಹ ಶೇ25 ರಷ್ಟು ಸುಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಈ ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸರ್ಕಾರದಿಂದ ತಲಾ 2 ಲಕ್ಷ ಪರಿಹಾರ
ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಗಾಯಾಳುಗಳ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.