ನಿಮ್ಮನ್ನು ಟಾರ್ಗೆಟ್ ಮಾಡಿ ನಮಗೇನೂ ಆಗಬೇಕಿಲ್ಲ: ಛಲವಾದಿ ನಾರಾಯಣ ಸ್ವಾಮಿ
ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸುಪಾರಿ, ಹನಿಟ್ರ್ಯಾಪ್ ವಿಷಯಗಳಿವೆ. ಹೀಗಾಗಿ ಸಿಬಿಐ ತನಿಖೆ ಅನಿವಾರ್ಯ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿವರಿಸಿದ್ದಾರೆ.;
ಬೀದರ್ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಬಿಐ ತನಿಖೆ ಆಗಲೇಬೇಕೆಂದು ಒಂದೆಡೆ ಬಿಜೆಪಿ ಒತ್ತಾಯಿಸಿದೆ. ಆದರೆ ಸಿಐಡಿ ತನಿಖೆಯಲ್ಲಿ ಸತ್ಯ ಹೊರಬರಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಬೆನ್ನಿಗೆ ನಿಂತಿದ್ದಾರೆ. ಆದರೆ ಬಿಜೆಪಿ ನಾಯಕರು ಸಿಐಡಿ ತನಿಖೆಯಿಂದ ಸತ್ಯ ಹೊರಗೆ ಬರುವುದಿಲ್ಲ, ಸಿಬಿಐ ತನಿಖೆಗೆ ವಹಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಿಬಿಐ ತನಿಖೆ ಯಾಕಾಗಬೇಕು? ಎಂಬುದಕ್ಕೆ ಹಲವು ಕಾರಣಗಳನ್ನೂ ಬಿಜೆಪಿ ನಾಯಕರು ಕೊಡುತ್ತಿದ್ದಾರೆ.
ಸಚಿನ್ ಪ್ರಾಣತ್ಯಾಗ ಯಾಕಾಗಿದೆ? ಎಂಬುದನ್ನು ತನಿಖೆ ಮಾಡಿ ಹೇಳಬೇಕಿದೆ. ಸಚಿನ್ ಸಾವಿನ ಜೊತೆಗೆ ಸುಪಾರಿ ಕೊಟ್ಟಿರುವ ವಿಚಾರ, ಹನಿಟ್ರ್ಯಾಪ್ ವಿಷಯವೂ ಸೇರಿಕೊಂಡಿರುವುದರಿಂದ ಪ್ರಕರಣ ಗಂಭೀರ ಸ್ವರೂಪದ್ದಾಗಿದೆ. ಸುಪಾರಿಯಲ್ಲಿ ನೆರೆಯ ಮಹಾರಾಷ್ಟ್ರದ ಸೋಲಾಪುರ ಮೂಲದವರ ಹೆಸರುಗಳಿವೆ. ಹೀಗಾಗಿ ಇದೊಂದು ಅಂತರರಾಜ್ಯ ವಿಚಾರವಾಗಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಬೆಂಗಳೂರಿನಲ್ಲಿ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ‘ತನಿಖೆಗೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ನಮಗೆ ಸವಾಲು ಹಾಕಿದ್ದಾರೆ. ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ. ಇದರರ್ಥ ಏನು? ನಮ್ಮ ಹೋರಾಟಕ್ಕೆ ಬೆಲೆ ಇಲ್ಲವೇ? ನ್ಯಾಯ ಕೇಳುವುದು ತಪ್ಪೇ?’ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಲೆಫ್ಟ್ ಹ್ಯಾಂಡ್-ರೈಟ್ ಹ್ಯಾಂಡ್ ಜನರಿದ್ದಾರೆ
ಪ್ರಿಯಾಂಕ್ ಖರ್ಗೆಯ ಎಡಗೈ (ಲೆಫ್ಟ್ ಹ್ಯಾಂಡ್) ಬಲಗೈ (ರೈಟ್ ಹ್ಯಾಂಡ್) ಜನರೇ ಪ್ರಕರಣದ ಹಿಂದಿದ್ದಾರೆ. ಇದನ್ನು ಪ್ರಿಯಾಂಕ್ ಖರ್ಗೆ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಯಾವುದೇ ನಡೆದರೂ ನಾನು ಎದುರಿಸುತ್ತೇನೆ ಎಂದು ತನಿಖೆಯನ್ನು ಅವರು ಎದುರಿಸಬೇಕು. ಅದನ್ನು ಬಿಟ್ಟು ಮುತ್ತಿಗೆ ಹಾಕುವವರ ಅಡ್ರೆಸ್ ಕೊಡಿ; ಎಷ್ಟು ಜನ ಬರುತ್ತಾರೆ ಎಂಬುದನ್ನು ಮೊದಲೇ ಹೇಳಿ, ನಾನು ಕಾಫಿ ಟೀ ವ್ಯವಸ್ಥೆ ಮಾಡಿಸುತ್ತೇನೆ ಎಂದಿದ್ದಾರೆ. ಇದು ಉದ್ಧಟತನವಲ್ಲದೇ ಬೇರೇನು? ಪ್ರತಿಭಟನೆ ಮಾಡುವವರು ನಿಮ್ಮೊಂದಿಗೆ ಸಂಬಂಧ ಬೆಳೆಸಲು ಬರುತ್ತಾರಾ? ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ಹರಿಹಾಯ್ದಿದ್ದಾರೆ. ಜೊತೆಗೆ ಭಯದಿಂದ ಖರ್ಗೆ ಹೀಗೆ ಮಾತನಾಡುತ್ತಿದ್ದಾರೆ ಎಂದೂ ಹೇಳಿದ್ದಾರೆ.
ನಾವು ಸಂಬಂಧ ಮಾಡಲು ಮುಂದಾಗಿಲ್ಲ
ಅಧಿಕಾರದಲ್ಲಿರುವವರು ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುವುದು ನಮ್ಮ ಹಕ್ಕು. ಅದು ನಮ್ಮ ಅಧಿಕಾರ ಕೂಡ. ನಾವು ನಿಮ್ಮೊಂದಿಗೆ ಸಂಬಂಧ ಮಾಡಲು ಮುಂದಾಗಿಲ್ಲ. ಎಲ್ಲ ವಿಚಾರಗಳ ಕುರಿತು ಮಾತನಾಡುವ ನಿಮಗೆ, ಈ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲವೇ?. ನಿಮಗೆ ಗೊತ್ತಾಗದಿದ್ದರೆ ಬೇರೆಯವರನ್ನು ಕೇಳಿ ತಿಳಿದುಕೊಂಡು ಮಾತನಾಡಿ, ತನಿಖೆ ಎದುರಿಸಿ ಎಂದು ಛಲವಾದಿ ಆಗ್ರಹಿಸಿದ್ದಾರೆ.
ನಿಮ್ಮನ್ನು ಟಾರ್ಗೆಟ್ ಮಾಡಿ ನಮಗೇನೂ ಆಗಬೇಕಿಲ್ಲ
ನಿಮ್ಮ ಉದ್ಧಟತನ ಬದಿಗಿಡಿ; ಸ್ವಪ್ರತಿಷ್ಠೆ ಇಲ್ಲಿಲ್ಲ. ನಿಮ್ಮನ್ನು ಟಾರ್ಗೆಟ್ ಮಾಡಿ ಬಿಜೆಪಿಗೆ ಏನೂ ಆಗಬೇಕಾಗಿಲ್ಲ. ಬಟ್ಟೆ ಹರಿದುಕೊಳ್ಳುವ ಕೆಲಸವನ್ನು ನೀವು ಮಾಡಿದ್ದೀರಿ. ನಿಮ್ಮ ಬಟ್ಟೆ ಹರಿಯಲು ನಾವು ಬರುವುದಿಲ್ಲ; ನಾವೂ ಬಟ್ಟೆ ಹರಿದುಕೊಳ್ಳುವುದಿಲ್ಲ. ಇದೆಲ್ಲವನ್ನು ಸಮಾಜದ ಹಿತದೃಷ್ಟಿಯಿಂದ ಮಾಡುತ್ತೇವೆ. ಆಪಾದನೆ ಬಂದಾಗ ಯಾವ ರೀತಿ ಎದುರಿಸಬೇಕೆಂದು ತಾವು ಕಲಿತುಕೊಳ್ಳಬೇಕು. ನಾವು ನ್ಯಾಯ ಕೇಳುತ್ತಿದ್ದೇವೆ. ನೀವು ಭಿತ್ತಿಪತ್ರ ಅಂಟಿಸಿದ ಮಾದರಿಯಲ್ಲೇ ನಿಮ್ಮ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕೂಡ ಭಿತ್ತಿಪತ್ರ ಅಂಟಿಸಿ ಪ್ರತಿಭಟನೆ ಮಾಡುತ್ತಿದೆ. ಇನ್ನು ಮುಂದಿನ ತೀರ್ಮಾನ ನಿಮಗೆ ಬಿಟ್ಟದ್ದು. ಆದರೆ ನಮ್ಮ ಹೋರಾಟ ನೀವು ರಾಜೀನಾಮೆ ಕೊಡುವವರೆಗೆ ನಿಲ್ಲುವುದಿಲ್ಲ ಎಂದು ಛಲವಾದಿ ಎಚ್ಚರಿಸಿದ್ದಾರೆ.
ಸಚಿವ ಈಶ್ವರ ಖಂಡ್ರೆಯನ್ನು ಮನೆಯೊಳಗೆ ಬಿಟ್ಟು ಕೊಂಡಿರಲಿಲ್ಲ
ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸಚಿನ್ ಕುಟುಂಬದವರನ್ನು ಭೇಟಿ ಮಾಡಿ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದ್ದೇವೆ. ಮೃತನ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗಿದ್ದ ಸಚಿವ ಈಶ್ವರ ಖಂಡ್ರೆ ಅವರನ್ನು ಅವರು ಮನೆಯೊಳಗೆ ಬಿಟ್ಟು ಕೊಂಡಿರಲಿಲ್ಲ ಎಂದು ನಮ್ಮೊಂದಿಗೆ ಮಾತನಾಡುವಾಗ ಸ್ಥಳೀಯರು ಹೇಳಿದ್ದಾರೆ.
ಒತ್ತಾಯಿಸಿ ಖಂಡ್ರೆ ಕುಟುಂಬಸ್ಥರನ್ನು ಭೇಟಿ ಮಾಡಿ ಮಾತನಾಡಿ ಬಂದಿದ್ದಾರೆ. ಆದರೆ ನಾವು ಹೋದಾಗ ಇಡೀ ಕುಟುಂಬ ನಮ್ಮನ್ನು ಸ್ವಾಗತಿಸಿತು. ಅದು ರಾಜಕೀಯ ಮಾಡುವ ಕುಟುಂಬವಲ್ಲ. ಅವರಿಗೆ ನ್ಯಾಯದ ಹೊತರತು ಬೇರೇನೂ ಬೇಕಾಗಿಲ್ಲ. ನಾವು 10 ಲಕ್ಷ ರೂ. ಹಣ ಜೋಡಿಸಿ ಅವರಿಗೆ ಕೊಡಲು ಹೋಗಿದ್ದೆವು. ಅವರು ಕೈಮುಗಿದು ‘ನಮಗೆ ಹಣ ಬೇಡ; ನ್ಯಾಯ ಬೇಕು’ ಎಂದು ಹೇಳಿದ್ದಾರೆ. ಹೀಗಾಗಿ ಆ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.