Ration Card Issue | ಮುಗಿಯದ ರೇಷನ್ ಕಾರ್ಡ್ ಗೊಂದಲ; ತಪ್ಪದ ಅಲೆದಾಟ
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ದಿನಾಂಕ ಇಂದು; ಅಂದರೆ (ಡಿ.31) ಕೊನೆಯಾಗಿದ್ದು, ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರು ಅಲೆದಾಡುವಂತಾಗಿದೆ.
ಅನರ್ಹ ರೇಷನ್ ಕಾರ್ಡ್ (ಪಡಿತರ ಚೀಟಿ) ರದ್ದತಿಗೆ ಆದೇಶಿಸಿ ಅದರ ನಿರ್ವಹಣೆ ಮಾಡುವ ವಿಷಯದಲ್ಲಿ ಆಗಿರುವ ಲೋಪದಿಂದಾಗಿ ಲಕ್ಷಾಂತರ ಬಿಪಿಎಲ್ ಕಾರ್ಡುದಾರರು ದಿಕ್ಕು ತೋಚದಂತಾಗಿದ್ದು, ರಾಜ್ಯ ಸರ್ಕಾರದ ʼತಿದ್ದುಪಡಿ ಅವಕಾಶ" ಮತ್ತಷ್ಟು ಗೊಂದಲ ಸೃಷ್ಟಿಸಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ದಿನಾಂಕ ಇಂದು; ಅಂದರೆ (ಡಿ.31) ಕೊನೆಯಾಗಿದೆ. ಆದರೆ, ಸಾರ್ವಜನಿಕರಿಗೆ ಆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ, ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನದಂದು ತಿದ್ದುಪಡಿಗಾಗಿ ಸರದಿಯಲ್ಲಿ ನಿಂತವರ ಸಾಲು ಹನುಮಂತನ ಬಾಲದಂತಾಗಿದೆ. ಸಾರ್ವಜನಿಕರು ಬೆಳಗಿನಿಂದಲೇ ಒಂದು ಕೇಂದ್ರದಿಂದ ಇನ್ನೊಂದೆಡೆ ಅಲೆಯುತ್ತಿದ್ದಾರೆ.
ರಾಜ್ಯ ಸರ್ಕಾರ ಪಡಿತರ ಚೀಟಿ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಲೇ ಇದೆ ಎಂದ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ಹೆಸರು ತೆಗೆಯುವುದು, ಫೋಟೊ ಬದಲಾವಣೆ, ಮನೆ ಯಜಮಾನನ ಹೆಸರು ಬದಲಾವಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಈ ಎಲ್ಲ ತಿದ್ದುಪಡಿ ಮಾಡಿಕೊಳ್ಳಲು ಸೂಕ್ತ ದಾಖಲೆಯಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಅಥವಾ ಆದಾಯ ಪ್ರಮಾಣ ಪತ್ರ, ಆರು ವರ್ಷದ ಒಳಗಿನ ಮಕ್ಕಳಿದ್ದರೆ ಜನನ ಪ್ರಮಾಣ ಪತ್ರ ದಾಖಲೆ ನೀಡಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಆದರೆ, ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ತಿದ್ದುಪಡಿ ಕೇಂದ್ರಗಳು ಇಲ್ಲದಿರುವುದರಿಂದ ಸಾರ್ವಜನಿಕರು ದಿನಗಟ್ಟಲೇ ಸರದಿಸಾಲಿನಲ್ಲಿ ನಿಂತರೂ ತಮ್ಮ ಕೆಲಸ ಆಗದೇ ನಿರಾಸೆಯಿಂದ ತೆರಳುವಂತಾಗಿದೆ. ಇಂದು ತಿದ್ದುಪಡಿಗೆ ಕೊನೆಯ ದಿನವಾಗಿದ್ದರಿಂದ ತಿದ್ದುಪಡಿಗೆ ಬಯೊಮೆಟ್ರಿಕ್ ಅನುಮತಿ ಪಡೆದಿರುವ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿದ್ದು, ಸಂಜೆ 5 ಗಂಟೆಯ ಒಳಗೆ ಎಲ್ಲರ ಕಾರ್ಡ್ ಗಳು ತಿದ್ದುಪಡಿ ಆಗುವುದು ಅನುಮಾನ.
ಬೆಂಗಳೂರು ಒನ್ ಎಲ್ಲ ಕೇಂದ್ರಗಳಿಗೂ ಅಧಿಕಾರ ಇಲ್ಲ
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಬೆಂಗಳೂರಿನಲ್ಲಿ ಬೆಂಗಳೂರು ಒನ್ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ವಾಸ್ತವವಾಗಿ ಬೆಂಗಳೂರಿನಲ್ಲಿರುವ ಎಲ್ಲ ಬೆಂಗಳೂರು ಒನ್ ಕೇಂದ್ರಗಳಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿಲ್ಲ. ಕೆಲವೇ ಕೆಲವು ಬೆಂಗಳೂರು ಒನ್ ಕೇಂದ್ರಗಳಿಗೆ ಬಯೊಮೆಟ್ರಿಕ್ ಅನುಮತಿ ನೀಡಿದ್ದು, ಆ ಕೇಂದ್ರಗಳಲ್ಲಿ ಜನ ಸಂದಣಿ ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಜನರ ಪರದಾಟ
"ರೇಷನ್ ಕಾರ್ಡ್ ತಿದ್ದುಪಡಿಗೆ ಯಲಹಂಕದಿಂದ ಡಿಸಿ ಕಚೇರಿಗೆ ಕಳಿಸಿದ್ದಾರೆ, ಅಲ್ಲಿಂದ ರಾಜಾಜಿನಗರಕ್ಕೆ ಹೋಗಿ ಅಂತ ಕಳಿಸಿದ್ದಾರೆ. ಈಗ ಇಲ್ಲಿ ಬಂದು ಕೇಳಿದರೆ ಇವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅಂತ ಹೇಳುತ್ತಾರೆ" ಎಂದು ಬೆಂಗಳೂರು ರಾಜಾಜಿನಗರ ವಾಸಿ ಎಂ. ರಾಮಣ್ಣ ʼದ ಫೆಡರಲ್ ಕರ್ನಾಟಕʼದ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ಇಲಾಖೆ ಪ್ರತಿಕ್ರಿಯೆ ಪಡೆಯಲು ʼದ ಫೆಡರಲ್ ಕರ್ನಾಟಕʼ ಪ್ರಯತ್ನಿಸಿತು. "ಬಯೊಮೆಟ್ರಿಕ್ ಪಡೆದು ರೇಷನ್ ಕಾರ್ಡ್ ತಿದ್ದುಪಡಿಗೆ ಸೂಚಿಸಲಾಗಿದೆ. ಆದರೆ, ಅನೇಕ ಬೆಂಗಳೂರು ಒನ್ ಕೇಂದ್ರದವರು ಬಯೊಮೆಟ್ರಿಕ್ ಪಡೆಯಲು ಬರುತ್ತಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ," ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ತದ್ಚಿರುದ್ದ ಅಭಿಪ್ರಾಯ
ಬೆಂಗಳೂರಿನಲ್ಲಿರುವ ಎಲ್ಲ ಬೆಂಗಳೂರು ಒನ್ ಕೇಂದ್ರಗಳಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಬಯೊಮೆಟ್ರಿಕ್ ಪಡೆಯಲು ಆಹಾರ ಮತ್ತು ನಾಗರೀಕ ಇಲಾಖೆ ಸೂಚನೆ ನೀಡಿದ್ದು, ಕೆಲವು ಬೆಂಗಳೂರು ಒನ್ ಕೇಂದ್ರದವರು ಬಯೊಮೆಟ್ರಿಕ್ ಪಡೆಯಲು ಮುಂದೆ ಬರುತ್ತಿಲ್ಲ ಎನ್ನುವುದು ಇಲಾಖಾ ಅಧಿಕಾರಿಗಳ ಅಭಿಪ್ರಾಯ.
ಆದರೆ, ಬಹುತೇಕ ಬೆಂಗಳೂರು ಒನ್ ಕೇಂದ್ರಗಳು ತಮಗೆ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಬಯೊಮೆಟ್ರಿಕ್ ಅನುಮತಿ ನೀಡಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಮತ್ತು ಬೆಂಗಳೂರು ಕೇಂದ್ರಗಳ ನಡುವಿನ ತಿಕ್ಕಾಟದ ನಡುವೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.