ಬೀದರ್‌ ಗುತ್ತಿಗೆದಾರ ಆತ್ಮಹತ್ಯೆ | ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಬಿಜೆಪಿ ಪೊಸ್ಟರ್ ಅಭಿಯಾನ

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ʼಸುಪಾರಿ ಸ್ಪಾನ್ಸರ್‌ ಖರ್ಗೆʼ ಎಂಬ ಬರಹದ ಪೋಸ್ಟರ್‌ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.

Update: 2024-12-31 07:40 GMT
ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಖರ್ಗೆ ವಿರುದ್ಧ ಪೋಸ್ಟರ್‌ ಅಭಿಯಾನ ನಡೆಸಿದರು

ಬೀದರ್‌ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಹೋರಾಟ ತೀವ್ರಗೊಳಿಸಿರುವ ಪ್ರತಿಪಕ್ಷ ಬಿಜೆಪಿ, ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಪೊಸ್ಟರ್ ಅಭಿಯಾನ ಆರಂಭಿಸಿದೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ʼಸುಪಾರಿ ಸ್ಪಾನ್ಸರ್‌ ಖರ್ಗೆʼ ಎಂಬ ಬರಹದ ಪೋಸ್ಟರ್‌ಗಳನ್ನು ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸ್ ವಾಹನಕ್ಕೂ ಪೊಸ್ಟರ್ ಅಂಟಿಸಿದರು. ಆಗ ಪೊಲೀಸರು ಎಲ್ಲ ಪೋಸ್ಟರ್‌ಗಳನ್ನು ತೆರವುಗೊಳಿಸಿ, ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ ರವಿ, ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್ ಸೇರಿದಂತೆ ಮಾಜಿ ಪಾಲಿಕೆ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು.

ಸಚಿನ್‌ ಪಂಚಾಳ್‌ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ರವಿ ಕಪನೂರು ಹಾಗೂ ಸಹಚರರ ತಂಡ ಬಿಜೆಪಿ ಶಾಅಸಕ ಬಸವರಾಜ ಮತಿಮುಡ್‌ ಹಾಗೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದೆ ಎಂದು ಉಲ್ಲೇಖಿಸಲಾಗಿದೆ. ಆರೋಪಿ ರಾಜು ಕಪನೂರ ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತರಾಗಿದ್ದು, ಆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಅಲ್ಲದೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದೆ.

ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಗುತ್ತಿಗೆದಾರರ ಆತ್ಮಹತ್ಯೆ ಹಾಗೂ 40 ಪರ್ಸೆಂಟ್‌ ಕಮಿಷನ್‌ ಪ್ರಕರಣದಲ್ಲಿ ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ ʼಪೇ ಸಿಎಂʼ ಅಭಿಯಾನ ನಡೆಸಿತ್ತು. ನಗರದ ಹಲವೆಡೆ  ಪೇ ಸಿಎಂ ಪೋಸ್ಟರ್‌ಗಳನ್ನು ಅಂಟಿಸಿ, ಹೋರಾಟ ನಡೆಸಿತ್ತು.  ಅಲ್ಲದೆ, ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲ ಪೇಸಿಎಂ ಮತ್ತು 40 % ಕಮಿಷನ್‌ ವಿಷಯಗಳನ್ನು ಜೀವಂತವಾಗಿಟ್ಟು ಚುನಾವಣೆಯಲ್ಲಿ ಆ ಅಭಿಯಾನದ ಬಲದ ಮೇಲೆಯೇ ಅತಿ ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬಂದಿತ್ತು.

ಇದೀಗ ಕಾಂಗ್ರೆಸ್‌ ತನ್ನ ವಿರುದ್ಧ ಎರಡು ವರ್ಷದ ಹಿಂದೆ ಪ್ರಯೋಗಿಸಿದ್ದ ಅದೇ ತಂತ್ರವನ್ನು ಬಿಜೆಪಿ ಪ್ರಯೋಗಿಸಲು ಮುಂದಾಗಿದ್ದು, ʼಸುಪಾರಿ ಸ್ಪಾನ್ಸರ್‌ ಖರ್ಗೆʼ ಪೋಸ್ಟರ್‌ ಅಭಿಯಾನ ತೀವ್ರಗೊಳಿಸಿದೆ.

Tags:    

Similar News