C T Ravi Case | ಬೆಳಗಾವಿ ಎಸ್‌ಪಿ ವಿರುದ್ಧ ಡಿಜಿಪಿಗೆ ದೂರು ನೀಡಿದ ಸಿ ಟಿ ರವಿ
ತಮ್ಮನ್ನು ಎತ್ತಿ ಪಶುವಿನ ರೀತಿ ಕಿಡ್ನ್ಯಾಪ್ ಮಾಡಿದ್ದಾರೆಂದು ಬೆಳಗಾವಿ ಪೊಲೀಸ್ ಕಮಿಷನರ್, ಎಸ್‌ಪಿ ವಿರುದ್ಧ ಸಿ.ಟಿ.ರವಿ ಆರೋಪ ಮಾಡಿದ್ದಾರೆ. ಇಡೀ ಸನ್ನಿವೇಶ ಫೇಕ್ ಎನ್ಕೌಂಟರ್ ರೀತಿ ಇತ್ತು. ಲೈಸೆನ್ಸ್ಡ್ ಸುಪಾರಿ ಕಿಲ್ಲರ್ಗಳ ರೀತಿ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ವಿಧಾನ ಪರಿಷತ್ ನಲ್ಲಿ ಅಶ್ಲೀಲ ಪದ ಬಳಕೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಬೆಳಗಾವಿ ಗ್ರಾಮಾಂತರದ ಬಾಗೇವಾಡಿ ಪೊಲೀಸರು ಬಂಧಿಸಿದ್ದರು. ಬಂಧನ ಬಳಿಕ ಪೊಲೀಸರು ಬೆಂಗಳೂರಿಗೆ ಕರೆದೊಯ್ಯುವುದಾಗಿ ಹೇಳಿ ರಾತ್ರಿ ಇಡೀ ಕಾರಿನಲ್ಲಿ ಬೆಳಗಾವಿ ಜಿಲ್ಲೆಯಲ್ಲೇ ಸುತ್ತಾಡಿಸಿದ್ದರು ಎಂದು ಸಿ.ಟಿ.ರವಿ ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.19 ರಂದು ತಮ್ಮನ್ನು ರಾತ್ರಿ ಅಕ್ರಮವಾಗಿ ಬಂಧಿಸಿ ಅಲೆದಾಡಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಅವರು 8 ಪುಟಗಳ ದೂರು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನ ಡಿಜಿಪಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮತ್ತು ಬೆಳಗಾವಿ ಎಸ್‌ಪಿ ಭೀಮಾಶಂಕರ್ ಗುಳೇದ್ ವಿರುದ್ಧ ಆರೋಪ ಮಾಡಿದ್ದಾರೆ.
ತಮ್ಮನ್ನು ಎತ್ತಿ ಪಶುವಿನ ರೀತಿ ಕಿಡ್ನ್ಯಾಪ್ ಮಾಡಿದ್ದಾರೆಂದು ಬೆಳಗಾವಿ ಪೊಲೀಸ್ ಕಮಿಷನರ್, ಎಸ್‌ಪಿ ವಿರುದ್ಧ ಸಿ.ಟಿ.ರವಿ ಆರೋಪ ಮಾಡಿದ್ದಾರೆ. ಇಡೀ ಸನ್ನಿವೇಶ ಫೇಕ್ ಎನ್ಕೌಂಟರ್ ರೀತಿ ಇತ್ತು. ಲೈಸೆನ್ಸ್ಡ್ ಸುಪಾರಿ ಕಿಲ್ಲರ್ಗಳ ರೀತಿ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಟಿ ರವಿ, ನನ್ನನ್ನು ಅಕ್ರಮವಾಗಿ ಬಂಧಿಸಿ, ದೂರು ಕೊಟ್ಟ ಬಳಿಕವೂ ಎಫ್ಐ ಆರ್ ಹಾಕದೆ ನನ್ನ ಮೇಲೆ ದೌರ್ಜನ್ಯವೆಸಗಿ, ಕೆಲವು ಪ್ರಭಾವಿ ವ್ಯಕ್ತಿಗಳ ನಿದರ್ಶನದಂತೆ ರಾತ್ರಿ ಇಡೀ ನಿರ್ಜನ ಪ್ರದೇಶಗಳಲ್ಲಿ ಸುತ್ತಾಡಿಸಿ, ಸಂಪೂರ್ಣವಾಗಿ ಕಾನೂನಿನ ಉಲ್ಲಂಘನೆ ಮಾಡಿದ ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಬಿಜೆಪಿ ನಿಯೋಗದೊಂದಿಗೆ ತೆರಳಿ ದೂರು ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಪ್ರಕರಣ ಸಂಬಂಧ ಬಿಜೆಪಿ ನಿಯೋಗ ಈ ಹಿಂದೆ ರಾಜ್ಯಪಾಲರಿಗೆ ದೂರು ನೀಡಿತ್ತು. ಹೀಗಾಗಿ ಮಂಗಳವಾರ ಸಿ.ಟಿ ರವಿಗೆ ಬುಲಾವ್ ನೀಡಿದ್ದ ರಾಜ್ಯಪಾಲರು ಪ್ರಕರಣದ ಸಂಪೂರ್ಣ ವಿವರ ಪಡೆದುಕೊಂಡಿದ್ದರು. ಸಿ.ಟಿ ರವಿ ಕೂಡಾ 8 ಪುಟಗಳ ದೂರು ನೀಡಿದ್ದರು. ಈ ದೂರಿನಲ್ಲಿ ಡಿ.ಕೆ ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.