Ration Card Issue | ರೇಷನ್ ಕಾರ್ಡ್ ಗೊಂದಲಕ್ಕೆ ತಾತ್ಕಾಲಿಕ ತೆರೆ; ಸಾರ್ವಜನಿಕರಿಗೆ ತುಸು ನಿರಾಳ
ಕೊನೆಗೂ ಪಡಿತರ ಚೀಟಿ ತಿದ್ದುಪಡಿ ಗೊಂದಲಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಾತ್ಕಾಲಿಕ ಪರಿಹಾರ ನೀಡಿದೆ. ರೇಷನ್ ಕಾರ್ಡ್ ತಿದ್ದುಪಡಿ ಸಂಬಂಧ ನೀಡಲಾಗಿದ್ದ ಮಂಗಳವಾರ (ಡಿ.31)ದ ಗಡುವನ್ನು ಇನ್ನೂ ಒಂದು ತಿಂಗಳು ಮುಂದೂಡಲಾಗಿದೆ.
ರಾಜ್ಯಾದ್ಯಂತ ಪಡಿತರ ಚೀಟಿ ನವೀಕರಣ ಸಂಬಂಧ ಜನ ಪರದಾಟ ನಡೆಸಿದ್ದು, ಕೊನೆಗೂ ಸರ್ಕಾರ ದಿನಾಂಕ ಮುಂದೂಡಿಕೆ ಮಾಡಿದೆ. ಅಧಿಕೃತ ಆದೇಶದಲ್ಲಿ ಪಡಿತರ ಚೀಟಿ ತಿದ್ದುಪಡಿ ದಿನಾಂಕವನ್ನು ಜ. 31 ಕ್ಕೆ ಮುಂದೂಡಲಾಗಿದೆ.
ಅನರ್ಹ ರೇಷನ್ ಕಾರ್ಡ್ (ಪಡಿತರ ಚೀಟಿ) ರದ್ದತಿಗೆ ಆದೇಶಿಸಿ ಅದರ ನಿರ್ವಹಣೆ ಮಾಡುವ ವಿಷಯದಲ್ಲಿ ಆಗಿರುವ ಲೋಪದಿಂದಾಗಿ ಲಕ್ಷಾಂತರ ಬಿಪಿಎಲ್ ಕಾರ್ಡುದಾರರು ದಿಕ್ಕು ತೋಚದಂತಾಗಿದ್ದು, ರಾಜ್ಯ ಸರ್ಕಾರದ ʼತಿದ್ದುಪಡಿ ಅವಕಾಶ" ಮತ್ತಷ್ಟು ಗೊಂದಲ ಸೃಷ್ಟಿಸಿತ್ತು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ (ಡಿ.31) ದಿನಾಂಕ ಮಂಗಳವಾರ ಕೊನೆಯಾಗಿತ್ತು. ಆದರೆ, ಸಾರ್ವಜನಿಕರಿಗೆ ಆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ, ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆದಾಡುವಂತಾಗಿತ್ತು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ಹೆಸರು ತೆಗೆಯುವುದು, ಫೋಟೊ ಬದಲಾವಣೆ, ಮನೆ ಯಜಮಾನನ ಹೆಸರು ಬದಲಾವಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಈ ಎಲ್ಲ ತಿದ್ದುಪಡಿ ಮಾಡಿಕೊಳ್ಳಲು ಸೂಕ್ತ ದಾಖಲೆಯಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಅಥವಾ ಆದಾಯ ಪ್ರಮಾಣ ಪತ್ರ, ಆರು ವರ್ಷದ ಒಳಗಿನ ಮಕ್ಕಳಿದ್ದರೆ ಜನನ ಪ್ರಮಾಣ ಪತ್ರ ದಾಖಲೆ ನೀಡಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಆದರೆ, ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ತಿದ್ದುಪಡಿ ಕೇಂದ್ರಗಳು ಇಲ್ಲದಿರುವುದರಿಂದ ಸಾರ್ವಜನಿಕರು ದಿನಗಟ್ಟಲೇ ಸರದಿಸಾಲಿನಲ್ಲಿ ನಿಂತರೂ ತಮ್ಮ ಕೆಲಸ ಆಗದೇ ನಿರಾಸೆಯಿಂದ ತೆರಳಿದ್ದರು.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಬೆಂಗಳೂರಿನಲ್ಲಿ ಬೆಂಗಳೂರು ಒನ್ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ವಾಸ್ತವವಾಗಿ ಬೆಂಗಳೂರಿನಲ್ಲಿರುವ ಎಲ್ಲ ಬೆಂಗಳೂರು ಒನ್ ಕೇಂದ್ರಗಳಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿರಿಲಿಲ್ಲ. ಕೆಲವೇ ಕೆಲವು ಬೆಂಗಳೂರು ಒನ್ ಕೇಂದ್ರಗಳಿಗೆ ಬಯೊಮೆಟ್ರಿಕ್ ಅನುಮತಿ ನೀಡಿದ್ದು, ಆ ಕೇಂದ್ರಗಳಲ್ಲಿ ಜನ ಸಂದಣಿ ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು.