ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಸಿಎಂ

ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ ? ಜನರನ್ನು ಮೌಡ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.;

Update: 2025-07-01 12:10 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

"ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂತ ತಾನೇ ಅರ್ಥ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸುವ ಮೂಲಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ "ಪತ್ರಿಕಾ ದಿನಾಚರಣೆ-2025" ಹಾಗೂ "ನಿಜ ಸುದ್ದಿಗಾಗಿ ಸಮರ" ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಮತ್ತು "ಪತ್ರಕರ್ತರ ಆರೋಗ್ಯ ಸಂಜೀವಿನಿ" ಯೋಜನೆಗಳಿಗೂ ಮುಖ್ಯಮಂತ್ರಿ ಚಾಲನೆ ನೀಡಿದರು.

"ಸುಳ್ಳು ಮತ್ತು ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಅಪಾಯ"

ಮುಖ್ಯಮಂತ್ರಿಗಳು ಮಾತನಾಡಿ, "ಸುಳ್ಳು ಮತ್ತು ಊಹಾ ಪತ್ರಿಕೋದ್ಯಮವು ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯಕಾರಿ" ಎಂದು ಎಚ್ಚರಿಸಿದರು. "ಮಾಧ್ಯಮವು ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಾನು ನಂಬಿಕೆ ಇಟ್ಟುಕೊಂಡಿರುವವನು. ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಯಾವುದೇ ಚಾನೆಲ್‌ಗಳು ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಕೂಡ ಮಾಡುವುದಿಲ್ಲ" ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ತಮ್ಮ ಕಾರಿನ ಮೇಲೆ ಕಾಗೆ ಕೂತಿದ್ದಂತಹ ಕ್ಷುಲ್ಲಕ ವಿಷಯಗಳನ್ನು ಚರ್ಚಿಸಿ ಮೂಢನಂಬಿಕೆಗಳನ್ನು ಬಿತ್ತುವುದು ಪತ್ರಿಕಾವೃತ್ತಿಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. "ಜನರನ್ನು ಮೌಢ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಕರ್ತರ ಸೌಲಭ್ಯಗಳು, ಸತ್ಯಕ್ಕಾಗಿ ಕರೆ

"ನಾನು ಇವತ್ತು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಮತ್ತು ಆರೋಗ್ಯ ಸಂಜೀವಿನಿ ಯೋಜನೆ ಉದ್ಘಾಟಿಸಿ ಅವರಿಗೆ ಅನುಕೂಲ ಒದಗಿಸಿದ್ದೇವೆ. ಇದು ನಮ್ಮ ಪರವಾಗಿ ಬರೆಯಲಿ ಎನ್ನುವ ಕಾರಣದಿಂದ ಜಾರಿ ಮಾಡಿರುವುದಲ್ಲ. ಸತ್ಯ ಬರೆಯಿರಿ, ಜನರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಇರಿ" ಎಂದು ಮುಖ್ಯಮಂತ್ರಿಗಳು ಪತ್ರಕರ್ತರಿಗೆ ಕರೆ ನೀಡಿದರು. 

Tags:    

Similar News