ಲೋಕಸಭೆ ಚುನಾವಣೆ ಬಂತು; ದುಡ್ಡು ವರ್ಗಾಯಿಸುವಾಗ ಜೋಕೆ!

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕೊನೆಯ ದಿನ ಯಾವುದು?;

By :  Hitesh Y
Update: 2024-03-22 09:23 GMT
ಹಣ (ಚಿತ್ರಕೃಪೆ: pexels)

ಲೋಕಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗಿದ್ದು, ಅಕ್ರಮ ಹಣ ವರ್ಗಾವಣೆಯ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹಣ ಸಾಗಿಸಬೇಕಾದರೆ, ಹಣದ ಮೂಲದ ಬಗ್ಗೆ ದಾಖಲೆ ಇರುವುದು ಕಡ್ಡಾಯವಾಗಿದೆ. ಹೀಗಾಗಿ, ಜನರು ಎಷ್ಟು ಮೊತ್ತದ ಹಣ ಸಾಗಿಸಬಹುದು, ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದೆ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನು ಎಷ್ಟು ಸಮಯ ಇದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ 50,000 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಇರಿಸಿಕೊಳ್ಳುವಂತಿಲ್ಲ. ಒಂದೊಮ್ಮೆ 50,000 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಹಣ ಇದ್ದರೆ, ಅದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಎಲ್ಲಿಂದ ಹಣ ಡ್ರಾ ಮಾಡಲಾಗಿದೆ, ಇಲ್ಲವೇ ಹಣದ ಮೂಲ ಯಾವುದು ಎನ್ನುವುದಕ್ಕೆ ನಿಖರವಾದ ದಾಖಲೆಗಳು ಇರಬೇಕು ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಅವರು ತಿಳಿಸಿದರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಅಕ್ರಮ ಹಣ ವರ್ಗಾವಣೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ಬ್ಯಾಂಕ್‌ಗಳ ನೋಡಲ್ ಅಧಿಕಾರಿಗಳಿಗೂ ಸಹ ಯಾವುದಾದರು ಅನುಮಾನಾಸ್ಪದ ವಹಿವಾಟು ನಡೆಯುವುದು ಕಂಡು ಬಂದರೆ, ಕೂಡಲೇ ಚುನಾವಣಾ ವಿಭಾಗದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಲಾಗಿದೆ. ಅದೇ ರೀತಿ ಯಾರಾದರೂ ಒಂದು ನಿರ್ದಿಷ್ಟ ಖಾತೆಯಿಂದ ಹಲವು ಖಾತೆಗಳಿಗೆ ಹಣ ವರ್ಗಾವಣೆ ಮಾಡಿದರೆ ಅವರ ಮಾಹಿತಿಯನ್ನು ನೀಡಬೇಕು ಎಂದು ಬ್ಯಾಂಕ್‌ಗಳ ನೋಡಲ್ ಅಧಿಕಾರಿಗಳಿಗೆ ನಿರ್ದೇಶನ  ನೀಡಲಾಗಿದೆ. ಈ ಮಾದರಿಯ ವರ್ಗಾವಣೆಗಳ ಬಗ್ಗೆ ಮಾಹಿತಿ ನೀಡದಿದ್ದರೆ, ಬ್ಯಾಂಕ್‌ನ ಸಿಬ್ಬಂದಿಯನ್ನೇ ಹೊಣೆ ಮಾಡಲಾಗುವುದು. ಚುನಾವಣಾ ಆಯೋಗದಿಂದಲೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಖಾತೆಯಿಂದ ಹಣ ವರ್ಗಾವಣೆ: ನಿಗಾಕ್ಕೆ ಸೂಚನೆ

ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಒಂದು ಬ್ಯಾಂಕ್ ಖಾತೆಯಿಂದ ಆರ್.ಟಿ.ಜಿ.ಎಸ್/ನೆಫ್ಟ್ ಮೂಲಕ ಹಲವರ ಖಾತೆಗೆ ಹೆಚ್ಚು ಹಣ ವರ್ಗಾವಣೆ ಮಾಡುವುದು, ಯಾವುದೇ ನಗದು ಠೇವಣಿ ಅಥವಾ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವುದು, ಮತದಾರರಿಗೆ ಹಣ ನೀಡಲು ವರ್ಗಾವಣೆ ನಡೆಸುವುದು ಸೇರಿದಂತೆ ಯಾವುದೇ ರೀತಿಯ ಅನುಮಾನ ಮೂಡಿದರೆ, ಕೂಡಲೇ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೇ ಹಣ ಠೇವಣಿ ಅಥವಾ ಹಿಂಪಡೆಯುವ ಮೊತ್ತವು 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದರೆ, ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದು ಸೆಲ್ವಮಣಿ ಅವರು ತಿಳಿಸಿದರು.


 ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮಾ.25  ಕೊನೆ 

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ತಡ ಮಾಡಬೇಡಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸುವುದಕ್ಕೆ ಇನ್ನು ಕೇವಲ 3 ದಿನ ಮಾತ್ರ ಬಾಕಿ ಉಳಿದಿದೆ. ಹೌದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನೀವು ಮತಚಲಾಯಿಸಬೇಕಾದರೆ, ಮಾರ್ಚ್ 25ರ ಒಳಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕು. ಈ ಬಗ್ಗೆ ಮಾಹಿತಿ ನೀಡಿದ ಸೆಲ್ವಮಣಿ ಅವರು, ಮತದಾರರ ಪಟ್ಟಿಯಲ್ಲಿ ಯಾರು, ಯಾವಾಗ ಬೇಕಾದರೂ ಹೆಸರು ಸೇರ್ಪಡೆ ಮಾಡಬಹುದು. ಆದರೆ, ಲೋಕಸಭೆ ಚುನಾವಣೆ 2024ರಲ್ಲಿ ಮತ ಚಲಾಯಿಸಬೇಕಾದರೆ, ಮಾರ್ಚ್ 25ರ ಒಳಗಾಗಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 4 ಕೊನೆಯ ದಿನವಾಗಿದೆ. ಇದಕ್ಕೆ 10 ದಿನಗಳು ಬಾಕಿ ಇರುವ ವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದಕ್ಕೆ ಅವಕಾಶ ಇದೆ ಎಂದು ತಿಳಿಸಿದರು.

ಅಂಚೆ ಮತದಾನಕ್ಕೆ ವ್ಯವಸ್ಥೆ

ಕರ್ನಾಟಕದಲ್ಲಿ 85 ವರ್ಷ ಮೇಲ್ಮಟ್ಟವರು ಹಾಗೂ ವಿಶೇಷ ಚೇತನರು ಸೇರಿ ಅಂದಾಜು 11 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಅವರೆಲ್ಲರಿಗೂ ಅಂಚೆ ಮತದಾನದ ಅವಕಾಶ ಕಲ್ಪಿಸಲು ಚುನಾವಣಾ ಆಯೋಗ ಮುಂದಾಗಿದೆ. ಇನ್ನು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಅಂಚೆ ಮತದಾನ ಕಲ್ಪಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರಿಗಳು ಮನೆ– ಮನೆಗೆ ತೆರಳಿ ಅರ್ಜಿ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ಸಿಬ್ಬಂದಿ ಈಗಾಗಲೇ ಗುರುತಿಸಿರುವ ವಯೋವೃದ್ದರು ಮತ್ತು ವಿಶೇಷ ಚೇತನರ ಮನೆಗೆ ತೆರಳಲಿದ್ದಾರೆ. ಅರ್ಜಿ ಸಂಖ್ಯೆ 12ಡಿ ನೀಡಿ ಅವರಿಗೆ ಮನೆಯಿಂದ (ಅಂಚೆ ಮತದಾನ) ಅಥವಾ ಬೂತ್‌ಗೆ ಬಂದು ಮತ ಚಲಾಯಿಸಲಿದ್ದಾರೆಯೇ ಎಂದು ಕೇಳಲಿದ್ದಾರೆ. ವಯೋವೃದ್ಧರು ಹಾಗೂ ವಿಶೇಷ ಚೇತನರು ಯಾವುದಾದರೂ ಒಂದು ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ವೆಬ್‌ಸೈಟ್‌ ಮೂಲಕ ನೋಂದಣಿಗೆ ಅವಕಾಶ 

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರ ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ 12ಡಿ ನಮೂನೆ ಪಡೆದು ದೃಢೀಕರೀಸಲು ಸಾಧ್ಯವಾಗದಿದ್ದರೆ, ಭಾರತ ಚುನಾವಣಾ ಆಯೋಗದ ವೆಬ್‌ಸೈಟ್‌ https://www.eci.gov.in/ಗೆ ಭೇಟಿ ನೀಡಿದರೆ 12ಡಿ ನಮೂನೆಗಳು ಲಭ್ಯವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷರ್ ಗಿರಿನಾಥ್ ತಿಳಿಸಿದ್ದಾರೆ. 

Tags:    

Similar News