ನ.17ರಿಂದ ಐತಿಹಾಸಿಕ ಕಡಲೆ ಕಾಯಿ ಪರಿಷೆ; ಏನಿದರ ವಿಶೇಷತೆ ?

ಪರಿಷೆಯಲ್ಲಿ ಎನ್‌ಜಿಒಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಕವರ್‌ಗಳ ಬದಲು ಬಟ್ಟೆ ಬ್ಯಾಗ್‌ಗಳನ್ನು ಬಳಸಲು ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ʼಪರಿಷೆಗೆ ಬನ್ನಿ ಕೈ ಚೀಲ ತನ್ನಿʼ ಎಂಬ ಘೋಷಣೆ ಹೊರಡಿಸಲಾಗಿದೆ.

Update: 2025-10-24 00:30 GMT
ಪರಿಷೆಯಲ್ಲಿ ಕಡಲೆಕಾಯಿ ಖರೀದಿಸುತ್ತಿರುವ ಜನರು.
Click the Play button to listen to article

ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆಯು ನ.17ರಿಂದ ಐದು ದಿನಗಳ ಕಾಲ ನಡೆಯಲಿದ್ದು, ಪ್ಲಾಸ್ಟಿಕ್‌ ಕವರ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. 

ಗುರುವಾರ ನಗರದಲ್ಲಿ ನಡೆದ ಕಡಲೆ‌ಕಾಯಿ ಪರಿಷೆ - 2025 ರ ಪೂರ್ವಾಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ 2 ದಿನಗಳ ಪರಿಷೆಯನ್ನು 5 ದಿನಗಳಿಗೆ ವಿಸ್ತರಣೆ ಮಾಡಿದ್ದು, ವಿಜೃಂಭಣೆಯಿಂದ ನೆರವೇರಿಸಲು ತೀರ್ಮಾನಿಸಲಾಗಿದೆ. 2024ರಲ್ಲಿ ನಡೆದ ಕಡಲೆ ಕಾಯಿ ಪರಿಷೆಯಲ್ಲಿ ಸುಮಾರು 5 ಲಕ್ಷ ಮಂದಿ ಭಾಗವಹಿಸಿದ್ದರು. ಈ ಬಾರಿ ಐದು ದಿನಗಳಿಗೆ ವಿಸ್ತರಿಸಿರುವ ಕಾರಣ ಅತಿ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಿಎಂ, ಡಿಸಿಎಂಗೆ ಆಹ್ವಾನ

ಪ್ರತಿ ವರ್ಷದಂತೆ ಕಡೇ ಕಾರ್ತಿಕ ಮಾಸದಲ್ಲಿ ಬಸವನಗುಡಿಯ ಬಸವಣ್ಣ ದೇವಾಲಯದಲ್ಲಿ ನ. 17ರಂದು ಸೋಮವಾರ ಬೆಳಿಗ್ಗೆ10 ಗಂಟೆಗೆ ಕಡಲೆಕಾಯಿ ಪರಿಷೆ ಆರಂಭಗೊಳ್ಳಲಿದೆ. ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಆಹ್ವಾನ ನೀಡಲಾಗುವುದು. 21 ಬಸವಗಳನ್ನು ದೇವಸ್ಥಾನಕ್ಕೆ ಆಹ್ವಾನಿಸಿ‌ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ದೀಪಾಲಂಕಾರ ವಿಸ್ತರಣೆ

ಕಡಲೆಕಾಯಿ ಪರಿಷೆಗೆ ಮೆರಗು ನೀಡುವ ವಿಜೃಂಭಣೆಯ ದೀಪಾಲಂಕಾರ ವ್ಯವಸ್ಥೆಯನ್ನು ಈ ವರ್ಷ ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್ ಮತ್ತು ಎನ್. ಆರ್. ರಸ್ತೆಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.

ಪ್ಲಾಸ್ಟಿಕ್‌ ನಿಷೇಧ

ಪರಿಷೆಯಲ್ಲಿ ಎನ್‌ಜಿಒಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸದಂತೆ ಬಟ್ಟೆ ಬ್ಯಾಗ್ ಗಳನ್ನು ಬಳಸಲು ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ʼಪರಿಷೆಗೆ ಬನ್ನಿ ಕೈ ಚೀಲ ತನ್ನಿʼ ಎಂಬ ಘೋಷಣೆ ಹೊರಡಿಸಲಾಗಿದ್ದು, ಪ್ಲಾಸ್ಟಿಕ್‌ ಸಂಪೂರ್ಣವಾಗಿ ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷವೂ ಪ್ಲಾಸ್ಟಿಕ್‌ ನಿಷೇಧಿಸಲಾಗಿತ್ತು ಎಂದು ಹೇಳಿದರು.

ಸುಂಕ ವಸೂಲಾತಿ ರದ್ದು ಮುಂದುವರಿಕೆ 

ಬುಲ್ ಟೆಂಪಲ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಪ್ರತಿ ವರ್ಷ ಟೆಂಡರ್ ಮಾಡಲಾಗುತ್ತಿದ್ದು, ಟೆಂಡರ್ ದಾರರು ಅಂಗಡಿಯವರಿಂದ ಬಲವಂತವಾಗಿ ಹೆಚ್ಚು ಸುಂಕವನ್ನು ವಸೂಲಿ ಮಾಡುತ್ತಿರುವುದಾಗಿ ಕಳೆದ ವರ್ಷ ದೂರುಗಳು ಬಂಂದಿದ್ದವು. ಈ ಹಿನ್ನೆಲೆಯಲ್ಲಿ ಸುಂಕ ವಸೂಲಾತಿ ಟೆಂಡರ್ ಕೈಬಿಡಲು ಹಾಗೂ ವ್ಯಾಪಾರಸ್ಥರಿಂದ ಸುಂಕವನ್ನು ಕಳೆದ ವರ್ಷದಂತೆ ಈ ವರ್ಷವೂ ವಸೂಲಿ ಮಾಡದಂತೆ ತೀರ್ಮಾನ ಮಾಡಲಾಗಿದೆ.

ಸ್ವಚ್ಛತೆ, ನೈರ್ಮಲ್ಯಕ್ಕೆ‌ ಒತ್ತು

ಪರಿಷೆ ದಿನಗಳಂದು ಆರೋಗ್ಯ, ಸ್ವಚ್ಛತೆ, ನೈರ್ಮಲ್ಯಕ್ಕೆ‌ ಒತ್ತು ನೀಡಲಾಗುವುದು. ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಕಲ್ಪಸಲಾಗುವುದು. ನಿರಂತರ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ಥಿ, ಸುರಕ್ಷತೆಯ ದೃಷ್ಟಿಯಿಂದ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಿಸಿಟಿವಿಗಳನ್ನು  ಅಳವಡಿಸಲಾಗುವುದು ಹಾಗೂ ಅಗ್ನಿಶಾಮಕ ವಾಹನ ನಿಯೋಜಿಸಲಾಗುವುದು ಎಂದರು.

ಬಸವನಗುಡಿಯ ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನಿಗೆ ಕಡಲೆಕಾಯಿಯಿಂದ ಅಭಿಷೇಕ ಮತ್ತು ಬೆಣ್ಣೆ ಹಾಗೂ ಕಡಲೆಕಾಯಿ ಬೀಜದ ಅಲಂಕಾರ ಮಾಡಲಾಗುವುದು. ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡಲಾಗುವುದು.ಪರಿಷೆಗೆ ಬರುವ ಭಕ್ತರಿಗೆ ಕಡಲೆ ಕಾಯಿಯನ್ನು ಪ್ರಸಾದವಾಗಿ ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು.

ಕಡಲೆ ಕಾಯಿ ಪರಿಷೆಯ ಇತಿಹಾಸ

ಬೆಂಗಳೂರು ಮಹಾನಗರವಾಗುವ ಮೊದಲು ಬಸವನಗುಡಿ ಮೊದಲು ಸುಂಕೇನಹಳ್ಳಿಯಾಗಿತ್ತು. ಸುಂಕೇನಹಳ್ಳಿಯ ಮಣ್ಣು ಫಲವತ್ತಾಗಿತ್ತು. ಆ ದಿನಗಳಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲ ಪ್ರದೇಶದ ರೈತರ ಪ್ರಮುಖ ಬೆಳೆಯೇ ಕಡಲೆಕಾಯಿ. ಸುಂಕೇನಹಳ್ಳಿಯ ( ಬಸವನಗುಡಿ) ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ ಬೆಳೆಯುತ್ತಿದ್ದರು. ಆದರೆ ಇದು ರೈತರಿಗೆ ಸರಿಯಾಗಿ ಕಟಾವಿಗೆ ಸಿಗುತ್ತಿರಲಿಲ್ಲ. ಏಕೆಂದರೆ ಬಸವ ಒಂದು ರೈತರು ಬೆಳೆದ ನೆಲಗಡಲೆಗಳನೆಲ್ಲ ತಿಂದು ನಾಶಪಡಿಸುತ್ತಿತ್ತು. ಆಗ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸುವ ಹರಕೆ ಹೊತ್ತುಕೊಂಡು, ಬಸವನನ್ನು ಪ್ರಾರ್ಥಿಸಲು ಆರಂಭಿಸಿದರು. ಕಾಲಕ್ರಮೇಣ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು. ಇದನ್ನು 16 ನೇ ಶತಮಾನದಲ್ಲಿ ಈ ಸ್ಥಳದಲ್ಲಿ ಕೆಂಪೇಗೌಡರು ನಂದಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನ ಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಲಾಗುತ್ತದೆ. ಕಡಲೆ ಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ. ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ.

 ದೊಡ್ಡ ಬಸವನ ಇತಿಹಾಸ

ಗುಡ್ಡದ ತುದಿಯಲ್ಲಿ ದೊಡ್ಡ ಬಸವನ ಬೃಹತ್ ಏಕಶಿಲಾ ನಂದಿ ವಿಗ್ರಹವಿದೆ. ಈ ದೇವಾಲಯವನ್ನು ಕೆಂಪೇಗೌಡರು 1537ರಲ್ಲಿ ಕಟ್ಟಿಸಿದರು. ಸುಂದರವಾದ ಈ ದೇವಾಲಯವು ಸುಂದರವಾದ ಧ್ವಜಸ್ತಂಭ, ಈ ಕಲ್ಲು ಕಂಬದಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಉಬ್ಬು ಶಿಲ್ಪಗಳಿಂದ ಕೂಡಿದೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿ ವಿಶಾಲವಾದ ಗುಡಿ. ಪ್ರದಕ್ಷಿಣ ಪಥವಿದೆ. ಬಾಗಿಲಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಮೊದಲಿಗೆ ಈ ನದಿ ಭೂಮಿಯೊಳಗೇ ಉದ್ಭವವಾಗಿ ಗುಡಿಯ ಹಿಂಬದಿಯಲ್ಲಿ ಬಸವನ ಕೆರೆಯಾಗಿತ್ತು. ಆ ಕೆರೆಯಲ್ಲಿ ಸುತ್ತಮುತ್ತಲಿನವರು ಗಣಪತಿಯನ್ನು ವಿಸರ್ಜಿಸುತ್ತಿದ್ದರು. ಇದೀಗ ಕೆರೆಯಿದ್ದ ಜಾಗದಲ್ಲಿ ದೊಡ್ಡ ಕಟ್ಟಡವೊಂದರ ನಿರ್ಮಾಣವಾಗಿದೆ.

ಹೊರ ರಾಜ್ಯದಿಂದಲೂ ಆಗಮನ

ಬಸವನಗುಡಿ ಮತ್ತು ಸುತ್ತಮುತ್ತಲಿನ ಜನರು ಕಡಲೆಕಾಯಿ ಪರಿಷೆಯನ್ನು ಕಾತರದಿಂದ ಎದುರು ನೋಡುತ್ತಾರೆ. ಈ ಜಾತ್ರೆಗೆ ಕೇವಲ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದ ಜನರು ಮಾತ್ರವಲ್ಲ, ಶ್ರೀನಿವಾಸಪುರ, ಮಾಲೂರು,ಕೋಲಾರ ,ಮಂಡ್ಯ, ಮೈಸೂರು, ಚಾಮರಾಜನಗರ, ಮಾಗಡಿ, ರಾಮನಗರ ,ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ,ತುಮಕೂರು, ಚಿಂತಾಮಣಿ ,ಹೊಸಕೋಟೆ, ನೆರೆಯ ರಾಜ್ಯಗಳಾದ ತಮಿಳುನಾಡು ಆಂಧ್ರಪ್ರದೇಶಗಳಿಂದ ಸಹ ರೈತರು ಹಾಗೂ ವ್ಯಾಪಾರಿಗಳು ಇಲ್ಲಿ ಬಂದು ಕಡಲೆಕಾಯಿ ವ್ಯಾಪಾರ ಮಾಡುತ್ತಾರೆ.

Tags:    

Similar News