ಶೋಷಿತರ ನಿರ್ಲಕ್ಷಕ್ಕೆ ಸರ್ಕಾರ ಬೆಲೆ ತೆರೆಬೇಕಾದಿತು: ಪಿ. ರಾಜೀವ್‌

ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಭೋವಿ, ಬಂಜಾರ, ಕೊರಚ, ಕೊರಮ ಜಾತಿಗಳಿಗೆ ಶೇ 4.5 ಮೀಸಲಾತಿ ಕೊಟ್ಟಿತ್ತು. 59 ಅಲೆಮಾರಿ ಜಾತಿಗಳಿದ್ದು, ಅವರಿಗೆ ಪ್ರತ್ಯೇಕವಾಗಿ ಶೇ.1 ಮೀಸಲಾತಿ ನೀಡಿತ್ತು.;

Update: 2025-09-15 14:18 GMT

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌

Click the Play button to listen to article

ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿದ್ದು, ಅಸಾಂವಿಧಾನಾತ್ಮಕವಾಗಿ ಅನುಷ್ಠಾನಕ್ಕೆ ತಂದಿದೆ. ಸುಪ್ರೀಂ ಕೋರ್ಟ್‌ನ ಮಾನದಂಡಗಳು ಪಾಲನೆಯಾಗಿಲ್ಲ. ಯಾವ ವರದಿಗಳನ್ನೂ ಅನುಷ್ಠಾನಕ್ಕೆ ತಂದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಟೀಕಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿಯ ವಿಷಯದಲ್ಲಿ ನಾವು ಕೊಟ್ಟ ಒಂದು ವಾರದ ಗಡುವನ್ನು ಹಗುರವಾಗಿ ಪರಿಗಣಿಸಬಾರದು. ಸರ್ಕಾರದ ಬಳಿ ಇನ್ನೂ ಎರಡು ದಿನ ಸಮಯವಿದ್ದು, ಮರು ಪರಿಶೀಲನೆಗೆ ಕೈಗೊಳ್ಳುವ ಕ್ರಮದ ಕುರಿತು ಹೇಳಬೇಕು ಎಂದರು.

ಸರ್ಕಾರಕ್ಕೆ ಸೆ.17ರ ಸಂಜೆ 5 ಗಂಟೆಗೆ ನಾವು ಕೊಟ್ಟ ಗಡುವು ಮುಕ್ತಾಯವಾಗಲಿದೆ. ಸರ್ಕಾರವು ಶೋಷಿತ ಸಮುದಾಯಗಳ ನೋವನ್ನು ಈ ರೀತಿ ನಿರ್ಲಕ್ಷಿಸಿದರೆ, ಪರಿಣಾಮ ಎದುರಿಸಬೇಕಾಗುತ್ತದೆ.  ಸುಮಾರು 40 ಸಾವಿರ ಜನರ ಹೋರಾಟದ ವಿಚಾರವಾಗಿ ಸರ್ಕಾರದ ನಿಲುವೇನು ಎಂದು ನಮ್ಮ ಮನವಿ ಸ್ವೀಕರಿಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ತಿಳಿಸಬೇಕು ಎಂದು ಹೇಳಿದರು.

ಸೆ.10 ರಂದು ಸ್ವಾತಂತ್ರ ಉದ್ಯಾನವನದಲ್ಲಿ ಕೈಗೊಂಡ ಹೋರಾಟಕ್ಕಿಂತ ತೀವ್ರವಾದ ಹೋರಾಟ ಮುಂದಿನ ದಿನಗಳಲ್ಲಿ ನಡೆಯಲಿದೆ. ಸೆ.17 ಬುಧವಾರ ಸಂಜೆ 5 ಗಂಟೆ ವರೆಗೆ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ನಂತರ ನಮ್ಮ ಮುಂದಿನ ಹೋರಾಟದ ಕುರಿತು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಭೋವಿ, ಬಂಜಾರ, ಕೊರಚ, ಕೊರಮ ಜಾತಿಗಳಿಗೆ ಶೇ 4.5 ಮೀಸಲಾತಿ ಕೊಟ್ಟಿತ್ತು. 59 ಅಲೆಮಾರಿ ಜಾತಿಗಳಿದ್ದು, ಅವರಿಗೆ ಪ್ರತ್ಯೇಕವಾಗಿ ಶೇ.1 ನೀಡಿತ್ತು. ಇವೆರಡೂ ಪ್ರವರ್ಗಗಳನ್ನು ಒಂದುಗೂಡಿಸಿ ಸುಮಾರು 63 ಜಾತಿಗೆ ಬಿಜೆಪಿ ಕೊಟ್ಟಷ್ಟೇ ಮೀಸಲಾತಿ ಕೊಟ್ಟಿದ್ದರೂ ಶೇ.5.5 ಮೀಸಲಾತಿ ಸಿಗಬೇಕಿತ್ತು ಎಂದರು.

ಶೇ.0.5 ಮೀಸಲಾತಿ ಕಿತ್ತುಕೊಂಡ ಸರ್ಕಾರ

ಸಿಎಂ ಸಿದ್ದರಾಮಯ್ಯ ಸರ್ಕಾರ 2 ಪ್ರವರ್ಗಗಳನ್ನು ಸೇರಿಸಿ ಶೇ.5 ಮೀಸಲಾತಿ ನಿಗಧಿ ಮಾಡಿ, ಶೇ 0.5 ಕಿತ್ತುಕೊಂಡಿದ್ದಾರೆ. ಇದರ ವಿರುದ್ಧ ಈಗಾಗಲೇ ಸೆ.10 ರಂದು ಸ್ವಾತಂತ್ರ ಉದ್ಯಾನವನದಲ್ಲಿ ಎಲ್ಲ ಸಮುದಾಯಗಳು ಒಟ್ಟಾಗಿ ದೊಡ್ಡ ಹೋರಾಟ ಕೈಗೊಂಡಿದ್ದಾಗ ಸಚಿವ ರಾಮಲಿಂಗಾರೆಡ್ಡಿಯವರು ಬಂದು ಮನವಿ ಸ್ವೀಕರಿಸಿದ್ದರು. ಒಂದು ವಾರದ ಗಡುವನ್ನು ನೀಡಿದ್ದೆವು. ಇವತ್ತಿನವರೆಗೆ ಸರ್ಕಾರ ತಾವು ಕೈಗೊಂಡ ಕ್ರಮಗಳ ಕುರಿತು ತಿಳಿಸಿಲ್ಲ. ನನ್ನ ಮೇಲೂ ಸೇರಿದಂತೆ ಕೆಲವು ಹೋರಾಟಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಪ್ರಯತ್ನ ಮಾಡಿರುವುದು ಸರ್ಕಾರದ ಹತಾಶ ಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಹೊಸ ಜಾತಿಗಳ ನೆಲೆ ಎಲ್ಲಿವೆ?

ಸರ್ಕಾರ ಇಲ್ಲದೇ ಇರುವ ಜಾತಿಗಳನ್ನು ಸೃಷ್ಟಿ ಮಾಡಿದ್ದಾರೆ. ಬಂಜಾರ, ಲಂಬಾಣಿ ಜಾತಿಗಳಿವೆ. ಬಂಜಾರ ಕ್ರಿಶ್ಚಿಯನ್, ಭೋವಿ ಕ್ರಿಶ್ಚಿಯನ್ ಜಾತಿಯೇ ಇಲ್ಲ. ಇವುಗಳ ನೆಲೆ ಎಲ್ಲಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಪ್ರತಾಪ್‌ ಸಿಂಹ ಕೋರ್ಟ್‌ಗೆ ಹೋಗಿದ್ದು ವೈಯಕ್ತಿಕ

ದಸರಾ ವಿಚಾರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಬಿಜೆಪಿ ಆರೋಪಿಸಿತ್ತು. ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹೋಗಿದ್ದರು. ಪಕ್ಷದ ವತಿಯಿಂದ ನ್ಯಾಯಾಲಯಕ್ಕೆ ಹೋಗಿರಲಿಲ್ಲ. ನಮ್ಮ ಧಾರ್ಮಿಕ ಶ್ರದ್ಧೆ, ಆಚರಣೆ ಬಗ್ಗೆ ನಿಮಗೆ ನಂಬಿಕೆ ಇದೆಯೇ? ನೀವು ಚಾಮುಂಡೇಶ್ವರಿಯನ್ನು ಶಕ್ತಿ ಸ್ವರೂಪಿಣಿ ಎಂದು ಒಪ್ಪುವಿರಾ? ಕುಂಕುಮ ಮತ್ತು ಅರಿಶಿಣಕ್ಕೆ ಅಪಮಾನ ಮಾಡಿದ ಮಾತನ್ನು ಹಿಂದಕ್ಕೆ ಪಡೆಯುವಿರಾ ಎಂದು ಬಾನು ಮುಷ್ತಾಕ್‌ನ್ನು ಪ್ರಶ್ನಿಸಿದ ಅವರು, ನಾನು ಹಿಂದೂ ಆಚರಣೆಯನ್ನು ಗೌರವಿಸುವೆ, ಹಿಂದೂ ಸಂಸ್ಕೃತಿ ಬಗ್ಗೆ ನನಗೆ ನಂಬಿಕೆ ಇದೆ, ನಾನು ಅಧ್ಯಾತ್ಮದಲ್ಲಿ ವಿಶ್ವಾಸ ಇಟ್ಟಿದ್ದೇನೆ ಎಂದರೆ ನಮಗೆ ಯಾವ ವ್ಯತ್ಯಾಸವೂ, ಭಿನ್ನಾಭಿಪ್ರಾಯವೂ ಇಲ್ಲ ಎಂದರು.

Tags:    

Similar News