The Federal Ground Report | ನಮ್ಮ ಮಕ್ಕಳ ಹತ್ಯೆ ಪ್ರಕರಣಗಳನ್ನೂ ಎಸ್ಐಟಿ ವ್ಯಾಪ್ತಿಗೆ ಸೇರಿಸಿ; ಸೌಜನ್ಯ, ಪದ್ಮಲತಾ ಸೇರಿ ಹಲವು ಕುಟುಂಬಗಳ ಪಟ್ಟು
ಸೌಜನ್ಯ, ಪದ್ಮಲತಾ, ನಾರಾಯಣ ಸೇರಿದಂತೆ ಇತರೆ ಕುಟುಂಬದವರು ನ್ಯಾಯಕ್ಕಾಗಿ ಕಾದು ಕುಳಿತಿದ್ದಾರೆ. ಎಸ್‌ಐಟಿ ತಂಡವು ನಮ್ಮ ಕುಟುಂಬದ ಮೃತರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.;
ದೇಶದ ಪ್ರಮುಖ ಯಾತ್ರಾ ಸ್ಥಳವಾಗಿರುವ ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿರುವ ಗಂಭೀರ ಆರೋಪ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
'20 ವರ್ಷದಲ್ಲಿ ನೂರಾರು ಶವ ಹೂತು ಹಾಕಿದ್ದೇನೆ' ಎಂಬ ಧರ್ಮಸ್ಥಳದಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರ ಅಚ್ಚರಿಯ ಹೇಳಿಕೆಯಿಂದ ಈಗಾಗಲೇ ತೆರೆಮರೆಗೆ ಸರಿದಿರುವ ಹಲವು ದುರಂತಗಳು ಮುನ್ನೆಲೆಗೆ ಬಂದು ಚರ್ಚೆಗೆ ವೇದಿಕೆ ಸೃಷ್ಟಿಯಾಗಿದೆ. ಈ ಮಧ್ಯೆ, ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಆದರೆ, ಎಸ್‌ಐಟಿ ಕೇವಲ ಹೂತು ಹಾಕಿದ್ದಾರೆ ಎನ್ನಲಾದ ಶವಗಳ ಪ್ರಕರಣವನ್ನಷ್ಟೇ ತನಿಖೆ ನಡೆಸಲಿದೆ ಎಂದು ಹೇಳಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ.
ಸೌಜನ್ಯ, ಪದ್ಮಲತಾ, ನಾರಾಯಣ ಪ್ರಕರಣ ಸೇರಿದಂತೆ ಧರ್ಮಸ್ಥಳದಲ್ಲಿ ಕೊಲೆ, ಅತ್ಯಾಚಾರ, ಕಾಣೆಯಾದ ಎಲ್ಲಾ ಪ್ರಕರಣಗಳನನೂ ಎಸ್‌ಐಟಿ ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ಸಂತ್ರಸ್ತರ ಕುಟುಂಬದವರು ಹಾಗೂ ಹೋರಾಟಗಾರರು ಆಗ್ರಹಿಸಿದ್ದಾರೆ.
ಸೌಜನ್ಯ ಅವರ ಪೋಷಕರು
ಒಂದೊಂದು ಕೊಲೆಗೂ ಇದೆ ಕಥೆ
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹತ್ಯೆ, ಅತ್ಯಾಚಾರ ಪ್ರಕರಣಗಳಲ್ಲಿ ಪ್ರತಿ ಸಾವು ಕೂಡ ಒಂದೊಂದು ಕಥೆ ಹೇಳುತ್ತಿವೆ. ಮೃತರ ಕುಟುಂಬಗಳು ಇಂದಿಗೂ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದ, ಚಾತಕ ಪಕ್ಷಿಗಳಂತೆ ಕಾಯುತ್ತಿವೆ.
ಶವಗಳನ್ನು ಹೂತು ಹಾಕಿದ ಪ್ರಕರಣದ ಗಂಭೀರತೆ ಅರಿತ ರಾಜ್ಯ ಸರ್ಕಾರವು ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಆದರೆ, ಈ ತಂಡವು ಕೇವಲ ಶವಗಳನ್ನು ಹೂತು ಹಾಕಿದ ಪ್ರಕರಣಗಳನ್ನಷ್ಟೇ ತನಿಖೆ ಮಾಡಲು ಮುಂದಾಗಿರುವುದು ಸಂತ್ರಸ್ತರ ಕುಟುಂಬಗಳಲ್ಲಿ ಬೇಸರ ತರಿಸಿದೆ.
ಧರ್ಮಸ್ಥಳದ ಸಂತ್ರಸ್ತರ ಮನೆಗಳಿಗೆ ʼದ ಫೆಡರಲ್ ಕರ್ನಾಟಕʼ ಭೇಟಿ ನೀಡಿ ಅವರ ಕಣ್ಣೀರಿಗೆ ಸಾಕ್ಷಿಯಾಯಿತು. ತಮ್ಮವರ ಸಾವಿಗೆ ನ್ಯಾಯದ ನಿರೀಕ್ಷೆಯಲ್ಲೇ ದಶಕಗಳಿಂದ ಜೀವ ಸವೆಸುತ್ತಿರುವ ಪೋಷಕರು, ಎಸ್‌ಐಟಿ ತನಿಖೆಯನ್ನು ತಮ್ಮವರ ಪ್ರಕರಣಗಳನ್ನು ಸೇರಿಸಬೇಕು ಎಂದು ಅಂಗಲಾಚಿದರು.
ಧರ್ಮಸ್ಥಳದಲ್ಲಿ ಪತ್ತೆಯಾದ ಶವಗಳ ಕುರಿತು ನೀಡಿದ ದೂರುಗಳಿಗೆ ಲೆಕ್ಕವಿಲ್ಲ. ಹೋರಾಟ ಧಣಿವರಿಯಲಿಲ್ಲ. ದಶಕಗಳೇ ಕಳೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ದೊಡ್ಡವರ ಪ್ರಭಾವದಿಂದಾಗಿ ತಮ್ಮವರು ಉಸಿರು ಚೆಲ್ಲಿದಂತೆ, ಪ್ರಕರಣಗಳೂ ಜೀವ ಕಳೆದುಕೊಳ್ಳುತ್ತಿವೆ. ಸತ್ತವರಂತೂ ವಾಪಸ್ ಬರುವುದಿಲ್ಲ. ಅವರ ಸಾವಿಗಾದರೂ ನ್ಯಾಯ ಸಿಗಬೇಕು ಎಂಬುದು ಸಂತ್ರಸ್ತ ಅಳಲು.
ಧರ್ಮಸ್ಥಳದ ಮನೆಯ ಸಮೀಪವಿರುವ ಸೌಜನ್ಯಳ ಸಮಾಧಿ ಸ್ಥಳ
ನ್ಯಾಯ ಸಿಕ್ಕರೆ ಗುಡಿ ನಿರ್ಮಿಸುತ್ತೇವೆ
ಸೌಜನ್ಯ ಮನೆಗೆ ಭೇಟಿ ನೀಡಿದ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ ಸೌಜನ್ಯ ಅವರ ತಾಯಿ ಕುಸುಮಾವತಿ, "2012 ರ ಅಕ್ಟೋಬರ್ 9 ರಂದು ಮಗಳನ್ನು ಕೊನೆಯ ಬಾರಿಗೆ ಜೀವಂತವಾಗಿ ನೋಡಿದೆವು. ಅಂದಿನಿಂದ ಸಾಕಷ್ಟು ಕಾನೂನು ಹೋರಾಟ, ಆಂದೋಲನ ನಡೆಸಿದರೂ ನ್ಯಾಯ ಮಾತ್ರ ಸಿಗಲಿಲ್ಲ. ಈಗ ಶವಗಳನ್ನು ಹೂತು ಹಾಕಿರುವ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆಯಾಗಿದೆ. ವಿಶೇಷ ತನಿಖಾ ತಂಡ ತಮ್ಮ ಮಗಳ ಸಾವಿನ ತನಿಖೆಯನ್ನೂ ನಡೆಸಿ, ನ್ಯಾಯ ಒದಗಿಬೇಕು. ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಶಿಕ್ಷೆ ನೀಡಬೇಕು. ಅದಕ್ಕಾಗಿಯೇ ನಾವು ಕಾಯುತ್ತಿದ್ದೇವೆ. ಮಗಳ ಸಾವಿಗೆ ನ್ಯಾಯ ದೊರೆತರೆ ಆಕೆಯ ಅಂತ್ಯಸಂಸ್ಕಾರದ ಸ್ಥಳದಲ್ಲಿ ಗುಡಿ ನಿರ್ಮಿಸುತ್ತೇವೆ ಎಂದು ಹೇಳಿ ಭಾವುಕರಾದರು.
ನನ್ನ ಐದು ಮಕ್ಕಳಲ್ಲಿ ಎರಡನೆಯವಳು ಸೌಜನ್ಯ. ಅಂದು ಕಾಲೇಜಿಗೆ ತಡವಾಗುತ್ತಿದ್ದರಿಂದ ಏನನ್ನೂ ತಿನ್ನದೆ ಬೇಗನೆ ಹೊರಟಳು. ಅದು ಹೊಸ-ಅಕ್ಕಿ ಹಬ್ಬದ ದಿನವಾಗಿತ್ತು. ಹೊಸ ಅಕ್ಕಿ, ತೆಂಗಿನ ಹಾಲು ಮತ್ತು ಬೆಲ್ಲದೊಂದಿಗೆ ಖಾದ್ಯ ತಯಾರಿಸುವ ಮೂಲಕ ಮೊದಲ ಸುಗ್ಗಿಯನ್ನು ಆಚರಿಸುವುದು ಇಲ್ಲಿನ ವಾಡಿಕೆ. ಅಂದು ಕಾಫಿ ಕುಡಿದು ಮನೆಯಿಂದ ಹೊರ ಹೋದ ಮಗಳು ಮನೆಗೆ ಬಂದಿದ್ದು ಶವವಾಗಿ ಎಂದು ಹೇಳುತ್ತಾ ಕಣ್ಣೀರು ಸುರಿಸಿದರು.
2012 ರ ಅಕ್ಟೋಬರ್ 9 ರಂದು ಸೌಜನ್ಯ ಮನೆಯಿಂದ ಕಾಲೇಜಿಗೆ ಹೋದವಳು ಮತ್ತೆ ವಾಪಸ್ ಬಂದಿರಲಿಲ್ಲ. ಮರುದಿನ ಅಂದರೆ ಅ.10 ರಂದು ಆಕೆಯ ಮೃತದೇಹವು ಮನ್ನ ಸಂಕದಲ್ಲಿ (ಕಿರು ಗಾಲುವೆ) ಪತ್ತೆಯಾಗಿತ್ತು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು.
ಹತ್ಯೆಯಾದ ಪದ್ಮಲತಾ ಹಾಗೂ ಆಕೆಯ ಮನೆ
39 ವರ್ಷದಿಂದ ನ್ಯಾಯ ಸಿಗಲಿಲ್ಲ
ಉಜಿರೆಯ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಪದ್ಮಲತಾಳನ್ನು 1986 ರಲ್ಲಿ ದುಷ್ಕರ್ಮಿಗಳು ಅಪಹರಿಸಿದ್ದರು. 56 ದಿನಗಳ ಬಳಿಕ ನಿಡ್ಲೆ ಹೊಳೆಯಲ್ಲಿ ಆಕೆಯ ಬೆತ್ತಲೆ ಶವ ಪತ್ತೆಯಾಗಿತ್ತು. ನಾಪತ್ತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ನಂತರ ಅಸ್ವಾಭಾವಿಕ ಸಾವಿನ ಆರೋಪದಡಿ(ಯುಡಿಆರ್) ಎಫ್‌ಐಆರ್ ದಾಖಲಿಸಿದ್ದರು. ಆದರೆ, ಘಟನೆ ನಡೆದು 39 ವರ್ಷಗಳಾದರೂ ಈವರೆಗೆ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಈಗಲಾದರೂ ಎಸ್‌ಐಟಿ ಮೂಲಕ ಹಳೆಯ ಪ್ರಕರಣವನ್ನು ಭೇದಿಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ಮೃತ ಪದ್ಮಲತಾ ಅವರ ಸಹೋದರಿ ಚಂದ್ರಾವತಿ ʼದ ಫೆಡರೆಲ್ ಕರ್ನಾಟಕʼದ ಬಳಿ ಅಳಲು ತೋಡಿಕೊಂಡರು.
ಸಹೋದರಿಯ ಸಾವಿಗೆ ನ್ಯಾಯ ಸಿಗಲಿದೆಯೇ ಎಂಬ ಕಾಯುತ್ತಾ ಕುಳಿತಿದ್ದೇವೆ. ರಾಜ್ಯ ಸರ್ಕಾರ ಇದೀಗ ಎಸ್‌ಐಟಿ ರಚನೆ ಮಾಡಿದೆ. ಶವಗಳ ಹೂತಿರುವ ಪ್ರಕರಣದ ಜತೆಗೆ ನಮ್ಮ ಪ್ರಕರಣದ ತನಿಖೆಯನ್ನೂ ನಡೆಸಬೇಕು. ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಮಾವುತ ನಾರಾಯಣ ಅವರ ಮನೆಯನ್ನು ಕೆಡವಿ ನಿರ್ಮಿಸಲಾಗಿದೆ ಎನ್ನಲಾಗಿರುವ ಹೋಟೆಲ್
ಭೂಮಿ ಕೊಡಲು ನಿರಾಕರಿಸಿದಕ್ಕೆ ಜೋಡಿ ಹತ್ಯೆ
ಧರ್ಮಸ್ಥಳದಲ್ಲಿ ಮಾವುತರಾಗಿ ಕೆಲಸ ಮಾಡುತ್ತಿದ್ದ ನಾರಾಯಣ ಸಪಲ್ಯ(62) ಮತ್ತು ಅವರ ಸಹೋದರಿ ಯಮುನಾ (45) ಪೂರ್ಜೆಬೈಲು ಜೋಡಿ ಕೊಲೆ ಪ್ರಕರಣವೂ ಕೂಡ ಹಳೆಯ ಪ್ರಕರಣಗಳಂತೆ ತನಿಖೆಯ ದಿಕ್ಕು ಕಾಣದೇ ಕೊಳೆಯುತ್ತಿದೆ.
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿದ ನಾರಾಯಣ ಪುತ್ರ ಗಣೇಶ್, 400 ವರ್ಷಗಳಷ್ಟು ಹಳೆಯದಾದ ಮನೆಯಿದ್ದ ಭೂಮಿ ಬಿಟ್ಟುಕೊಡಲು ನಿರಾಕರಿಸಿದ್ದರಿಂದ ತಮ್ಮ ತಂದೆ ಮತ್ತು ಚಿಕ್ಕಮ್ಮನನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದರು. ಪೊಲೀಸರು ಸೂಕ್ತ ತನಿಖೆ ನಡೆಸಿದ್ದರೆ ಇಂದು ಸೌಜನ್ಯ ಜೀವಂತವಾಗಿರುತ್ತಿದ್ದಳು. ನಮ್ಮ ಪ್ರಕರಣಗಳನ್ನೂ ಎಸ್‌ಐಟಿ ತನಿಖೆಗೆ ವಹಿಸಿದರೆ ಆರೋಪಿಗಳನ್ನು ಪತ್ತೆ ಮಾಡಬಹುದು. ಈಗಿನ ಪರಿಸ್ಥಿತಿ ನೋಡಿದರೆ ನಮಗೆ ಎಲ್ಲಿಂದಲೂ ನ್ಯಾಯ ಸಿಗುವುದಿಲ್ಲ ಎಂಬುದು ಗೊತ್ತಿದೆ ಎಂದು ಹತಾಶೆಯಿಂದ ನುಡಿದರು.
2012 ಸೆ.20 ರಂದು ರಾತ್ರಿ 65 ವರ್ಷದ ಮಾವುತ ನಾರಾಯಣ್ ಮತ್ತು 45 ವರ್ಷದ ಸೋದರಿ ಯಮುನಾ ಅವರನ್ನು ಧರ್ಮಸ್ಥಳ ಗ್ರಾಮದ ಅವರ ಮನೆಯಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಅದೂ ಕೂಡ ಧರ್ಮಸ್ಥಳದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯೇ ಘಟನೆ ನಡೆದಿತ್ತು. ತಮ್ಮ ಮನೆ ಬಿಡಲು ನಿರಾಕರಿಸಿದ್ದರಿಂದಲೇ ಈ ಜೋಡಿ ಹತ್ಯೆಯಾಗಿತ್ತು.
ದೂರುದಾರೆ ಸುಜಾತಾ ಭಟ್
ಮಗಳ ಅಂತ್ಯಕ್ರಿಯೆಗಾಗಿ ಕಾಯುತ್ತಿರುವ ತಾಯಿ
ಸಿಬಿಐನಲ್ಲಿ ಸ್ಟೇನೋಗ್ರಾಫರ್ ಆಗಿದ್ದ ಸುಜಾತಾಭಟ್ ಅವರ ಪುತ್ರಿ ಅನನ್ಯಾ ಭಟ್ ಧರ್ಮಸ್ಥಳಕ್ಕೆ ಹೋದವರು ವಾಪಸ್ ಬರಲಿಲ್ಲ. ಮಗಳು ಏನಾದರೂ ಎಂಬುದು ಇಂದಿಗೂ ನಿಗೂಢವಾಗಿದೆ. ಮಣಿಪಾಲ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಅನನ್ಯ (20) ನಾಪತ್ತೆ ಬಗ್ಗೆ ದೂರು ದಾಖಲಿಸಿದರೂ ಧರ್ಮಸ್ಥಳ ಪೊಲೀಸರು ಉಡಾಫೆ ಉತ್ತರ ನೀಡಿ ಕಳುಹಿಸಿದರು.
ಮೂವರು ಅಪರಿಚಿತರು ತಮ್ಮನ್ನು ಸಂಪರ್ಕಿಸಿ ಅನನ್ಯ ಎಲ್ಲಿದ್ದಾಳೆಂದು ತಿಳಿದಿದೆ ಎಂದು ಕರೆದೊಯ್ದರು. ಕೊಠಡಿಯೊಂದರಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿದರು. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೂರ್ಛೆ ಹೋಗಿದ್ದೆ. ಮೂರು ತಿಂಗಳು ಕೋಮಾದಲ್ಲಿದ್ದೆ. ನಂತರ ಮನೆಗೆ ಮರಳಿದಾಗ ಇಡೀ ಮನೆಯೇ ಪಾಳು ಬಿದ್ದಿತ್ತು ಎಂದು ಮಾಸದ ಘಟನೆಗಳನ್ನು ಮೆಲುಕು ಹಾಕಿದರು.
ಈಗಲೂ ಮಗಳ ದೇಹ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದೇನೆ. ಆದರೂ ಸಿಕ್ಕಿಲ್ಲ. ಆಕೆಯ ಮೃತ ದೇಹ ಸಿಕ್ಕತೆ ಅಂತ್ಯ ಸಂಸ್ಕಾರ ಮಾಡಲು ಕಾಯುತ್ತಿದ್ದೇನೆ. ಎಸ್‌ಐಟಿ ತನಿಖೆಯಿಂದ ಮಗಳ ಅಸ್ಥಿಪಂಜರ ಸಿಕ್ಕರೂ ಅಂತ್ಯಕ್ರಿಯೆ ಮಾಡಲು ಕಾಯುತ್ತಿದ್ದೇನೆ. ಹಾಗಾಗಿ ಅನನ್ಯ ಪ್ರಕರಣವನ್ನು ಎಸ್‌ಐಟಿ ವ್ಯಾಪ್ತಿಗೆ ಸೇರಿಸಬೇಕು ಎಂದು ದುಃಖ ತೋಡಿಕೊಂಡರು.
2004 ರಲ್ಲಿ ಉಡುಪಿಯ ಮಣಿಪಾಲ ಆಸ್ಪತ್ರೆ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯ ಭಟ್ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದರು. ಧರ್ಮಸ್ಥಳ ಸಮೀಪದ ಗ್ರಾಮದವರಾದ ಸ್ನೇಹಿತರು ಅವರವರ ಮನೆಗಳಿಗೆ ಬಟ್ಟೆ ತರಲು ಹೋಗುವ ಮುನ್ನ ಅನನ್ಯಾಳನ್ನು ದೇವಸ್ಥಾನದ ಸಮೀಪ ಬಿಟ್ಟು ಹೋಗಿದ್ದರು. ಸ್ನೇಹಿತರು ಬಂದು ನೋಡುವಷ್ಟರಲ್ಲಿ ಆಕೆ ಅಲ್ಲಿರಲಿಲ್ಲ. ಎಲ್ಲೆಡೆ ಹುಡುಕಿದರೂ ಆಕೆಯ ಸುಳಿವು ಸಿಗಲಿಲ್ಲ.
ಹಳೇ ಪ್ರಕರಣಗಳನ್ನೂ ತನಿಖೆ ಮಾಡಿ
ಧರ್ಮಸ್ಥಳದಲ್ಲಿ ಕಳೆದ ಎರಡು ದಶಕದಲ್ಲಿ ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಹಲವರ ಮೃತದೇಹಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರವು ಹೂತಿರುವ ಶವಗಳ ಪ್ರಕರಣಗಳಿಗೆ ಮಾತ್ರವೇ ತನಿಖೆ ನಡೆಸಲು ಹೊರಟಿರುವುದು ಸಲ್ಲದು. ಇದರಿಂದ ಪೂರ್ಣ ಪ್ರಮಾಣದ ನ್ಯಾಯ ಮರೀಚಿಕೆಯಾಗಲಿದೆ. ಎಸ್‌ಐಟಿ ತನಿಖೆ ವ್ಯಾಪ್ತಿಗೆ ಸೌಜನ್ಯ, ಪದ್ಮಲತಾ, ನಾರಾಯಣ ಹಾಗೂ ಅನನ್ಯಾ ಭಟ್ ಪ್ರಕರಣವನ್ನೂ ಸೇರಿಸಬೇಕು ಎಂದು ಸೌಜನ್ಯ ಪರ ಹೋರಾಟ ಸಮಿತಿ ಮುಖಂಡ ಟಿ. ಜಯಂತ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಧರ್ಮಸ್ಥಳದ ಕಾಡುಗಳಲ್ಲಿನ ಒಂದೊಂದೇ ರಹಸ್ಯಗಳು ತೆರೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಂತ್ರಸ್ತರ ಕಂಬನಿ ಒರೆಸಲು ಪ್ರಕರಣಗಳನ್ನು ವಿಶೇಷ ತನಿಖಾ ತಂಡದ ತನಿಖೆಗೆ ವಹಿಸಬೇಕು. ಆದರೆ, ಎಸ್‌ಐಟಿ ಎಷ್ಟರ ಮಟ್ಟಿಗೆ ಇವರ ಕೂಗಿಗೆ ಕಿವಿಯಾಗಲಿದೆಯೇ ಎಂಬುದೇ ಯಕ್ಷಪ್ರಶ್ನೆಯಾಗಿದೆ.