Caste Census | ಮುಂದಿನ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಚರ್ಚೆಗೆ ನಿರ್ಣಯ

ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿಯು ಖಜಾನೆಯಲ್ಲಿದ್ದು, ಮುಚ್ಚಿದ ಲಕೋಟೆಯಲ್ಲಿದೆ. ಸಂಪುಟ ಸಭೆಯಲ್ಲೇ ಮುಚ್ಚಿದ ಲಕೋಟೆ ತೆರೆಯಲು ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.;

Update: 2025-01-16 13:09 GMT
ಸಿಎಂ ಸಿದ್ದರಾಮಯ್ಯ

ಜಾತಿವಾರು ಜನ ಗಣತಿ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯ ಮುಂದಿರಿಸುವ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕುರಿತು ಚರ್ಚಿಸಲು ತೀರ್ಮಾನಿಸಲಾಗಿದೆ.

ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ್ದ ವರದಿಯು ಸದ್ಯ ಖಜಾನೆಯಲ್ಲಿ ಮುಚ್ಚಿದ ಲಕೋಟೆ ಸ್ಥಿತಿಯಲ್ಲಿದೆ. ಮುಂದಿನ ವಾರ ನಡೆಯುವ ಸಂಪುಟ ಸಭೆಯಲ್ಲಿ ಮುಚ್ಚಿದ ಲಕೋಟೆ ತೆರೆಯಲು ನಿರ್ಧರಿಸಿದೆ. 

ಇಂದಿನ ಸಚಿವ ಸಂಪುಟದಲ್ಲೇ ಜಾತಿ ಗಣತಿ ವರದಿ ಮಂಡನೆಯಾಗುವ ಕುರಿತು ಚರ್ಚೆಗಳು ನಡೆದಿದ್ದವು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿಯನ್ನು ಈ ವಾರದ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವುದಿಲ್ಲ. ಮುಂದಿನ ಸಚಿವ ಸಂಪುಟದ ಮುಂದೆ ಇಡಲಾಗುವುದು ಎಂದು ಬುಧವಾರ ಸ್ಪಷ್ಟಪಡಿಸಿದ್ದರು.

ಹಾಗಾಗಿ ಹಲವಾರು ತಿಂಗಳುಗಳಿಂದ ಪ್ರಸ್ತಾಪಕ್ಕೆ ಬರುತ್ತಲೇ ಇರುವ ವಿವಾದಿತ ಜಾತಿ ಗಣತಿ ಮಂಡನೆ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಮಂಡನೆ ಮಾಡಲಾಗುವುದು ಎಂದು ಹೇಳಿಕೆ ನೀಡುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ʼಮುಂದಿನ ಸಂಪುಟ ಸಭೆʼಯಲ್ಲಿ ಜಾತಿ ಗಣತಿ ವರದಿ ಮಂಡನೆ ಸಂಬಂಧ ವಿಷಯ ಮಂಡಿಸುವುದಾಗಿ ಹೇಳಿದ್ದಾರೆ.  ಇದರಿಂದ  ಜಾತಿ ಗಣತಿ ವರದಿ ಸಂಬಂಧ ಮುಂದಿನ ವಾರ ಅಂದರೆ ಜ. 23 ರಂದು ವಿಷಯ ಮಂಡನೆ ಮಾಡುವುದು ಬಹುತೇಕ ಖಚಿತವಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರು, ಜಾತಿ ಗಣತಿ ವಿಷಯ ಮುಂದೂಡಿದ ಬಗ್ಗೆ ಅನ್ಯಾಯ ಕಾರಣಗಳಿಲ್ಲ. ಸಾಮಾಜಿಕ ಹಾಗೂ ಆಡಳಿತಾತ್ಮಕ ಕಾರಣವಿದೆ. ಹಾಗಾಗಿ ಇಂದಿನ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದನ್ನು ಮುಂದೂಡಬೇಕಾಯಿತು. ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ಮುಂದಿನ ಸಂಪುಟ ಸಭೆಯಲ್ಲಿ ವರದಿ ತೆರೆದು, ಚರ್ಚಿಸಲಾಗುವುದು. ಸಂಪುಟ ಸಭೆಗೂ ಎರಡು ಗಂಟೆ ಮುಂಚಿತವಾಗಿ ವರದಿ ತೆರೆಯಲಾಗುವುದು ಎಂದು ಹೇಳಿದರು. 

ಎಚ್‌ಎಂಟಿ: ಮಧ್ಯಂತರ ಅರ್ಜಿ ಹಿಂಪಡೆಯಲು ನಿರ್ಧಾರ

ಎಚ್ಎಂಟಿ ಅಧೀನದಲ್ಲಿರುವ ಅರಣ್ಯ ಭೂಮಿ ಹಿಂಪಡೆಯುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಎಚ್‌ಎಂಟಿ ಕಂಪೆನಿಗೆ ನೀಡಿದ್ದ ಅರಣ್ಯ ಭೂಮಿಯಲ್ಲಿ 160 ಎಕರೆಯನ್ನು 375ಕೋಟಿ ರೂ.ಗೆ ಮಾರಿಕೊಂಡಿದೆ. ಅರಣ್ಯ ಇಲಾಖೆ, ಅರಣ್ಯ ಸಚಿವರಿಂದ ಯಾವುದೇ ರೀತಿಯ ಅನುಮತಿ ಪಡೆಯದೇ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ಜಮೀನು ಮಾರಾಟ ಮಾಡಲಾಗಿದೆ. ಈಗ ಉಳಿದಿರುವ 180ಎಕರೆ ಅರಣ್ಯ ಭೂಮಿಯನ್ನೂ ಮಾರಾಟ ಮಾಡಲು ಎಚ್‌ಎಂಟಿ ಹೊರಟಿದೆ. 

ಎಚ್‌ಎಂಟಿಗೆ ನೀಡಿದ್ದ ಅರಣ್ಯ ಭೂಮಿ ಡಿನೋಟಿಫೈ ಆಗಿಲ್ಲ. ಅರಣ್ಯ ಭೂಮಿ ಡಿನೋಟಿಫೈ ಮಾಡುವಂತೆ ಸುಪ್ರಿಂಕೋರ್ಟ್ ಗೆ ರಾಜ್ಯ ಸರ್ಕಾರ ಈ ಹಿಂದೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ 2015ರಲ್ಲಿ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಮಿತಿ ಕೂಡ ರಚಿಸಲಾಗಿತ್ತು. ಅರಣ್ಯ ಭೂಮಿ ಡಿನೋಟಿಫೈ ಮಾಡುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ ಎಂದು ಸಮಿತಿ ಹೇಳಿತ್ತು. ಅಲ್ಲದೇ ಎಚ್ಎಂಟಿಗೆ ಅರಣ್ಯ ಭೂಮಿ ನೀಡಿದ್ದ ಉದ್ದೇಶವೂ ಈಡೇರಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್ ನಲ್ಲಿರುವ ಮಧ್ಯಂತರ ಅರ್ಜಿ ಹಿಂಪಡೆಯಲು ಸಂಪುಟದಲ್ಲಿ ನಿರ್ಣಯಿಸಲಾಗಿದೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ. 

ಸಂಪುಟ ಸಭೆಯ ಇತರೆ ನಿರ್ಣಯಗಳು

ಮಂಡ್ಯದಲ್ಲಿ ಕೃಷಿ ತೋಟಗಾರಿಕೆಯ ಇಂಟಿಗ್ರೇಟೆಡ್ ವಿಶ್ವವಿದ್ಯಾಲಯ ಸ್ಥಾಪನೆ.

5ನೇ ರಾಜ್ಯ ಹಣಕಾಸು ಆಯೋಗದ ಅವಧಿ ವಿಸ್ತರಣೆ.

ರೇಷನ್ ಕಾರ್ಡ್ ಇರುವವರಿಗೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಎಂಆರ್‌ಐ ಸ್ಕ್ಯಾನ್, ಸಿಟಿ ಸ್ಕ್ಯಾನ್ ಸೇವೆ.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಅಸ್ತು. ಇದಕ್ಕಾಗಿ 413 ಕೋಟಿ ರೂ. ಗಳಿಗೆ ಅನುಮೋದನೆ. ಮಹಾನಗರ ಪಾಲಿಕೆಯ ಒಟ್ಟು 13 ಹೆರಿಗೆ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿಸಲು ನಿರ್ಣಯ.

10 ಮಹಾನಗರ ಪಾಲಿಕೆ, 24 ನಗರಪಾಲಿಕೆಗಳಲ್ಲಿ ಒಂದು ಚಿತಾಗಾರಕ್ಕೆ 4 ಕೋಟಿ ರೂ. ವೆಚ್ಚದಂತೆ 126 ಕೋಟಿ ರೂ ವೆಚ್ಚದಲ್ಲಿ ಚಿತಾಗಾರ ನಿರ್ಮಾಣ.

10 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ.

ಡಿಜಿ ಕಂದಾಯ ಯೋಜನೆಯ ಅನುದಾನದಿಂದ ಡಿಜಿ ಸೇವೆ ನೀಡಲು ಕ್ರೋಮ್ ಬುಕ್ ಅಥವಾ ಲ್ಯಾಪ್‌ ಟಾಪ್ ಖರೀದಿಗೆ 20 ಕೋಟಿ ರೂ ಅನುಮೋದನೆ.

ಆರ್ಥಿಕ ಇಲಾಖೆ ಅಧಿಕಾರಿಗಳು, ನೌಕರರ ವರ್ಗಾವಣೆಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಅನುಮೋದನೆ.

13.30 ಕೋಟಿ ರೂ. ವೆಚ್ಚದಲ್ಲಿ ಆಶಾಕಿರಣ ಯೋಜನೆ ಜಾರಿಗೆ ಅಸ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 450 ಬೆಡ್‌ಗಳ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ.

ಅಸ್ತಿತ್ವದಲ್ಲಿರುವ ಅಂಗ ಕಸಿ ಜೀವ ಸಾರ್ಥಕತೆ ಯೋಜನೆಗೆ ಶ್ವಾಸಕೋಶ ಹೃದಯ ಮತ್ತು ಮೂಳೆ ಮಜ್ಜೆ ಕಸಿಯನ್ನು ಸೇರಿಸಿ ಯೋಜನೆ ವಿಸ್ತರಣೆಗೆ ಅನುಮೋದನೆ.

ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ 8 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ವಿಮೆ ಸೌಲಭ್ಯ ಒದಗಿಸಲು ಅನುಮೋದನೆ.

Tags:    

Similar News