ಇದು ಎಕ್ಸ್‌ಕ್ಲೂಸಿವ್‌ ಪೆನ್‌ ಸ್ಟೋರ್ | ಸರ್‌ಎಂವಿಯಿಂದ ನಾದಬ್ರಹ್ಮರವರೆಗೆ ಇದರ ಗ್ರಾಹಕರು!

ಪೆನ್‌ ಎಂಬುದೇ ಅವಸಾನದ ಹಾದಿಯಲ್ಲಿರುವಾಗಲೂ ಕೂಡ ಸಂಪೂರ್ಣ ಪೆನ್‌ಗಳದ್ದೇ ಅಂಗಡಿಯನ್ನು ಎಂಟು ದಶಕಗಳಿಂದ ನಡೆಸಿಕೊಂಡು ಬರುವುದು ಸಾಮಾನ್ಯದ ಮಾತಲ್ಲ. ಅಂತಹ ಅಸಾಮಾನ್ಯ ಮತ್ತು ಅಷ್ಟೇ ಅಪರೂಪದ ಪೆನ್‌ ಶಾಪ್‌ ನಮ್ಮ ಬೆಂಗಳೂರಿನಲ್ಲಿದೆ.

Update: 2024-05-17 01:40 GMT
ಆರ್ ವಿ ನಾದಂ & ಕೋ ಪೆನ್‌ ಸ್ಟೋರ್‌ ಮಾಲೀಕ ಸುರೇಶ್ ಕುಮಾರ್
Click the Play button to listen to article

ಮೊಬೈಲ್‌, ಕಂಪ್ಯೂಟರ್‌ ಮತ್ತು ಚಾಟ್‌ ಜಿಪಿಟಿಯಂತಹ ಎಐಗಳ ಕಾಲದಲ್ಲಿ ಕೈಬರಹ ಮತ್ತು ಪೆನ್‌ ಎನ್ನುವುದೇ ಐತಿಹಾಸಿಕ ಸ್ಮಾರಕ ಎಂಬಂತಾಗಿದೆ. ಪೆನ್ನು ಬಳಸಿ ಬರೆಯುವುದು ಎಂಬುದು ಕೇವಲ ಶಾಲಾ-ಕಾಲೇಜುಗಳಿಗೆ ಮಾತ್ರ ಸೀಮಿತವಾಗಿದ್ದು, ಅಲ್ಲಿಯೂ ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ಸ್ಮಾರ್ಟ್‌ ತರಗತಿಗಳು ಜನಪ್ರಿಯವಾಗುತ್ತಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ತರಗತಿಗಳಿಂದಲೂ ಪೆನ್‌ ತೆರೆಮರೆಗೆ ಸರಿಯದೇ ಇರದು.

ಹೀಗೆ ಪೆನ್‌ ಎಂಬುದೇ ಅವಸಾನದ ಹಾದಿಯಲ್ಲಿರುವಾಗಲೂ ಕೂಡ ಸಂಪೂರ್ಣ ಪೆನ್‌ಗಳದ್ದೇ ಅಂಗಡಿಯನ್ನು ಎಂಟು ದಶಕಗಳಿಂದ ನಡೆಸಿಕೊಂಡು ಬರುವುದು ಸಾಮಾನ್ಯದ ಮಾತಲ್ಲ. ಅಂತಹ ಅಸಾಮಾನ್ಯ ಮತ್ತು ಅಷ್ಟೇ ಅಪರೂಪದ ಪೆನ್‌ ಶಾಪ್‌ ನಮ್ಮ ಬೆಂಗಳೂರಿನಲ್ಲಿದೆ. ಅಪರೂಪದ ಮೇಧಾವಿ ಸರ್‌ ಎಂ ವಿಶ್ವೇಶ್ವರಯ್ಯ ಅವರಿಂದ ಹಿಡಿದು ನಾದಬ್ರಹ್ಮ ಹಂಸಲೇಖಾ ಅವರ ವರೆಗೆ ನಾಡು ಕಂಡ ಜ್ಞಾನಿಗಳು, ಕವಿಗಳು, ಮೇಧಾವಿಗಳು ಈ ಪೆನ್‌ ಶಾಪ್‌ನ ಗ್ರಾಹಕರು! ಅಲ್ಲಿ 50 ರೂಪಾಯಿನಿಂದ 50 ಸಾವಿರ ರೂಪಾಯಿವರೆಗಿನ ದೇಶ- ವಿದೇಶಗಳ ಬ್ರಾಂಡೆಡ್‌ ಪೆನ್ನುಗಳು ದೊರೆಯುತ್ತವೆ. 

ಬೆಂಗಳೂರಿನ ಚಿಕ್ಕಪೇಟೆ ಎಂದರೆ ಸಾಮಾನ್ಯವಾಗಿ ಬಟ್ಟೆ ಅಂಗಡಿಗಳ ಸಂತೆ ಎಂಬುದು ಗೊತ್ತಿರುವ ವಿಷಯ. ಆದರೆ, ಅಂತಹ ಸಂತೆಯ ನಡುವೆ ಒಂದು ಅಪರೂಪದ ಪೆನ್‌ ಅಂಗಡಿ ಕಳೆದ ಎಂಭತ್ತು ವರ್ಷಗಳಿಂದ ಪೆನ್ನುಪ್ರಿಯರ ನೆಚ್ಚಿನ ತಾಣವಾಗಿ ಬೆಳೆದು ಬಂದಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಬಳೇಪೇಟೆಯ ಗಲ್ಲಿಯೊಳಗೆ ನೀವು ಒಂದು ರೌಂಡ್‌ ಹಾಕಿದ್ರೆ ಸುಂದರವಾದ ಪೆನ್ನುಗಳಿಂದಲೇ ಕೂಡಿರುವ ಸಣ್ಣದಾದ ಅಂಗಡಿ ಕಾಣಸಿಗುತ್ತದೆ. ಈ ಅಂಗಡಿಯಲ್ಲಿ ನೂರೆಂಟು ಬಗೆಯ ಪೆನ್ನುಗಳು ನಿಮಗೆ ಸಿಗಲಿವೆ. 

ಅಂದ ಹಾಗೆ, ಈ ಅಂಗಡಿ ಇಂದು ನಿನ್ನೆಯದ್ದಲ್ಲ; 1940ರಲ್ಲಿ ಆರಂಭವಾಗಿ ಬರೋಬ್ಬರಿ 80 ವರ್ಷಗಳಿಂದ ಕೇವಲ ಪೆನ್‌ಗಳನ್ನು ಮಾತ್ರ ಮಾರಾಟ ಮಾಡುವ ಸ್ಟೋರ್. ಅಷ್ಟೇ ಅಲ್ಲ, ದುಬಾರಿ ಪೆನ್ನುಗಳ ರಿಪೇರಿಯನ್ನು ಈ ಸ್ಟೋರ್‌ನಲ್ಲಿ ಮಾಡಿಕೊಡುತ್ತಾರೆ.

ಈ ʼಆರ್ ವಿ ನಾದಂ & ಕೋʼ ಪೆನ್‌ ಸ್ಟೋರ್‌ ಅನ್ನು ಮೊದಲಿಗೆ ಪಾಲುದಾರಿಕೆಯಲ್ಲಿ ಆರಂಭಿಸಿದ್ದರೂ, ಬಳಿಕ ಆರ್ ವಿಶ್ವನಾಥ್ ಶೆಟ್ಟಿ ಅಥವಾ ಆರ್ ವಿ ನಾದಂ ಅವರು 1946 ರಲ್ಲಿ ಸ್ವತಃ ವ್ಯವಹಾರ ನಡೆಸಲು ಆರಂಭಿಸಿದರು. ಅವರ ಮಗ ವಿ ಸುರೇಶ್ ಕುಮಾರ್ ಅವರು ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದರು. 16 ವರ್ಷಗಳ ನಂತರ 1996 ರಲ್ಲಿ ಸಂಪೂರ್ಣ ವ್ಯವಹಾರವನ್ನು ಮಗ ಸುರೇಶ್ ವಹಿಸಿಕೊಂಡರು. ತಂದೆ ಆರಂಭಿಸಿದ ವ್ಯವಹಾರವನ್ನು ಮಗ ಸುರೇಶ್ ಕುಮಾರ್ ಇಂದಿಗೂ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಪೆನ್‌ ಸ್ಟೋರ್ ವಿಶೇಷವಾಗಿ ಇಂಕ್‌ ಪೆನ್ನುಗಳಿಗೆ ಫೇಮಸ್. ‌

ಈ ಇಂಕ್‌ ಪೆನ್‌ಗಳು ಹಾಗೂ ಸ್ಟೋರ್‌ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಸ್ಟೋರ್‌ ಮಾಲೀಕ ವಿ ಸುರೇಶ್ ಕುಮಾರ್ ಮಾತನಾಡಿ, ʻʻಆಗೆಲ್ಲ ಇಂಕ್‌ ಪೆನ್‌ಗಳ ಕಾಲ. ಇಂಕ್ ಪೆನ್ನುಗಳಿಗೆ ಬೆಲೆ ಇತ್ತು. ನಮ್ಮ ತಂದೆಯ ಕಾಲದಲ್ಲಿ ಇಂಕ್‌ ಪೆನ್‌ಗಳ ಫ್ಯಾಕ್ಟರಿಯೇ ಇತ್ತು. 40 ಜನ ಕೆಲಸ ಮಾಡುತ್ತಿದ್ದರು. ನಮ್ಮ ತಂದೆಯವರೇ ಇಂಕ್‌ಪೆನ್‌ಗಳನ್ನು ತಯಾರಿಸುತ್ತಿದ್ದರು. ತಾವೇ ಮಾರಾಟ, ಪ್ರಚಾರ ಮಾಡುತ್ತಿದ್ದರು. ಈಗಲೂ ಇಂಕ್‌ ಪೆನ್ನುಗಳಿಗೆ ಬೇಡಿಕೆ ಇದೆ. ಗ್ರಾಹಕರು ಆರ್ಡರ್‌ ನೀಡಿದರೆ ಅವರಿಗೆ ಬೇಕಾದ ವಿನ್ಯಾಸದ ಪೆನ್ ತಯಾರಿಸಿ ಕೊಡುತ್ತೇವೆ. ನಾವು ಯಾವುದೇ ರೀತಿಯ ಡುಬ್ಲಿಕೇಟ್‌ ಕಾಪಿಗಳನ್ನು ಬಳಸುವುದಿಲ್ಲ. ಕೇವಲ ಒರಿಜಿನಲ್‌ ಐಟಮ್ಸ್ ಮಾತ್ರ ಮಾಡುತ್ತೇವೆʼʼ ಎನ್ನುತ್ತಾರೆ.

ಸರ್ ಎಂ ವಿಶ್ವೇಶ್ವರಯ್ಯನವರೂ ಪೆನ್ನು ಖರೀದಿಸಿದ್ರು

"ನನ್ನ ಅಪ್ಪನ ಕಾಲದಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ಪೆನ್ನುಗಳನ್ನು ಖರೀದಿಸಲು ನಮ್ಮ ಅಂಗಡಿಗೆ‌ ಬರುತ್ತಿದ್ದರಂತೆ. ಅವರು ನಡೆದುಕೊಂಡೇ ಅಂಗಡಿಗೆ ಬಂದು ತಮಗೆ ಬೇಕಾದ ಪೆನ್ನು ಖರೀದಿಸುತ್ತಿದ್ದರು ಎಂದು ನನ್ನ ಅಪ್ಪ ಹೇಳುತ್ತಿದ್ದರು. ಇನ್ನು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖಾ ಅವರು ಈಗಲೂ ನಮ್ಮ ಸ್ಟೋರ್‌ಗೆ ಬಂದು ಕ್ವಾಲಿಟಿ ಪೆನ್ನುಗಳನ್ನು ಖರೀದಿಸುತ್ತಾರೆ. ಹಿಂದೆ, ಹಾಸ್ಯನಟ ನರಸಿಂಹರಾಜು, ದ್ವಾರಕೀಶ್, ಇತ್ತೀಚೆಗೆ ನಿಧನ ಹೊಂದಿದ ಕೇರಳದ ಮಹಾರಾಜ ಪದ್ಮನಾಭ್ ವರ್ಮ ಅವರು ಕೂಡ ನಮ್ಮ ಅಂಗಡಿಯ ಗ್ರಾಹಕರಾಗಿದ್ದರು. ನಟ ರವಿಚಂದ್ರನ್ ಅವರಂತೂ ಪೆನ್‌ ಖರೀದಿಸುವ ಜೊತೆಗೆ ಅವರ ಕಲೆಕ್ಷನ್‌ನಲ್ಲಿರುವ ಅಪರೂಪದ ದುಬಾರಿ ಪೆನ್ನುಗಳ ರಿಪೇರಿಗೂ ನಮ್ಮಲ್ಲಿಗೆ ಕಳಿಸುತ್ತಾರೆ" ಎನ್ನುತ್ತಾರೆ ಕುಮಾರ್.

ವೈವಿಧ್ಯಮಯ ಪೆನ್‌ಗಳ ಕಲೆಕ್ಷನ್‌

ಶೀಫರ್, ಪಾರ್ಕರ್, ಪೈಲಟ್, ಪೆಲಿಕಾನ್, ಕ್ರಾಸ್, ಪಿಯರೆ ಕಾರ್ಡಿನ್, ಫ್ಲೇರ್ ಮತ್ತು ಹೌಸರ್ ಇತರ ಬ್ರಾಂಡ್ಗಳ ವಿವಿಧ ಮಾದರಿಗಳ ಪೆನ್‌ಗಳು ಇಲ್ಲಿ ಲಭ್ಯವಿವೆ. ಪ್ರಪಂಚದಾದ್ಯಂತ ಮೊದಲ ತಲೆಮಾರಿನ ಫೌಂಟೇನ್ ಪೆನ್ ಕಂಪನಿಗಳಲ್ಲಿ ಒಂದೆಂದು ಪರಿಗಣಿಸಲಾದ ವಾಟರ್ಮ್ಯಾನ್ ಪೆನ್ಗಳನ್ನು ಸಹ ಇಲ್ಲಿ ಕಾಣಬಹುದು.

ಈ ಸ್ಟೋರ್‌ನಲ್ಲಿ 1950ರಿಂದ 2000 ರವರೆಗಿನ ಪೆನ್ನುಗಳ ಕಲೆಕ್ಷನ್ ಕಾಣಬಹುದು. ಇವುಗಳು ಮಾರಾಟಕ್ಕೂ ಲಭ್ಯವಿದೆ. 50 ರೂಪಾಯಿಗಳಿಂದ ಆರಂಭವಾಗುವ ಪೆನ್‌ಗಳಿಂದ 50,000 ರೂ. ಬೆಲೆಬಾಳುವ ಪೆನ್‌ಗಳನ್ನು ಈ ಅಂಗಡಿಯಲ್ಲಿ ಖರೀದಿಸಬಹುದು. ವಿವಿಧ ಗಾತ್ರಗಳು ಮತ್ತು ನಿಬ್‌ಗಳ ಕ್ಯಾಲಿಗ್ರಫಿ ಪೆನ್ನುಗಳು ಸಹ ಈ ಪೆನ್‌ ಸ್ಟೋರಿನಲ್ಲಿವೆ.

ಬೇಡಿಕೆಗೆ ತಕ್ಕಂತೆ ಪೆನ್‌ ತಯಾರಿ

ಪೆನ್ ಕಲೆಕ್ಷನ್‌ ಮಾಡುವರು, ಗ್ರಾಹಕರು ತಮಗೆ ಬೇಕಾದ ವಿನ್ಯಾದ ಪೆನ್‌ಗಾಗಿ ವಿನಂತಿ ಮಾಡಿದರೆ, ಅವರ ಬೇಡಿಕೆಗೆ ತಕ್ಕಂತೆ ಪೆನ್‌ಗಳನ್ನು ತಯಾರಿಸಿ ಕೊಡಲಾಗುವುದು. ಮತ್ತು ಮಾಂಟ್ ಬ್ಲಾಂಕ್ ಮತ್ತು ಕಾರ್ಟಿಯರ್ನಂತಹ ಐಷಾರಾಮಿ ಪೆನ್ನುಗಳ ಆರ್ಡರ್ಗಳನ್ನು ಸ್ವೀಕರಿಸುತ್ತೇವೆ ಎಂದೂ ಹೇಳುತ್ತಾರೆ ಕುಮಾರ್.

ಪೆನ್ನುಗಳ ದುರಸ್ತಿಯೂ ಉಂಟು

ಈ ಸ್ಟೋರ್‌ನಲ್ಲಿ ಕೇವಲ ಪೆನ್ನುಗಳ ಮಾರಾಟ ಮಾತ್ರವಲ್ಲ; ರಿಪೇರಿಯನ್ನು ಮಾಡಲಾಗುತ್ತದೆ. ಮುರಿದ ನಿಬ್‌ಗಳಿಂದ ಹಾನಿಗೊಳಗಾದ ಪೆನ್ ಬ್ಯಾರೆಲ್‌ಗಳವರೆಗೆ ಪೆನ್ನುಗಳ ಎಲ್ಲಾ ಬಿಡಿಭಾಗಗಳನ್ನು ರಿಪೇರಿ ಮಾಡಲಾಗುತ್ತದೆ. 100 ವರ್ಷ ಹಳೆಯ ಪೆನ್ನುಗಳ ಮೂಲ ಭಾಗಗಳನ್ನು ಹುಡುಕಿ ರಿಪೇರಿ ಮಾಡುವುದು, ಕಳೆದುಹೋದ ಅಥವಾ ಮುರಿದ ಕ್ಯಾಪ್ಗಳು, ನಿಬ್‌ಗಳನ್ನು ಬದಲಾಯಿಸಿಕೊಡುವುದು ಮುಂತಾದ ಕೆಲಸವನ್ನೂ ಕೂಡ ಈ ಅಂಗಡಿಯಲ್ಲಿ ಮಾಡಿಕೊಡುತ್ತಾರೆ.

ಕಂಪ್ಯೂಟರ್‌ ಕೀಲಿಮಣಿಗಳ ಮೇಲೆ, ಪೋನ್‌ ಸ್ಕ್ರೀನ್‌ ಮೇಲೆ ಅಕ್ಷರಗಳು ನಲಿದಾಡುವ ಕಾಲವಿದು. ನಾವೆಲ್ಲ 15 ವರ್ಷಗಳ ಕಾಲ ಹೇಗೆ ಬರೆಯಬೇಕು ಎನ್ನುವುದನ್ನು ಪೆನ್, ಪೆನ್ಸಿಲ್‌ಗಳ ಮೂಲಕ ಕಲಿತರೆ ಈಗಿನ ಜನರೇಶನ್‌ ಕಂಪ್ಯೂಟರ್‌, ಮೊಬೈಲ್‌ಗಳಲ್ಲಿ ಟೈಪಿಸುತ್ತಾರೆ. ಇಂತಹ ಸಮಯದಲ್ಲೂ ಕೈ ಬರಹ, ಪೆನ್ನು ಬಳಸುವ ವ್ಯಾಮೋಹವನ್ನು ಜನ ಇನ್ನೂ ಸಂಪೂರ್ಣವಾಗಿ ಬಿಟ್ಟಿಲ್ಲ ಎನ್ನುವುದಕ್ಕೆ ಈ ಪೆನ್‌ ಸ್ಟೋರ್‌ ಸಾಕ್ಷಿ.

Tags:    

Similar News