ಅಮೆರಿಕದಲ್ಲಿ ತೇಜಸ್ವಿ ಸೂರ್ಯ ಎಡವಟ್ಟು? ಸ್ಪಷ್ಟನೆಗೆ ಕಾಂಗ್ರೆಸ್ ಆಗ್ರಹ; ಪ್ರಧಾನಿಗೆ ಪತ್ರಕ್ಕೆ ನಿರ್ಧಾರ
ಬಿಜೆಪಿಯ ಯುವ ಸಂಸದರೊಬ್ಬರು ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯವಾಗಿ ಭೇಟಿಗೆ ಯತ್ನಿಸಿದ್ದು ನಾಚಿಕೆಗೇಡಿನ ಸಂಗತಿ. ಈ ವರದಿ ನಿಜವಾಗಿದ್ದರೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ," ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.;
ಆಪರೇಷನ್ ಸಿಂದೂರ್ ಉದ್ದೇಶ ಹಾಗೂ ಭಯೋತ್ಪಾದನೆ ವಿರುದ್ಧದ ಭಾರತದ ನಿಲುವನ್ನು ಸ್ಪಷ್ಟಪಡಿಸಲು ಅಮೆರಿಕಕ್ಕೆ ಕಳುಹಿಸಿದ್ದ ಭಾರತೀಯ ಸಂಸದರ ನಿಯೋಗದಲ್ಲಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುಳ್ಳು ಹೇಳಿ ಭೇಟಿ ಮಾಡಲು ಯತ್ನಿಸಿ ಮುಜುಗರ ಉಂಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ರಾಜತಾಂತ್ರಿಕ ಉಲ್ಲಂಘನೆ ಕುರಿತು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದಿಂದ ಸ್ಪಷ್ಟನೆ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಶಂಕರ್ ಗುಹಾ ದ್ವಾರಕಾನಾಥ್ ಒತ್ತಾಯಿಸಿದ್ದಾರೆ.
ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಬಿಜೆಪಿಯ ಯುವ ಸಂಸದರೊಬ್ಬರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಹಸ್ಯವಾಗಿ ಭೇಟಿಗೆ ಯತ್ನಿಸಿದ್ದು ನಾಚಿಕೆಗೇಡಿನ ಸಂಗತಿ. ಈ ವರದಿ ನಿಜವಾಗಿದ್ದರೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ," ಎಂದು ಅವರು ಹೇಳಿದ್ದಾರೆ.
"ರಾಜತಾಂತ್ರಿಕ ಶಿಷ್ಟಾಚಾರ ಮೀರಿ ಸಂಸದರೊಬ್ಬರು ಟ್ರಂಪ್ ಭೇಟಿಗೆ ಯತ್ನಿಸಿದ್ದು ಹೇಗೆ? ವಿದೇಶಾಂಗ ಸಚಿವಾಲಯಕ್ಕೆ ಇದರ ಬಗ್ಗೆ ತಿಳಿದಿತ್ತೇ? ಈ ವ್ಯಕ್ತಿ ಅಧಿಕೃತ ನಿಯೋಗದ ಭಾಗವಾಗಿದ್ದಾಗ ಇಂತಹ ಅಪ್ರಬುದ್ಧ ಕೃತ್ಯಕ್ಕೆ ಸಮರ್ಥನೆ ಏನು? ಈ ಬಿಜೆಪಿ ಸಂಸದ ಯಾರು ಮತ್ತು ಸರ್ಕಾರ ಈ ಉಲ್ಲಂಘನೆಯ ಬಗ್ಗೆ ಯಾವ ಕ್ರಮ ಕೈಗೊಂಡಿತು?" ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಧ ಫೆಡರಲ್ ಕರ್ನಾಟಕಕ ವಿವರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಶಂಕರ್ ಗುಹಾ ದ್ವಾರಕಾನಾಥ್ 'ದ ಫೆಡರಲ್ ಕರ್ನಾಟಕದ ಜತೆ ವಿಡಿಯೊ ಸಂದರ್ಶನ ನೀಡಿ, ತೇಜಸ್ವಿ ಸೂರ್ಯ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಯತ್ನಿಸಿದ್ದರು ಎಂದು ಹೇಳಿದ್ದಾರೆ.
ಟ್ರಂಪ್ ಭೇಟಿಗೆ ನಿರಾಕರಿಸಿದಾಗ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸಂದೇಶ ಕೊಡಲು ಬಂದಿದ್ದೇನೆ ಎಂದು ಸೂರ್ಯ ಸುಳ್ಳು ಹೇಳಿದ್ದಾರೆ. ಕೊನೆಗೆ, ಟ್ರಂಪ್ ಕಚೇರಿಯಿಂದ ಪ್ರಧಾನಮಂತ್ರಿಗಳ ಕಚೇರಿ ಸಂಪರ್ಕಿಸಿದಾಗ, ಇದು ಸುಳ್ಳು ಎಂದು ಗೊತ್ತಾಗಿದೆ ಎಂದು ದ್ವಾರ್ಕಾನಾಥ್ ವಿವರಿಸಿದ್ದಾರೆ. ನಂಬಲರ್ಹ ಮೂಲಗಳಿಂದ ತಮಗೆ ಈ ಮಾಹಿತಿ ಲಭ್ಯವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ತೇಜಸ್ವಿ ಸೂರ್ಯ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಕುರಿತು ಸ್ಪಷ್ಟನೆ ಕೋರಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲು ಕೆಪಿಸಿಸಿ ನಿರ್ಧರಿಸಿದೆ ಎಂದು ಡಾ. ಶಂಕರ್ ಗುಹಾ ದ್ವಾರ್ಕಾನಾಥ್ ಹೇಳಿದ್ದಾರೆ.