
ಸಚಿವ ಪ್ರಿಯಾಂಕ್ ಖರ್ಗೆ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಔಟ್ ಡೇಟೆಡ್ ವ್ಯಕ್ತಿ' ಎಂದು ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ವಿಜಯೇಂದ್ರ ಹಠವೋ ಬಣದಲ್ಲಿರುವ ಪ್ರತಾಪ್ ಸಿಂಹ ಮೊದಲು ತಮ್ಮ ಅಭಿಯಾನದಲ್ಲಿ ಯಶಸ್ವಿಯಾಗಿ, ತಮ್ಮ ಸಾಮರ್ಥ್ಯ ನಿರೂಪಿಸಿದ ನಂತರ ನನ್ನ ಬಗ್ಗೆ ಗಮನ ಕೊಡಲಿ ಎಂದು ಖರ್ಗೆ ಸವಾಲು ಹಾಕಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಾಪ್ ಸಿಂಹ ಅವರನ್ನು "ಔಟ್ ಡೇಟೆಡ್ ವ್ಯಕ್ತಿ" ಎಂದು ಕರೆದಿರುವ ಖರ್ಗೆ, ಸ್ವತಃ ಬಿಜೆಪಿಯಿಂದಲೇ ತಿರಸ್ಕೃತರಾಗಿರುವ ಪ್ರತಾಪ್ ಸಿಂಹ ತಮ್ಮ ಬಗ್ಗೆ ಮಾತನಾಡಿಕೊಳ್ಳುವ ಮೂಲಕ ರಾಜಕೀಯ ಮಾರುಕಟ್ಟೆ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, "ಔಟ್ ಡೇಟೆಡ್ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇರುವುದಿಲ್ಲ. ಸ್ವತಃ ಬಿಜೆಪಿಯಿಂದಲೇ ತಿರಸ್ಕೃತಗೊಂಡು ಬೆಲೆ ಕಳೆದುಕೊಂಡಿರುವ ಪ್ರತಾಪ್ ಸಿಂಹ ಎಂಬ ಔಟ್ ಡೇಟೆಡ್ ವ್ಯಕ್ತಿ ನನ್ನ ಬಗ್ಗೆ ಮಾತನಾಡುವ ಮೂಲಕ ಮಾರ್ಕೆಟ್ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ವಿಜಯೇಂದ್ರ ಹಠಾವೋ ಬಣದಲ್ಲಿರುವ ಪ್ರತಾಪ್ ಸಿಂಹ ಮೊದಲು ತಮ್ಮ ಅಭಿಯಾನದಲ್ಲಿ ಯಶಸ್ವಿಯಾಗಿ, ತಮ್ಮ ಸಾಮರ್ಥ್ಯ ನಿರೂಪಿಸಿದ ನಂತರ ನನ್ನ ಬಗ್ಗೆ ಗಮನ ಕೊಡಲಿ" ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಪ್ರತಾಪ್ ಸಿಂಹ ಅವರನ್ನು ಬಿಜೆಪಿ ಪಕ್ಷ ಟಿಕೆಟ್ ನೀಡದೆ ಮೂಲೆಗೆ ತಳ್ಳಿದ್ದೇಕೆ ಮತ್ತು ಯಾವುದೇ ಪ್ರಮುಖ ಹುದ್ದೆ ನೀಡದೆ ನಿರ್ಲಕ್ಷಿಸಿರುವುದೇಕೆ ಎಂದು ಪ್ರಶ್ನಿಸಿರುವ ಖರ್ಗೆ, "ಸಾಮರ್ಥ್ಯವಿಲ್ಲದ್ದಕ್ಕಾ? ಅರ್ಹತೆ ಇಲ್ಲದ್ದಕ್ಕಾ? ನರಿಗಳು ಸಿಂಹ ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಸಿಂಹ ಆಗಲು ಸಾಧ್ಯವಿಲ್ಲ" ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. "ನನ್ನ ಬಗ್ಗೆ ಮಾತನಾಡಲು ಗಂಭೀರ ವಿಷಯಗಳಿಲ್ಲದೆ ನನ್ನ ಹೆಸರಿನ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡರೆ ಒಳ್ಳೆಯದು" ಎಂದು ಪ್ರಿಯಾಂಕ್ ಖರ್ಗೆ, ಪ್ರತಾಪ್ ಸಿಂಹ ಅವರಿಗೆ ಸಲಹೆ ನೀಡಿದ್ದಾರೆ.