
ರಾಜ್ಯ ಸರ್ಕಾರದಿಂದ ಜನೌಷಧಿ ಕೇಂದ್ರಗಳ ಸ್ಥಗಿತ; ಕೇಂದ್ರಗಳ ಮಾಲಿಕರ ಸಭೆ ಕರೆದ ಸಂಸದ ತೇಜಸ್ವಿ ಸೂರ್ಯ
ಸರ್ಕಾರಿ ಆಸ್ವತ್ರೆಗಳ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ.
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ನಡುವಿನ ಹಗ್ಗ ಜಗ್ಗಾಟ ಮುಂದುವರಿದ ಪರಿಣಾಮ ಸರ್ಕಾರಿ ಆಸ್ವತ್ರೆಗಳ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ.
ಬಿಜೆಪಿಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ಸಂಜೆ ಜನೌಷಧಿ ಕೇಂದ್ರದ ಮಾಲೀಕರ ಸಭೆ ನಡೆಸಿದ್ದಾರೆ. ಆ ಮೂಲಕ ಬಿಜೆಪಿ ನೇರವಾಗಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಸಂಜೆ ಸಭೆ ಬಳಿಕ ಬಿಜೆಪಿ ಪಕ್ಷದ ವತಿಯಿಂದ ಹೋರಾಟ ನಡೆಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಬಿಜೆಪಿ ನಿರ್ಧರಿಸಿದೆ.
ಆರೋಗ್ಯ ಇಲಾಖೆ ಶನಿವಾರ ಆದೇಶವನ್ನು ಹೊರಡಿಸಿದ್ದು, "ಸರ್ಕಾರಿ ಆಸ್ಪತ್ರೆಗಳಲ್ಲಿ ಅಸ್ತಿತ್ವದಲ್ಲಿರುವ ಜನೌಷದಿ ಕೇಂದ್ರಗಳನ್ನು ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದ ನಿಯಮಗಳ (MOU) ಪ್ರಕಾರ ಸ್ವಗಿತಗೊಳಿಸಲು ಅಗತ್ಯ ಕ್ರಮವಹಿಸತಕ್ಕದ್ದು," ಎಂದು ಹೇಳಿತ್ತು. ಆದರೆ, ಸರ್ಕಾರಿ ಆಸ್ಪತ್ರೆಗಳ ಹೊರಗೆ ಇರುವ ಜನೌಷಧಿ ಕೇಂದ್ರಗಳು ಯಥಾ ಪ್ರಕಾರ ಮುಂದುವರಿಯಲಿದೆ ಎಂದು ಆದೇಶದಲ್ಲಿ ವಿವರಿಸಲಾಗಿತ್ತು.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಗಳ ಸ್ಥಗಿತಕ್ಕೆ ಸರ್ಕಾರ ಕಾರಣ ನೀಡಿದ್ದು," ಪ್ರಸ್ತುತ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ಔಷಧಿಗಳನ್ನು ಹೊರಗಿನಿಂದ ಖರೀದಿಸಲು ಶಿಫಾರಸ್ಸನ್ನು ಮಾಡದಂತೆ ನೋಡಿಕೊಳ್ಳುವುದು ಸರ್ಕಾರ ನೀತಿಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದೊಳಗೆ ಜನಔಷಧಿ ಕೇಂದ್ರಗಳನ್ನು ತೆರೆಯುವುದು ಸರ್ಕಾರದ ನೀತಿಗೆ ವ್ಯತಿರಿಕ್ತವಾಗುತ್ತದೆ," ಎಂದು ಸ್ಪಷ್ಟಪಡಿಸಿತ್ತು. ಈ ನಿರ್ಧಾರದಿಂದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಹಾಗೂ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮಾರು 200 ಜನೌಷಧಿ ಮಳಿಗೆಗಳಿದ್ದು, ಅವುಗಳು ಸ್ಥಗಿತಗೊಳ್ಳಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಈ ಸಂಬಂದ ಜನೌಷಧಿ ಕೇಂದ್ರಗಳ ಮಾಲಿಕರು ಸಂಸದ ತೇಜಸ್ವಿ ಸೂರ್ಯ ಅವರಿಗೆ ವಿವರ ನೀಡಲಿದ್ದಾರೆ.
ಪ್ರಮುಖವಾಗಿ ಪ್ರಸ್ತುತ ಜನೌಷಧಿ ಕೇಂದ್ರಗಳ ಸ್ಥಾಪನೆಗೆ 31 ಅರ್ಜಿಗಳು ಆರೋಗ್ಯ ಇಲಾಖೆ ಹಂತದಲ್ಲಿ ಬಾಕಿ ಇದ್ದು, ಅವುಗಳನ್ನು ತಿರಸ್ಕರಿಸಲು ಸರ್ಕಾರ ನಿರ್ದೇಶನ ನೀಡಿದೆ. ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ಔಷಧಿಗಳನ್ನು ಹೊರಗಿನಿಂದ ಖರೀದಿಸಲು ಶಿಫಾರಸ್ಸನ್ನು ಮಾಡದಂತೆ ನೋಡಿಕೊಳ್ಳುವುದು ಸರ್ಕಾರ ನೀತಿಯಾಗಿದೆ. ಇದರಿಂದಾಗಿ ಆಸ್ಪತ್ರೆ ಆವರಣದೊಳಗೆ ಜನಔಷಧಿ ಕೇಂದ್ರಗಳನ್ನು ತೆರೆದು ಔಷಧಿಯನ್ನು ಮಾರಾಟ ಮಾಡುವುದು ಸರ್ಕಾರದ ನೀತಿಗೆ ವ್ಯತಿರಿಕ್ತವಾಗುತ್ತದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ತಿಳಿಸಿದೆ.
ಆದರೆ, ನಿಜವಾದ ಪ್ರಮುಖ ಕಾರಣ ಜನೌಷಧಿ ಕೇಂದ್ರಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಚಿತ್ರಗಳಿದ್ದು ಅದರ ವಿರುದ್ಧವೇ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಜನೌಷಧಿ ಕೇಂದ್ರಗಳ ಜನಪ್ರಿಯತೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರದ ಮುಸುಕಿನ ಗುದ್ದಾಟ ಕಳೆದ ವರ್ಷದಿಂದ ಹೆಚ್ಚಾಗಿದ್ದು, ಈ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಇದು ಮತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ನಾಂದಿ ಹಾಡಲಿದೆ.
ಜನೌಷಧಿ ಕೇಂದ್ರಗಳನ್ನು ರಾಜ್ಯ ಸರ್ಕಾರಿ ಆಸ್ಪತ್ರೆಗಳ ಆವರಣದಿಂದ ಎತ್ತಂಗಡಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಕಳೆದ ವರ್ಷವೇ ಚಿಂತನೆ ನಡೆಸಿತ್ತು. ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದ ಜನರಿಕ್ ಔಷಧಿಗಳನ್ನು ರೋಗಿಗಳಿಗೆ ಮಾರಾಟ ಮಾಡಲಾಗುತ್ತಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ನೀಡುತ್ತಿರುವ ಕಾರಣ ಜನೌಷಧಿ ಕೇಂದ್ರಗಳ ಅಗತ್ಯ ಇಲ್ಲ ಎಂಬುದು ಸರ್ಕಾರದ ವಾದವಾಗಿತ್ತು. ಈ ಸಂಬಂಧ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಇದು 20 ಲಕ್ಷ ಮನೆಮಂದಿಗೆ ಸಿಗುವ ಅನುಕೂಲವನ್ನು ತಪ್ಪಿಸಿದಂತಾಗುತ್ತದೆ ಎಂದು ತನ್ನ ವಿರೋಧ ವ್ಯಕ್ತಪಡಿಸಿತ್ತು.