ತೆರಿಗೆ ಕಡಿತ ಜಾರಿ | ರಾಜ್ಯದಲ್ಲೂ ತೆರಿಗೆ ಇಳಿಸಲು ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

ರಾಜ್ಯ ಸರ್ಕಾರ ಕಳೆದ ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ಹೊಸ ತೆರಿಗೆಯನ್ನು ಜನರ ಮೇಲೆ ಹಾಕಿದೆ. ಈ ಅಪಖ್ಯಾತಿಯು ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಮೇಲಿದೆ. ತೆರಿಗೆ ಇಳಿಸುವ ಮೂಲಕ ಕಳಂಕ ತೊಳೆದುಕೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Update: 2025-09-22 06:02 GMT

ಬಸವರಾಜ್‌ ಬೊಮ್ಮಾಯಿ

ಜಿಎಸ್‌ಟಿ ಕಡಿತ ಇಂದಿನಿಂದ ಜಾರಿಯಾಗಿದ್ದು, ರಾಜ್ಯ ಸರ್ಕಾರ ಕೂಡ ಅಗತ್ಯ ವಸ್ತುಗಳ ಮೇಲೆ ಹಾಕಿರುವ ತೆರಿಗೆಯನ್ನು ಇಳಿಸಬೇಕು. ಪ್ರಧಾನಿ ಅವರಂತೆ ಸಿಎಂ ಸಿದ್ದರಾಮಯ್ಯ ಅವರು ಕೂಡ ದಸರಾ ಕೊಡುಗೆ ಘೋಷಿಸಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. 

ತೆರಿಗೆ ಇಳಿಸಲು ಆಗ್ರಹ

ಕರ್ನಾಟಕ ಸರ್ಕಾರ ಕಳೆದ ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ಹೊಸ ತೆರಿಗೆಯನ್ನು ಜನರ ಮೇಲೆ ಹಾಕಿದೆ. ಈ  ಅಪಖ್ಯಾತಿಯು ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅವರ ಮೇಲಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಪೆಟ್ರೊಲ್, ಮೋಟರು ವಾಹನ ತೆರಿಗೆ, ಮುದ್ರಾಂಕ ಶುಲ್ಕ, ಅಬಕಾರಿ ಶುಲ್ಕ ಹಾಕಿದೆ. ಇದರಿಂದ ಹಾಲು, ನೀರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿವೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀರು, ಗಾಳಿಯ ಮೇಲೂ ತೆರಿಗೆ ಹಾಕಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಕಸದ ಮೇಲೂ ವಿಶೇಷ ತೆರಿಗೆ ಹಾಕಲಾಗಿದೆ. ಇದೊಂದು ತೆರಿಗೆ ಭಾರದ ಜನ ವಿರೋಧಿ ಸರ್ಕಾರ ಎನ್ನುವುದು ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಾವು ಹಾಕಿರುವ ತೆರಿಗೆಗಳನ್ನು ಕಡಿಮೆ ಮಾಡುತ್ತಾರೆಯೇ ಎಂಬ ಪ್ರಶ್ನೆಯನ್ನು ರಾಜ್ಯದ ಜನ ಸಾಮಾನ್ಯರು ಕೇಳುತ್ತಿದ್ದಾರೆ. ಕೂಡಲೇ ತೆರಿಗೆಯನ್ನು ಇಳಿಸಿ ಎಂದು ಒತ್ತಾಯಿಸಿದ್ದಾರೆ. 

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬೊಮ್ಮಾಯಿ, 2017 ರಲ್ಲಿ ಪ್ರಾರಂಭವಾದ ಜಿಎಸ್‌ಟಿ ದಿಟ್ಟ ನಿರ್ಧಾರ. ಕೋವಿಡ್ ಸಂದರ್ಭದಲ್ಲಿಯೂ ಯಾವ ರಾಜ್ಯಕ್ಕೂ ತೊಂದರೆ ಆಗದಂತೆ ನೋಡಿಕೊಂಡಿರುವ ಶ್ರೇಯಸ್ಸು ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಈಗ ಆರ್ಥಿಕ ಸುಭದ್ರತೆಯ ಹಿನ್ನೆಲೆಯಲ್ಲಿ ಬಹಳಷ್ಟು ವಸ್ತುಗಳಿಗೆ ತೆರಿಗೆ ವಿನಾಯತಿ ನೀಡಿದ್ದಾರೆ. ಶೇ. 90 ರಷ್ಟು ವಸ್ತುಗಳ ಮೇಲಿನ ತೆರಿಗೆಯನ್ನು ಶೇ 5 ಕ್ಕೆ ಇಳಿಸಿದ್ದಾರೆ. ಕೆಲವು ವಸ್ತುಗಳಿಗೆ ಶೇ 18 ರಷ್ಟು ತೆರಿಗೆ ಮಾಡಿ, ಕೇವಲ ಎರಡೇ ಸ್ಲ್ಯಾಬ್ ಮಾಡಿ ತೆರಿಗೆ ಸರಳೀಕರಣ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.  

ರೈತರು ಬಳಕೆ ಮಾಡುವ ಟ್ರ್ಯಾಕ್ಟರ್, ಟ್ರೈಲರ್‌ ಮತ್ತು ಇತರ ಕೃಷಿ ಸಲಕರಣೆಗಳು, ಗೊಬ್ಬರ ಮೇಲಿನ ತೆರಿಗೆ ಕಡಿಮೆಯಾಗಿದೆ. ಜನ ಸಾಮಾನ್ಯರು ಬಳಕೆ ಮಾಡುವ ಮೊಸರು, ಹಾಲು, ತುಪ್ಪ ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ. ಇದು ನಿಜವಾಗಲೂ ಬಡವರ ಪರ ಸರ್ಕಾರ ಎನ್ನುವುದನ್ನು ತೋರಿಸಿದ್ದಾರೆ. ಇದಲ್ಲದೇ ಆರ್ಥಿಕತೆಗೆ ಎಲ್ಲ ರೀತಿಯ ಪ್ರೋತ್ಸಾಹ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಭಾರತ ಅತ್ಯಂತ ವೇಗದಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುವತ್ತ ಮುನ್ನಗ್ಗುತ್ತಿದೆ.  ಸರ್ಕಾರದ ಸುಧಾರಣಾ ಕ್ರಮಗಳಿಂದ 2 ಲಕ್ಷ ಕೋಟಿ ರೂ. ಜನರ ಬಳಿ ತೆರಿಗೆ ಹಣ ಉಳಿಯಲಿದೆ. ತೆರಿಗೆ ಸರಳೀಕರಣ ಮಾಡಿ ಇನ್ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್ ತೆಗೆದು ಹಾಕಿದ್ದಾರೆ. ನೇರವಾಗಿ ಎಲ್ಲ ಲಾಭವು ಸಣ್ಣ ಕೈಗಾರಿಕೆಗೆ ಸಿಗಲಿದೆ ಎಂದು ಹೇಳಿದ್ದಾರೆ.

Tags:    

Similar News