ಬಿ. ಸರೋಜಾ ದೇವಿ ಹೆಸರಲ್ಲಿ ಪ್ರಶಸ್ತಿ ಕೊಡಲು ತಾರಾ ಮನವಿ
ಸಂಕಷ್ಟದಲ್ಲಿರುವ ಕಲಾವಿದರನ್ನು ಸರ್ಕಾರ ಗುರುತಿಸಿ, ಅವರ ಹೆಸರಿನಲ್ಲಿ ಬಿ. ಸರೋಜಾ ದೇವಿ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕು ಎಂದು ಮನವಿ ತಾರಾ ಮನವಿ ಸಲ್ಲಿಸಿದ್ದಾರೆ.;
ಬಿ. ಸರೋಜಾ ದೇವಿ ಹೆಸರಲ್ಲಿ ಪ್ರಶಸ್ತಿ ಕೊಡಲು ತಾರಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಕನ್ನಡದ ಹಿರಿಯ ನಟಿ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ವಿಜೇತೆ ಬಿ. ಸರೋಜಾ ದೇವಿ, ಕೆಲವು ದಿನಗಳ ಹಿಂದೆ ನಿಧನ ಹೊಂದಿದ್ದು, ಅವರ ಹೆಸರಿನಲ್ಲಿ ಕಲಾವಿದರಿಗೆ ಪ್ರಶಸ್ತಿ ಕೊಡಬೇಕು ಎಂದು ಹಿರಿಯ ನಟಿ ತಾರಾ ಮತ್ತು ವಿಧಾನ ಪರಿಷತ್ತಿನ ಸದಸ್ಯೆ ತಾರಾ ಅನೂರಾಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಲವು ಸಾಧಕರ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ಪ್ರಶಸ್ತಿ ನೀಡುತ್ತಾ ಬಂದಿದೆ. ಡಾ. ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಮತ್ತು ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಗೌರವ ಪ್ರಶಸ್ತಿಗಳನ್ನು ನೀಡುವ ಜೊತೆಗೆ ಅತ್ಯುತ್ತಮ ನಟ ಪ್ರಶಸ್ತಿಗೆ ಕನ್ನಡದ ಮೊದಲ ನಾಯಕನಟ ಸುಬ್ಬಯ್ಯ ನಾಯ್ಡು ಅವರ ಹೆಸರನ್ನು ಇಡಲಾಗಿದೆ. ಹಾಗೆಯೇ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಕೆ.ಎಸ್. ಅಶ್ವತ್ಥ್ ಅವರ ಹೆಸರಿನಲ್ಲಿ ನೀಡಲಾಗುತ್ತಿದೆ.
ಈ ಎಲ್ಲಾ ಪ್ರಶಸ್ತಿಗಳ ಸಾಲಿಗೆ, ಕೆಲವು ವರ್ಷಗಳ ಹಿಂದೆ ನಿಧನರಾದ ಜಯಂತಿ ಅವರ ಹೆಸರಿನಲ್ಲೂ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಸರ್ಕಾರಿ ಆದೇಶವು ಹೊರಬಿದ್ದಿದೆ. ಕೆಲವು ತಿಂಗಳುಗಳ ಹಿಂದೆ ನಡೆದ ಜಯಂತಿ ಅವರ ಕುರಿತು ಹಿರಿಯ ಪತ್ರಕರ್ತ ಸದಾಶಿವ ಶೆಣೈ ವಿರಚಿತ ‘ಲವ್ಲಿ ಬಟ್ ಲೋನ್ಲಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಜಯಂತಿ ಅವರ ಹೆಸರಿನಲ್ಲಿ ಕೊಡುವುದಕ್ಕೆ ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ನಟಿ ತಾರಾ, ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿರುವ, ಸಂಕಷ್ಟದಲ್ಲಿರುವ ಕಲಾವಿದರನ್ನು ಸರ್ಕಾರ ಗುರುತಿಸಿ, ಅವರ ಹೆಸರಿನಲ್ಲಿ ಬಿ. ಸರೋಜಾ ದೇವಿ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿಗಳು ಸೂಕ್ತವವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಿಟ್ಟಿನಲ್ಲಿ ಬಿ. ಸರೋಜಾ ದೇವಿ ಅವರ ಹೆಸರಿನಲ್ಲಿ ಯಾವಾಗಿನಿಂದ ಪ್ರಶಸ್ತಿ ನೀಡಲಾಗುತ್ತದೆ ಎಂದು ಕಾದು ನೋಡಬೇಕಿದೆ.